ಕೊರಗಜ್ಜ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಖಾಸಗಿ ಆಸ್ತಿ ಮಾಲೀಕರಿಗಾಗಿ ರಸ್ತೆ ನಿರ್ಮಾಣ ಮಾಡದಂತೆ ಹೈಕೋರ್ಟ್‌ ತಡೆ

ಬಜಿರೆಯ ಬಾಡಾರುವಿನಲ್ಲಿ ಸರ್ವೆ ನಂಬರ್ 39/1ಎ ರಲ್ಲಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ 0.80 ಎಕರೆ ಸರ್ಕಾರಿ ಜಮೀನಿನಲ್ಲಿ ಪಕ್ಕದ ಖಾಸಗಿ ಆಸ್ತಿ ಮಾಲೀಕರ ಬಳಕೆಗೆ ರಸ್ತೆ ನಿರ್ಮಾಣ ಮಾಡದಂತೆ ಸರ್ಕಾರ, ಜಿಲ್ಲಾಡಳಿತಕ್ಕೆ ಹೈಕೋರ್ಟ್‌ ತಡೆ ನೀಡಿತು.
High Court of Karnataka
High Court of Karnataka
Published on

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಬಜಿರೆ ಗ್ರಾಮದ ಬಾಡಾರು ಪ್ರದೇಶದಲ್ಲಿ ಕೊರಗ ಕಲ್ಲು ಶ್ರೀಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ ಸರ್ಕಾರಿ ಜಾಗದಲ್ಲಿ ಖಾಸಗಿ ಆಸ್ತಿ ಮಾಲೀಕರಿಗಾಗಿ ರಸ್ತೆ ನಿರ್ಮಾಣ ಮಾಡದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ನೀಡಿದೆ.

ಬಜಿರೆ ಗ್ರಾಮದ ಕೊರಗ ಕಲ್ಲು ಶ್ರೀಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ಅರ್ಜಿ ಆಲಿಸಿದ ಪೀಠವು ಬಜಿರೆ ಗ್ರಾಮದ ಬಾಡಾರು ಪ್ರದೇಶದ ಸರ್ವೆ ನಂಬರ್ 39/1ಎ ರಲ್ಲಿ ಕೊರಗಜ್ಜ ದೈವಸ್ಥಾನಕ್ಕೆ ಸೇರಿದ 0.80 ಎಕರೆ ಸರ್ಕಾರಿ ಜಮೀನಿನಲ್ಲಿ ಪಕ್ಕದ ಖಾಸಗಿ ಆಸ್ತಿ ಮಾಲೀಕರ ಬಳಕೆಗೆ ರಸ್ತೆ ನಿರ್ಮಾಣ ಮಾಡದಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮಧ್ಯಂತರ ತಡೆ ನೀಡಿತು. ಅಲ್ಲದೇ, ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಕಂದಾಯ ಇಲಾಖೆ, ಮಂಗಳೂರು ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ, ಬೆಳ್ತಂಗಡಿ ತಹಶಿಲ್ದಾರ್ ಹಾಗೂ ಖಾಸಗಿ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು-ಮೂರ್ಜಿ ಜಿಲ್ಲಾ ಪಂಚಾಯತ್ ರಸ್ತೆಯ ಬದಿಯಲ್ಲಿ ಕೊರಗಜ್ಜ ದೈವದ ಸಾನಿಧ್ಯವು ಸುಮಾರು 400 ವರ್ಷಗಳಿಂದ ಇದೆ. ಇದು ಗ್ರಾಮದ ಸರ್ವೆ ನಂಬರ್ 39/1ಎ ರಲ್ಲಿ 0.80 ಎಕರೆ ಸರ್ಕಾರಿ ಜಾಗದಲ್ಲಿದ್ದು, ಸುತ್ತಲು ಕಲ್ಲಿನ ಕಂಬ ಹಾಗೂ ತಂತಿ ಹಾಕಲಾಗಿದೆ. ಏಳೆಂಟು ತಿಂಗಳ ಹಿಂದೆ ಕೊರಗಜ್ಜನ ಗುಡಿಯನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಜನರು ಮತ್ತು ಭಕ್ತಾದಿಗಳು ತಮ್ಮ ಸೇವಾ ಕೈಂಕರ್ಯಗಳನ್ನು ಸಲ್ಲಿಸಿಕೊಂಡು ಹೋಗುತ್ತಿದ್ದಾರೆ.

ಆದರೆ, ಈ ಜಾಗದ ಉತ್ತರ ದಿಕ್ಕಿನಲ್ಲಿ ಕೆಲವು ಖಾಸಗಿ ವ್ಯಕ್ತಿಗಳ ಜಮೀನು ಇದ್ದು, ಅದಕ್ಕೆ ದೈವಸ್ಥಾನದ ಮುಂಭಾಗದಿಂದ ಹಾದು ಹೋಗುವಂತೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಾದಲ್ಲಿ ದೈವಸ್ಥಾನದ ಕಾರ್ಯಚಟುವಟಿಕೆಗಳಿಗೆ ತೊಂದರೆ ಆಗಲಿದೆ. ಈ ಸಂಬಂಧ 2025ರ ಅಕ್ಟೋಬರ್‌ 30ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ, ನ್ಯಾಯಾಲಯದಿಂದ ನಿರ್ದೇಶನ ಕೋರಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com