ವನ್ಯಜೀವಿ ತಜ್ಞ ಉಲ್ಲಾಸ್‌ರ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ ವಜಾಗೊಳಿಸಿದ್ದ ಕೇಂದ್ರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ನೋಂದಣಿ ಪತ್ರವನ್ನು ರದ್ದುಗೊಳಿಸುವುದಕ್ಕೂ ಮುನ್ನ ಪ್ರತಿವಾದಿಗಳ ಅಭಿಪ್ರಾಯ ಆಲಿಸಬೇಕು ಎಂಬುದಾಗಿ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಷೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ ಅವರ ಮನವಿ ಆಲಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
Justice M Nagaprasanna
Justice M Nagaprasanna
Published on

ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್‌ರ ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2010ರ ಅಡಿ ನೀಡಲಾಗಿದ್ದ ನೋಂದಣಿ ಪ್ರಮಾಣ ಪತ್ರವನ್ನು ಟ್ರಸ್ಟ್ ವಾದವನ್ನು ಆಲಿಸದೆ ವಜಾಗೊಳಿಸಿರುವ ಕೇಂದ್ರ ಗೃಹ ಇಲಾಖೆ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ.

ಟ್ರಸ್ಟ್ ಪರವಾಗಿ ಉಲ್ಲಾಸ್ ಕಾರಂತ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿತು.

ನೋಂದಣಿ ಪತ್ರವನ್ನು ರದ್ದುಗೊಳಿಸುವುದಕ್ಕೂ ಮುನ್ನ ಪ್ರತಿವಾದಿಗಳ ಅಭಿಪ್ರಾಯ ಆಲಿಸಬೇಕು ಎಂಬುದಾಗಿ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಷೋಕಾಸ್ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ ಅವರ ಮನವಿ ಆಲಿಸಬೇಕು ಎಂದು ಪೀಠ ತಿಳಿಸಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2020ರ ಸೆಕ್ಷನ್ 14(3)ರ ಪ್ರಕಾರ ಒಂದು ಬಾರಿ ನೋಂದಣಿ ಪತ್ರ ರದ್ದಾದರೆ ಮೂರು ವರ್ಷಗಳ ಕಾಲ ಅದನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಹೇಳಲಾಗಿದೆ. ಹೀಗಾಗಿ, ಇದು ಗಂಭೀರವಾದ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದ್ದರಿಂದ, ಸೆಕ್ಷನ್ 14(2)ರ ಪ್ರಕಾರ ಪ್ರತಿವಾದಿಗಳ ಅಭಿಪ್ರಾಯ ಆಲಿಸಬೇಕು ಎಂಬ ನೈಸರ್ಗಿಕ ನ್ಯಾಯದ ಅಂಶವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ವಾದ ಆಲಿಸದೆ ಮಾಡಿರುವ ಆದೇಶವು ಸಮರ್ಥನೀಯವಲ್ಲ ಎಂದು ತಿಳಿಸಿರುವ ನ್ಯಾಯಾಲಯವು ನೋಂದಣಿ ರದ್ದುಪಡಿಸಿರುವ ಕೇಂದ್ರ ಗೃಹ ಇಲಾಖೆ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ. ಆದರೆ, ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸ್ವಾತಂತ್ರ್ಯವಿರಲಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ ಸಂಸ್ಥೆಯು ವನ್ಯಜೀವಿಗಳು, ನೈಸರ್ಗಿಕ ಆವಾಸ ಸ್ಥಾನಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಶ್ರಮಿಸುತ್ತಿದೆ.

ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಪರಿಸರ ವ್ಯವಸ್ಥೆ ಮತ್ತು ಸಸ್ಯಗಳ ಪುನರ್ವಸತಿ ಯೋಜನೆ ಕೈಗೊಂಡಿದ್ದು, ಈ ಟ್ರಸ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಟ್ರಸ್ಟ್‌ನ ನಿರ್ವಹಣೆಗಾಗಿ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ 2010ರ ಅಡಿಯಲ್ಲಿ ನೋಂದಾಯಿಸಲಾಗಿದೆ.

ಆದರೆ, ಟ್ರಸ್ಟ್‌ಗೆ ಬರುವ ದೇಣಿಗೆಗಳನ್ನು ಸ್ವೀಕರಿಸುವುದು ಮತ್ತು ನಿರ್ವಹಣೆ ಮಾಡುವ ಸಲುವಾಗಿ ಪ್ರಾರಂಭಿಸಿದ್ದ ಬ್ಯಾಂಕ್ ಖಾತೆ ಬದಲಾವಣೆಗಾಗಿ ಅನುಮತಿ ಕೇಳಿ 2021ರಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಟ್ರಸ್ಟ್‌ಗೆ ಬರುತ್ತಿರುವ ದೇಣಿಗೆಯಲ್ಲಿ ಶೇ.20ರಷ್ಟು ಹಣವನ್ನು ಕಚೇರಿ ವೆಚ್ಚಗಳಿಗಾಗಿ ವಿನಿಯೋಗಿಸಲು ಪ್ರತ್ಯೇಕ ಖಾತೆ ನಿರ್ವಹಣೆ ಮಾಡುತ್ತಿರುವುದಾಗಿ ಟ್ರಸ್ಟ್ ತಿಳಿಸಿತ್ತು.

ಆದರೆ, ವಿದೇಶಿ ದೇಣಿಗೆ ದುರುಪಯೋಗದ ಆರೋಪದಲ್ಲಿ ಕೇಂದ್ರ ಸರ್ಕಾರ 2021ರ ಮಾರ್ಚ್ 21ರಂದು ಟ್ರಸ್ಟ್‌ನ್ನು ಆರು ತಿಂಗಳ ಅವಧಿಗೆ ಅಮಾನತ್ತು ಮಾಡಿ ಆದೇಶಿಸಿತ್ತು. ಈ ಆದೇಶಕ್ಕೆ ಪ್ರತಿಯಾಗಿ ಅರ್ಜಿದಾರರ ವಿವರವಾದ ಪ್ರತಿಕ್ರಿಯೆ ಸಲ್ಲಿಸಿದ್ದರು. ಬಳಿಕ ಕೇಂದ್ರ ಸರ್ಕಾರ ಟ್ರಸ್ಟ್‌ನ ನೋಂದಣಿಯನ್ನು ಏಕೆ ರದ್ದುಗೊಳಿಸಬಾರದು ಎಂದು ಕಾರಣ ಕೇಳಿ ಅರ್ಜಿದಾರ ಸಂಸ್ಥೆಗೆ ಷೊಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಕುರಿತು ಟ್ರಸ್ಟ್ ವಿವರವಾದ ಪ್ರತಿಕ್ರಿಯೆ ನೀಡಿದ್ದರೂ ಪರಿಗಣಿಸದೆ ಟ್ರಸ್ಟ್‌ನ ನೋಂದಣಿಯನ್ನು ರದ್ದುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಉದಯ್‌ ಹೊಳ್ಳ, ಕೇಂದ್ರ ಸರ್ಕಾರದ ಪರವಾಗಿ ಮಧುಕರ್‌ ದೇಶಪಾಂಡೆ ಮತ್ತು ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ವಾದಿಸಿದರು.

Attachment
PDF
Centre for Wildlife Studies Vs UoI.pdf
Preview
Kannada Bar & Bench
kannada.barandbench.com