ಕಟ್ಟಡ ನಿರ್ಮಿಸುವಾಗ ಕಾರ್ಮಿಕ ಮೃತಪಟ್ಟರೆ ಕಟ್ಟಡ ವಿನ್ಯಾಸ ಮಾಡಿದ ವಾಸ್ತುಶಿಲ್ಪ ಎಂಜಿನಿಯರ್ ಹೊಣೆಗಾರನಲ್ಲ: ಹೈಕೋರ್ಟ್‌

2020ರ ಅಕ್ಟೋಬರ್‌ 10ರಂದು ನಿವೇಶನದಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್ ಎಂಬ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದರು.
Justice M Nagaprasanna and Karnataka HC
Justice M Nagaprasanna and Karnataka HC

ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕ ಆಕಸ್ಮಿಕವಾಗಿ ಮೃತಪಟ್ಟರೆ ಅದಕ್ಕೆ ಕಟ್ಟಡ ವಿನ್ಯಾಸ ಮಾಡಿದ ವಾಸ್ತುಶಿಲ್ಪ (ಆರ್ಕಿಟೆಕ್ಟ್) ಎಂಜಿನಿಯರ್ ಹೊಣೆಗಾರನಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದ್ದು, ಬೆಂಗಳೂರಿನ ಎಂಜಿನಿಯರ್ ಒಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.

ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಆರ್ಕಿಟೆಕ್ಟ್ ಎಂಜಿನಿಯರ್ ವಿ ವಿಶ್ವಾಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಾನ್ಯ ಮಾಡಿದೆ.

ಆರ್ಕಿಟೆಕ್ಟ್ ಎಂಜಿನಿಯರ್ ಆಗಿರುವ ಅರ್ಜಿದಾರರು ಮನೆಯ ಕಟ್ಟಡದ ವಿನ್ಯಾಸ ಮಾಡಿ ಮನೆ ಮಾಲೀಕರಿಗೆ ಒಪ್ಪಿಸಿದ್ದಾರೆ. ಮಾಲೀಕರು ನಿರ್ಮಾಣ ಕಾಮಗಾರಿಯನ್ನು ಬೇರೊಬ್ಬ ಗುತ್ತಿಗೆದಾರನಿಗೆ ವಹಿಸಿದ್ದರು. ಆ ಗುತ್ತಿಗೆದಾರನ ಕೈಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಸ್ಪರ್ಶದಿಂದ ದುರದೃಷ್ಟವಶಾತ್ ಮೃತಪಟ್ಟಿದ್ದಾರೆ. ಆದರೆ, ಗುತ್ತಿಗೆದಾರನ ಅಧೀನದಲ್ಲಿ ಕೆಲಸ ಮಾಡುವ ಕಾರ್ಮಿಕ ಮೃತಪಟ್ಟರೆ, ಅದಕ್ಕೆ ಕಟ್ಟಡದ ವಿನ್ಯಾಸ ಮಾಡಿದ ಎಂಜಿನಿಯರ್ ಯಾವುದೇ ರೀತಿಯಲ್ಲೂ ಹೊಣೆಯಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಮಾಡಿರುವ ಕಟ್ಟಡದ ವಿನ್ಯಾಸ ಘಟನೆಗೆ ಕಾರಣ ಎನ್ನಲಾಗುವುದಿಲ್ಲ. ಆದ್ದರಿಂದ, ಅವರ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಆರೋಪ ಹೊರಿಸಲಾಗದು ಎಂದಿರುವ ಹೈಕೋರ್ಟ್, ವಿಶ್ವಾಸ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತದರ ಸಂಬಂಧ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ. ಜೊತೆಗೆ, ಈ ಆದೇಶ ಪ್ರಕರಣದ ಇತರ ಆರೋಪಿಗಳ ವಿರುದ್ಧದ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ನಂದಿನಿ ಲೇಔಟ್‌ನಲ್ಲಿ ನಿವೇಶನ ಹೊಂದಿರುವ ಚಂದ್ರಶೇಖರ್ ಎಂಬುವರು ಮನೆಯ ವಿನ್ಯಾಸ ಮಾಡಿಕೊಡುವಂತೆ ವಿಶ್ವಾಸ್ ಅವರನ್ನು ಕೋರಿದ್ದರು. ನಿವೇಶನಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ವಿಶ್ವಾಸ್, ಕಟ್ಟಡ ನಿರ್ಮಾಣಕ್ಕೆ ವಿನ್ಯಾಸ ರಚನೆ ಮಾಡಿ ಕೊಟ್ಟಿದ್ದರು. ಆ ವಿನ್ಯಾಸದ ಪ್ರಕಾರ ಕಟ್ಟಡ ನಿರ್ಮಾಣ ಕೆಲಸವನ್ನು ನಿವೇಶನದ ಮಾಲೀಕರು ಗುತ್ತಿಗೆದಾರನೊಬ್ಬನಿಗೆ ವಹಿಸಿದ್ದರು. 2020ರ ಅಕ್ಟೋಬರ್‌ 10ರಂದು ನಿವೇಶನದಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್ ಎಂಬ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದರು.

ಈ ವಿಚಾರ 2021ರ ಫೆಬ್ರವರಿಯಲ್ಲಿ ಮನೆ ಗೃಹ ಪ್ರವೇಶದ ವೇಳೆ ವಿಶ್ವಾಸ್‌ಗೆ ತಿಳಿದಿತ್ತು. 2022ರ ಫೆಬ್ರವರಿ 17ರಂದು ಘಟನೆ ಸಂಬಂಧ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ವಿಶ್ವಾಸ್ ಗಮನಕ್ಕೆ ಬಂದಿತ್ತು. ಗುತ್ತಿಗೆದಾರರನ್ನು ಮೊದಲ ಆರೋಪಿ, ಆರ್ಕಿಟೆಕ್ಟ್ ವಿಶ್ವಾಸ್ ಅವರನ್ನು ಎರಡನೇ ಆರೋಪಿ ಹಾಗೂ ನಿವೇಶನದ ಮಾಲೀಕರನ್ನು ಮೂರನೇ ಆರೋಪಿಯನ್ನಾಗಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಮಾಲೀಕ ಚಂದ್ರಶೇಖರ್ ಅವರನ್ನು ಕೈಬಿಟ್ಟು ಉಳಿದ ಆರೋಪಿಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ವಿಶ್ವಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ನ್ಯಾಯಾಲಯವು ವಿಶ್ವಾಸ್‌ ವಿರುದ್ಧದ ಪ್ರಕರಣದ ರದ್ದುಪಡಿಸಿದೆ.

Related Stories

No stories found.
Kannada Bar & Bench
kannada.barandbench.com