

ಉದ್ಯೋಗಿಯ ಜಾತಿ ಅರಿಯುವ ಅಧಿಕಾರ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.
ಕಾರವಾರದ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಳವಾರ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಾಗ ನ್ಯಾಯಾಲಯವು ಮೇಲಿನಂತೆ ಆದೇಶಿಸಿದೆ.
“ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ವ್ಯಾಪ್ತಿಯು ಉದ್ಯೋಗದಾತರಿಗೆ ಇಲ್ಲ. ಹಲವು ತೀರ್ಪುಗಳಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಈ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ನೆಲೆಯಲ್ಲಿ ಉದ್ಯೋಗದಾತರಿಗೆ ಆ ವ್ಯಾಪ್ತಿ ಇಲ್ಲ ಎಂಬ ಏಕೈಕ ಕಾರಣದ ಮೇಲೆ ಅರ್ಜಿ ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯ ಮೀಸಲಾತಿ ಇತ್ಯಾದಿ) ಕಾಯಿದೆ 1990ರ ಅಡಿ ಮಾತ್ರ ವ್ಯಕ್ತಿಯ ಜಾತಿ ಮಾಹಿತಿ ಕೇಳಬಹುದು. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಯಾವುದೇ ಉದ್ಯೋಗಿಯ ಜಾತಿ ವಿಚಾರಿಸುವ ಅಧಿಕಾರ ಹೊಂದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಹಿಂದುಳಿದ ವರ್ಗಗಳ ವಿಭಾಗದ ಅಡಿ ರಾಜು ತಳವಾರ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಆ ವೇಳೆ ಅವರ ಜಾತಿಯು ಒಬಿಸಿ- I ಅಡಿ ಬರುತ್ತಿತ್ತು. 2020ರ ಮಾರ್ಚ್ 20ರಂದು ರಾಜು ತಳವಾರ ಅವರನ್ನು ಕಾರವಾರಕ್ಕೆ ನಿಯೋಜಿಸಿದ್ದಾಗ ಪರಿಶಿಷ್ಟ ಪಂಗಡಗಳ ಆದೇಶಕ್ಕೆ ತಿದ್ದುಪಡಿ ಮಾಡಿ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು.
ಹೀಗಾಗಿ, 2022ರ ಅಕ್ಟೋಬರ್ 29ರಂದು ರಾಜ್ಯ ಸರ್ಕಾರವು ತಳವಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ತೆಗೆದು ಹಾಕಿತ್ತು. ಈ ಮಧ್ಯೆ, ರಾಜು ತಳವಾರ ಅವರು ಪರಿಶಿಷ್ಟ ಪಂಗಡ ಮೀಸಲಾತಿ ಅಡಿ ಬಡ್ತಿ ಕೋರಿದ್ದು, ಅವರಿಗೆ ಬಡ್ತಿ ಸಿಕ್ಕಿತ್ತು. ಈ ನಡುವೆ 2025ರ ಜನವರಿ 29ರಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯು ರಾಜು ತಳವಾರಗೆ ಹಿಂದುಳಿದ ವರ್ಗಗಳ ಅಡಿ ನೇಮಕವಾಗಿರುವುದಕ್ಕೆ ನೋಟಿಸ್ ಜಾರಿ ಮಾಡಿದ್ದರು. ಜಾತಿ ತಿಳಿಯುವ ವ್ಯಾಪ್ತಿ ಉದ್ಯೋಗದಾತರಿಗೆ ಇಲ್ಲ ಎಂದು ತಳವಾರ ಹೈಕೋರ್ಟ್ ಮೆಟ್ಟಿಲೇರಿದ್ದರು.