ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ವಕೀಲರನ್ನು ನೇಮಿಸಿಕೊಳ್ಳಲು ಆರೋಪಿಗೆ ಕಾಲಾವಕಾಶ ನೀಡಬೇಕು: ಹೈಕೋರ್ಟ್‌

“ತುರ್ತು ವಿಚಾರಣೆ ಕಡ್ಡಾಯವಾಗಿದ್ದು, ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನಿರಾಕರಿಸುವುದು ಸಂವಿಧಾನದ 21ನೇ ವಿಧಿಯಡಿ ನ್ಯಾಯಯುತ ವಿಚಾರಣೆ ನಿರಾಕರಿಸುವುದಲ್ಲದೆ ಮತ್ತೇನೂ ಅಲ್ಲ” ಎಂದು ಪೀಠ ಹೇಳಿದೆ.
Justice K Natarajan and Karnataka HC
Justice K Natarajan and Karnataka HC

ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ ಪ್ರಕರಣದಲ್ಲಿ ಆರೋಪಿಗೆ ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನೀಡದೇ ಅವರನ್ನು ದೋಷಿ ಎಂದು ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಬದಿಗೆ ಸರಿಸಿದೆ.

ಬೆಂಗಳೂರಿನ ಹರೀಶ್‌ ಕುಮಾರ್‌ ಎ ಎಂಬವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದ್ದು, ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ವಿಚಾರಣಾಧೀನ ತ್ವರಿತಗತಿಯ ನ್ಯಾಯಾಲಯಕ್ಕೆ ಮರಳಿಸಿದೆ.

ಅಲ್ಲದೇ, ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಕಾನೂನಿನ ಅನ್ವಯ ಮುನ್ನಡೆಯಲು ಆರೋಪಿಗೆ ತನ್ನ ಪರವಾಗಿ ವಕೀಲರನ್ನು ನೇಮಿಸಿಕೊಳ್ಳಲು ಅನುಮತಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

“ತುರ್ತು ವಿಚಾರಣೆ ಕಡ್ಡಾಯವಾಗಿದ್ದು, ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನಿರಾಕರಿಸುವುದು ಸಂವಿಧಾನದ 21ನೇ ವಿಧಿಯಡಿ ನ್ಯಾಯಯುತ ವಿಚಾರಣೆ ನಿರಾಕರಿಸುವುದಲ್ಲದೇ ಮತ್ತೇನು ಅಲ್ಲ” ಎಂದು ಪೀಠ ಹೇಳಿದೆ.

“ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ಕಲ್ಪಿಸುವುದು ಮತ್ತು ಆರೋಪಿಗೆ ತನ್ನದೇ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸದೇ ಆರೋಪಿಯನ್ನು ದೋಷಿ ಎಂದು ಘೋಷಿಸಬಾರದಿತ್ತು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಕ್ರಿಮಿನಲ್‌ ನ್ಯಾಯದಾನ ಪ್ರಕ್ರಿಯೆಯಲ್ಲಿ ನ್ಯಾಯಯುತ ವಿಚಾರಣೆಯು ಪ್ರಮುಖ ಉದ್ದೇಶವಾಗಿದ್ದು, ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಅದನ್ನೇ ಖಾತರಿಪಡಿಸಲಾಗಿದೆ” ಎಂದಿರುವ ನ್ಯಾಯಾಲಯವು ಆರೋಪಿಯು ತನ್ನ ವಕೀಲರ ಮೂಲಕ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನೀಡುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಸಂತ್ರಸ್ತೆಯ ಕೈ ಹಿಡಿದು ಎಳೆದು, ಆಕೆಯ ಖಾಸಗಿ ಅಂಗಾಂಗಳನ್ನು ಸ್ಪರ್ಶಿಸಿದ್ದ ಆರೋಪವು ಆರೋಪಿಯ ಮೇಲಿದೆ. ಬಳಿಕ ಸ್ಥಳದಿಂದ ಓಡಲು ಯತ್ನಿಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಸಂತ್ರಸ್ತೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 12 ಮತ್ತು ಐಪಿಸಿ ಸೆಕ್ಷನ್‌ 354(ಎ) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿ ಹರೀಶ್‌ ಕುಮಾರ್‌ ಅವರ ವಿರುದ್ಧದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ 10 ಸಾಕ್ಷಿಗಳನ್ನು ಪರಿಶೀಲಿಸಿತ್ತು. ಆದರೆ, ಹರೀಶ್‌ ಕುಮಾರ್‌ ಅವರ ವಕೀಲರು ಗೈರಾಗಿ, ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಿರಲಿಲ್ಲ. ಅದಾಗ್ಯೂ, ಆರೋಪಿ ಹರೀಶ್‌ ಕುಮಾರ್‌ ಅವರನ್ನು ದೋಷಿ ಎಂದು ನ್ಯಾಯಾಲಯವು ತೀರ್ಪು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಹರೀಶ್‌ ಕುಮಾರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ. ಅರ್ಜಿದಾರರನ್ನು ವಕೀಲ ಎಚ್‌ ಕೆ ಪವನ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com