

ಹದಿನೇಳು ವರ್ಷದ ಹಿಂದೆ ಬೆಂಗಳೂರು ಮಹಾನಗರವನ್ನು ಬೆಚ್ಚಿ ಬೀಳಿಸಿದ್ದ ಐಐಎಸ್ಸಿಯ ನಿವೃತ್ತ ಪ್ರೊಫೆಸರ್ ಮತ್ತು ಖ್ಯಾತ ಗಣಿತಜ್ಞ ಪುರುಷೋತ್ತಮ ಲಾಲ್ ಸಚ್‌ದೇವ್, ಅವರ ಪತ್ನಿ ರೀಟಾ ಮತ್ತು ಪುತ್ರ ಮುನ್ನಾ ಅವರ ತ್ರಿವಳಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್ ಪಿ ಸಂದೇಶ್ ಮತ್ತು ಟಿ ವೆಂಕಟೇಶ್ ನಾಯಕ್ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
ಸುಚಿತ್ರಾ ಹಲ್ದಾರ್, ಆಕೆಯ ಪತಿ ದೀಪಕ್ ಹಲ್ದಾರ್, ಮೊಹಮ್ಮದ್ ಸರ್ಬಾಲ್ ಮತ್ತು ಬಿದನ್ ಶಿಕಾರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
“ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಇದು ಅಪರೂಪದಲ್ಲಿಅಪರೂಪ ಪ್ರಕರಣವಾಗುವುದಿಲ್ಲ. ಆದರೆ, ಆರೋಪಿಗಳು ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಕಂಟಕರಾಗಿದ್ದರು. ಹಣ ಹಾಗೂ ಚಿನ್ನಾಭರಣಗಳಿಗಾಗಿ ಮೂವರನ್ನು ಹತ್ಯೆ ಮಾಡಿರುವ ಅವರ ಕೃತ್ಯ ಸಮಾಜಕ್ಕೆ ದೊಡ್ಡ ಅಪಾಯ” ಎಂದು ನ್ಯಾಯಾಲಯ ಹೇಳಿದೆ.
“ಆರೋಪಿಗಳು ಮೂವರನ್ನು ಕತ್ತು ಹಿಸುಕಿ ಕೊಂದು ನಗದು, ಒಡವೆ ವಸ್ತುಗಳನ್ನು ದೋಚಿದ್ದಾರೆ. ಮೊದಲನೇ ಆರೋಪಿ ದೀಪಕ್ ಹಲ್ದಾರ್ ಮತ್ತು ಎರಡನೇ ಆರೋಪಿ ಸುಚಿತ್ರಾ ಹಲ್ದಾರ್ ಕೊಲೆಯಾದ ಮನೆಯಲ್ಲಿ ಮನೆಗೆಲಸದವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿ ಇತರೆ ಆರೋಪಿಗಳ ಜೊತೆ ಸೇರಿ ತ್ರಿವಳಿ ಕೊಲೆ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಘಟನಾವಳಿಯನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಆರೋಪಿಗಳನ್ನು ಖುಲಾಸೆಗೊಳಿಸಿ ವಿಚಾರಣಾಧೀನ ನ್ಯಾಯಾಲಯ 2016ರ ಫೆಬ್ರವರಿ 29ರಂದು ನೀಡಿದ್ದ ಆದೇಶವನ್ನು ಪೀಠ ರದ್ದುಗೊಳಿಸಿದೆ. ಐಪಿಸಿ ಸೆಕ್ಷನ್ 120ಬಿ, 302 ಮತ್ತು 201 ಹಾಗೂ ಸೆಕ್ಷನ್ 34ರಡಿ ನಾಲ್ವರನ್ನು ಅಪರಾಧಿಗಳು ಎಂದು ಸಾರಿ ಜೀವಾವಧಿ ಶಿಕ್ಷೆ ವಿಧಿಸಿದೆ. ಸದ್ಯ ಹೊರಗಿರುವ ನಾಲ್ವರು ಆರೋಪಿಗಳು ಎರಡು ವಾರಗಳಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಶರಣಾಗಬೇಕು. ಉಳಿದ ಅವಧಿಯ ಶಿಕ್ಷೆಯನ್ನು ಪೂರೈಸಲು ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಭಾರತೀಯ ವಿಜ್ಞಾನ ಕೇಂದ್ರದಲ್ಲಿ ನಿವೃತ್ತ ಪ್ರೊಫೆಸರ್ ಹಾಗೂ ಖ್ಯಾತ ಗಣಿತಶಾಸ್ತ್ರಜ್ಞರಾದ ಪುರುಷೋತ್ತಮ ಲಾಲ್ ಸಚ್‌ದೇವ್ (71), ಪತ್ನಿ ರೀಟಾ (62), ಪುತ್ರ ಮುನ್ನಾ (35) ಜೊತೆ ಆರ್ ಟಿ ನಗರದ 80 ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆ ಮನೆಗೆ ಕೆಲಸಕ್ಕೆ ಮೊದಲು ಸೇರಿದ ಸುಚಿತ್ರಾ, ನಂತರ ತನ್ನ ಪತಿಯನ್ನೂ ಕರೆ ತಂದಿದ್ದರು. ಇಬ್ಬರೂ ಔಟ್ ಹೌಸ್‌ನಲ್ಲಿಯೇ ನೆಲೆಸಿದ್ದರು. ಬಳಿಕ ಇತರೆ ಅಪರಾಧಿಗಳ ಜೊತೆ ಸೇರಿ ಸಂಚು ರೂಪಿಸಿ 2009ರ ಫೆಬ್ರವರಿ 16ರಂದು ಮೂವರನ್ನು ಕತ್ತು ಹಿಸುಕಿ ಕೊಂದು ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಆನಂತರ ತ್ರಿವಳಿ ಕೊಲೆಯ ಸಂಗತಿ ಬಯಲಾಗಿತ್ತು.
“ಇತ್ತೀಚಿನ ವರ್ಷಗಳಲ್ಲಿ ವಲಸೆ ಕಾರ್ಮಿಕರು ಮನೆಗೆಲಸದ ನೆಪದಲ್ಲಿ ಮನೆಗಳನ್ನು ಸೇರಿ ಅಪರಾಧ ಕೃತ್ಯಗಳಲ್ಲಿ ತೊಡಗುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಅವರ ಬಗ್ಗೆ ನಿಗಾ ಇಡಲು ವಲಸೆ ಕಾರ್ಮಿಕ ಮತ್ತು ಕ್ರಿಮಿನಲ್ ನಿಯಂತ್ರಣ ಕಾರ್ಯತಂತ್ರಗಳಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು” ಎಂದು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೇ, “ಬಹುತೇಕ ಪ್ರಕರಣಗಳಲ್ಲಿ ವಲಸೆ ಕಾರ್ಮಿಕರ ಹಿನ್ನೆಲೆ ಮತ್ತು ಅವರ ಗುರುತನ್ನು ಮನೆಗಳ ಮಾಲೀಕರು ಅಥವಾ ಉದ್ಯೋಗದಾತರು ಪರಿಶೀಲನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಕೆಲವು ವಲಸಗಿರು ಆಗಾಗ್ಗೆ ಅಪರಾಧ ಕೃತ್ಯಗಳನ್ನು ಮಾಡಿ ಪರಾರಿಯಾಗುತ್ತಾರೆ. ಇಂತಹ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಮಿಕ ಮತ್ತು ಅಪರಾಧ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ವಲಸೆ ಕಾರ್ಮಿಕರ ಹಿನ್ನೆಲೆಯನ್ನು ಪೊಲೀಸರು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು, ಅವರ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಮಾಡಬೇಕು, ಅದರ ಮಾಹಿತಿ ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಮಾಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದಲ್ಲಿ ವಲಸೆ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಮನೆಕೆಲಸದವರಾಗಿ ಸೇರಿ ಆನಂತರ ಪಿತೂರಿ ನಡೆಸಿ ಅಪರಾಧ ಎಸಗಿದ್ದಾರೆ. ಘಟನೆ ನಡೆದ 20 ತಿಂಗಳ ನಂತರ ಅವರ ಬಂಧನವಾಗಿದೆ. ಹೀಗಾಗಿ ವಲಸೆ ಕಾರ್ಮಿಕರ ನಿಯಮಗಳನ್ನು ಬಿಗಿಗೊಳಿಸಲು ಇದು ಸಕಾಲ. ಸರ್ಕಾರ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿ, ಆದೇಶದ ಪ್ರತಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುವಂತೆ ಸೂಚನೆ ನೀಡಿದೆ.