

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶಿದೆ.
ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಸಿ ಮುನಿರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಇದೇವೇಳೆ ಪೀಠವು, ಮುನಿರಾಜು ಅವರನ್ನು ಜಯಶಾಲಿಯನ್ನಾಗಿ ಘೋಷಣೆ ಮಾಡಲು ನಿರಾಕರಿಸಿದ್ದು, ಆದೇಶವನ್ನು ಚುನಾವಣಾ ಆಯೋಗ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಲು ಸೂಚಿಸಿದೆ.
ಆದೇಶ ಪ್ರಕಟವಾಗುತ್ತಿದ್ದಂತೆ ಸುಬ್ಬಾರೆಡ್ಡಿ ಪರ ವಕೀಲರು, ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆಯಾಜ್ಞೆ ನೀಡಲು ಮನವಿ ಮಾಡಿದ್ದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಅಂತಿಮವಾಗಿ ಮನವಿಯನ್ನು ಪೀಠವು ತಿರಸ್ಕಿರಿಸಿತು.
ಪ್ರಕರಣದ ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಹಿನ್ನೆಲೆ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ 2023ರ ಮೇ 10ರಂದು ಚುನಾವಣೆ ನಡೆದಿತ್ತು. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್ ಎನ್ ಸುಬ್ಬಾರೆಡ್ಡಿ ಅವರು 82,128 ಮತಗಳನ್ನು ಪಡೆದು ಜಯಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಅಭ್ಯರ್ಥಿ ಸಿ ಮುನಿರಾಜು ಅವರು 62,949 ಮತಗಳನ್ನು ಪಡೆದಿದ್ದರು. ಅ ಮೂಲಕ ಸುಬ್ಬಾರೆಡ್ಡಿ ಅವರ ಎದುರು ಮುನಿರಾಜು 19,179 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಸುಬ್ಬಾರೆಡ್ಡಿಯ ಆಯ್ಕೆ ಪ್ರಶ್ನಿಸಿ ಸಿ ಮುನಿರಾಜು ಅವರು 2023ರ ಜೂ.24ರಂದು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಸುಬ್ಬಾರೆಡ್ಡಿ ಅವರು 2023ರ ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದಾಗ ಅಭ್ಯರ್ಥಿ ತನ್ನ ಪತ್ನಿ ಮತ್ತು ಅವಲಂಬಿತರಿಗೆ ಸೇರಿದ ಆಸ್ತಿಗಳು, ಹೊಣೆಗಾರಿಕೆಗಳ ವಿವರಗಳ ನೀಡಿ ಪ್ರಮಾಣ ಪತ್ರ ಸಲ್ಲಿಸಬೇಕಿರುತ್ತದೆ. ಬಾಂಡ್-ಶೇರ್‌ಗಳಲ್ಲಿ ಹೂಡಿಕೆ, ಸಾಲಪತ್ರಗಳು, ಕಂಪನಿಗಳು, ಮ್ಯೂಚುವಲ್ ಫಂಡ್, ವೈಯಕ್ತಿಕ ಸಾಲ ಸೇರಿದಂತೆ ಎಲ್ಲಾ ರೀತಿಯ ಹಣಕಾಸು ಮಾಹಿತಿ ನೀಡಬೇಕಿರುತ್ತದೆ.
ಆದರೆ, ಸುಬ್ಬಾರೆಡ್ಡಿ ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಆಸ್ತಿ, ಹೊಣೆಗಾರಿಕೆ, ಹೂಡಿಕೆ ಸೇರಿದಂತೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಅನೇಕ ಸಂಗತಿಗಳನ್ನು ಮುಚ್ಚಿಟ್ಟು; ಅಪೂರ್ಣ ಮಾಹಿತಿ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ. ಇದು ಚುನಾವಣಾ ಅಕ್ರಮದ ವ್ಯಾಪ್ತಿಗೆ ಬರಲಿದೆ. ಆದ್ದರಿಂದ ಸುಬ್ಬಾರೆಡ್ಡಿ ಆಯ್ಕೆಯನ್ನು ರದ್ದುಮಾಡಬೇಕು. ಎರಡನೇ ಅತಿ ಹೆಚ್ಚು ಮತ ಗಳಿಸಿರುವ ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದು ಮುನಿರಾಜು ಕೋರಿದ್ದರು. ಈ ಮನವಿಗೆ ಆಕ್ಷೇಪಣೆ ಸಲ್ಲಿಸಿದ್ದ ಸುಬ್ಬಾರಡ್ಡಿ ಅವರು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಹೈಕೋರ್ಟ್ ಮುನಿರಾಜು ಅವರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಸುಬ್ಬಾರೆಡ್ಡಿ ಅವರ ಆಯ್ಕೆ ಅಸಿಂಧುಗೊಳಿಸಿದೆ. ಆದರೆ, ಮುನಿರಾಜು ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಲು ನಿರಾಕರಿಸಿದೆ.