ಮೃತ ನೌಕರನ ತಾಯಿಯನ್ನು ಆರೈಕೆ ಮಾಡುವ ಸಹೋದರ ಕೂಡ ಅನುಕಂಪದ ಉದ್ಯೋಗಕ್ಕೆ ಅರ್ಹ: ಹೈಕೋರ್ಟ್‌

ಬಳ್ಳಾರಿ ವಿಭಾಗದ ಕೆಕೆಆರ್‌ಟಿಸಿ ಚಾಲಕನಾಗಿದ್ದ ಪುತ್ರ ವೀರೇಶ್‌ ಮಾಂತಪ್ಪ ಮತ್ತು ಆತನ ಪತ್ನಿ ಸಾವನ್ನಪ್ಪಿದ್ದು, ಅವರಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ತನ್ನ ಎರಡನೇ ಪುತ್ರ, ಮೃತ ನೌಕರನ ಸಹೋದರ ಸಂಗಣ್ಣಗೆ ಉದ್ಯೋಗ ನೀಡಲು ತಾಯಿ ಕೋರಿದ್ದರು.
Justice Suraj Govindraj
Justice Suraj Govindraj
Published on

ಸರ್ಕಾರಿ ನೌಕರನಿಗಿಂತಲೂ ಮೊದಲೇ ಆತನ ಪತ್ನಿ ನಿಧನರಾಗಿದ್ದು, ದಂಪತಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ಮೃತ ನೌಕರನ ತಾಯಿಯನ್ನು ಆರೈಕೆ ಮಾಡುತ್ತಿರುವ ಸಹೋದರನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.

ಬಳ್ಳಾರಿ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್‌ಟಿಸಿ) ಚಾಲಕನಾಗಿದ್ದ ತನ್ನ ಪುತ್ರ ವೀರೇಶ್‌ ಮಾಂತಪ್ಪ ಮತ್ತು ಆತನ ಪತ್ನಿ ಸಾವನ್ನಪ್ಪಿದ್ದು, ಅವರಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ತನ್ನ ಎರಡನೇ ಪುತ್ರ ಮೃತ ನೌಕರನ ಸಹೋದರ ಸಂಗಣ್ಣಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಆದೇಶಿಸುವಂತೆ ಕೋರಿ ತಾಯಿ ಮಾಂತವ್ವ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಸಂಗಣ್ಣಗೆ ಆತನ ಶೈಕ್ಷಣಿಕ ಅರ್ಹತೆಗೆ ಅನುಸಾರ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ವಿಚಾರವನ್ನು ಮೂರು ತಿಂಗಳಲ್ಲಿ ಪರಿಗಣಿಸಬೇಕು ಎಂದು ಕೆಕೆಆರ್‌ಟಿಸಿಗೆ ಪೀಠ ನಿರ್ದೇಶಿಸಿದೆ. ಹಾಗೆಯೇ, ಸಂಗಣ್ಣ ಒಂದೊಮ್ಮೆ ತಾಯಿಯನ್ನು ಆರೈಕೆ ಮಾಡದೆ ಹೋದರೆ ಈ ಆದೇಶವನ್ನು ರದ್ದುಪಡಿಸುವುದಕ್ಕೆ ಕೋರಲು ಆಕೆ (ತಾಯಿ ಮಾಂತವ್ವ) ಸ್ವತಂತ್ರರಾಗಿರುತ್ತಾರೆ ಎಂದು ಪೀಠ ಸ್ಪಷ್ಟಪಡಿಸಿದೆ.

ಸರ್ಕಾರಿ ನೌಕರನ ನಿಧನದ ನಂತರ ಆತನ ಕುಟುಂಬ ಸದಸ್ಯರು ಅರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಅನುಕಂಪದ ಆಧಾರದಲ್ಲಿ ಮೃತನ ನೌಕರನ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವುದರ ಮೂಲ ಉದ್ದೇಶ. ಈ ಪ್ರಕರಣದಲ್ಲಿ ನಿಗಮವು ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ನಿರಾಕರಿಸುತ್ತಿಲ್ಲ. ಆದರೆ, ಮೃತ ನೌಕರ ವೀರೇಶ್‌ ವಿವಾಹವಾಗಿರುವ ಕಾರಣದಿಂದ  ಆತನ ಸಹೋದರ ಸಂಗಣ್ಣಗೆ ಉದ್ಯೋಗ ನೀಡಲು ಅಡ್ಡಿಯಾಗಿದೆ ಎಂದು ಹೇಳುತ್ತಿರುವುದಾಗಿ ಆದೇಶದಲ್ಲಿ ವಿವರಿಸಿದೆ.

ವಾಸ್ತವದಲ್ಲಿ ಮಾಂತಪ್ಪ ಅವರ ಪತ್ನಿ ಸುನಂದ ಮೃತಪಟ್ಟಿದ್ದಾರೆ. ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಲು ದಂಪತಿಗೆ ಮಕ್ಕಳಿಲ್ಲ. ವೀರೇಶ್‌ ಅವರ ತಾಯಿ ಮತ್ತು ಸಹೋದರ ಒಟ್ಟಿಗೆ ಜೀವಿಸುತ್ತಿದ್ದಾರೆ. ಪತ್ನಿ ನಿಧನದ ನಂತರ ವೀರೇಶ್‌ ತನ್ನ ತಾಯಿ ಮತ್ತು ಸಹೋದರನನ್ನು ಆರೈಕೆ ಮಾಡುತ್ತಿದ್ದರು. ಸದ್ಯ ತಾಯಿಯನ್ನು ಸಹೋದರ ಸಂಗಣ್ಣ ಆರೈಕೆ ಮಾಡುತ್ತಿದ್ದಾರೆ. ಇದರಿಂದ ಆತನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವುದು ಸೂಕ್ತ. ಮೃತ ನೌಕರನ ಪತ್ನಿ ಸಾವನ್ನಪ್ಪಿದ್ದು, ಅವರಿಗೆ ಮಕ್ಕಳು ಇಲ್ಲ ಎಂಬ ಆಧಾರದಲ್ಲಿ ಆತನ ಕುಟುಂಬ ಸದಸ್ಯರಿಗೆ ಅನುಕಂಪದ ಉದ್ಯೋಗ ನಿರಾಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮೃತ ವೀರೇಶ್ ಮಾಂತಪ್ಪ ಅವರು 2008ರ ಮಾರ್ಚ್‌ 18ರಂದು ಕೆಕೆಆರ್‌ಟಿಸಿಯಲ್ಲಿ ಚಾಲಕ ಉದ್ಯೋಗಕ್ಕೆ ನೇಮಕಗೊಂಡಿದ್ದರು. ಅನಾರೋಗ್ಯದಿಂದ ಆತ 2023ರ ಸೆಪ್ಟೆಂಬರ್‌ 21ರಂದು ನಿಧನರಾಗಿದ್ದರು. ಅದಕ್ಕೂ ಮುನ್ನವೇ ವೀರೇಶ್‌ ಪತ್ನಿ ಸಹ ಸಾವನ್ನಪ್ಪಿದ್ದರು. ದಂಪತಿಗೆ ಮಕ್ಕಳು ಸಹ ಇರಲಿಲ್ಲ. ಮೃತ ನೌಕರನ ಸಾವನ್ನಪ್ಪಿದ ನಂತರ ಆತನ ತಾಯಿಯು ಕೆಕೆಆರ್‌ಟಿಸಿಗೆ ಅರ್ಜಿ ಸಲ್ಲಿಸಿ, ತನ್ನ ಎರಡನೇ ಪುತ್ರನಾದ ವೀರೇಶ್‌ ಸಹೋದರ ಸಂಗಣ್ಣಗೆ ಅನುಕಂಪದ ಉದ್ಯೋಗ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು 2024ರ ನವೆಂಬರ್‌ 4ರಂದು ತಿರಸ್ಕರಿಸಿ ನಿಗಮ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಮಾಂತವ್ವ ಮತ್ತು ಸಂಗಣ್ಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು, ವೀರೇಶ್‌ ಮಾಂತಪ್ಪ ಮದುವೆಯಾಗಿರುವುದು ನಿಜ. ಆತನ ಪತ್ನಿ ಸುನಂದ ಸಹ 2022ರ ಏಪ್ರಿಲ್‌ 9ರಂದು ಅಂದರೆ, ವೀರೇಶ್‌ ಸಾವನ್ನಪ್ಪುವ ಮುನ್ನವೇ ನಿಧನರಾಗಿದ್ದಾರೆ. ಅವರಿಗೆ ಮಕ್ಕಳು ಇರಲಿಲ್ಲ. ಮೃತ ವೀರೇಶ್‌ ಅವರು ತನ್ನ ತಾಯಿ ಮತ್ತು ಸಹೋದರನನ್ನು ಆರೈಕೆ ಮಾಡುತ್ತಿದ್ದರು. ಹೀಗಾಗಿ, ತಾಯಿಯೊಂದಿಗೆ ನೆಲೆಸಿರುವ ಮತ್ತು ಸದ್ಯ ತಾಯಿಯನ್ನು ಆರೈಕೆ ಮಾಡುತ್ತಿರುವ ಸಹೋದರ ಸಂಗಣ್ಣಗೆ ಅನುಕುಂಪದ ಆಧಾರದ ಮೇಲೆ ಉದ್ಯೋಗ ನೀಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ಕೆಕೆಆರ್‌ಟಿಸಿ ಪರ ವಕೀಲರು, ನಿಗಮದ ನಿಯಮದ ಪ್ರಕಾರ ಮೃತ ನೌಕರನು ವಿವಾಹವಾಗಿದ್ದರೆ, ಆತನ ಪತ್ನಿ ಅಥವಾ ಮಕ್ಕಳಿಗೆ ಹೊರತಾಗಿ ಮತ್ಯಾರಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ  ಆಕ್ಷೇಪಿಸಿದ್ದರು.

Attachment
PDF
Mantavva Vs DC
Preview
Kannada Bar & Bench
kannada.barandbench.com