ಜೀವನದಲ್ಲಿ ನಿದ್ರೆ-ಕೆಲಸದ ನಡುವೆ ಸಮನ್ವಯ ಅಗತ್ಯ: ಪೇದೆ ಅಮಾನತು ಆದೇಶ ವಜಾಗೊಳಿಸಿದ ಹೈಕೋರ್ಟ್

“ನಿದ್ರೆ ಕೊರತೆಯಾದರೆ ಮನುಷ್ಯ ಎಲ್ಲಿಯಾದರೂ ನಿದ್ರೆಗೆ ಜಾರುತ್ತಾನೆ. ಹೀಗಾಗಿ, ನಿದ್ರೆ, ವಿರಾಮ, ಜೀವನದ ನಡುವಿನ ಸಮತೋಲನದ ಪ್ರಮುಖ ವಿಚಾರಗಳು ಎಂದು ಪರಿಗಣಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
Justice M Nagaprasanna and Karnataka HC's Dharwad Bench
Justice M Nagaprasanna and Karnataka HC's Dharwad Bench
Published on

ಕರ್ತವ್ಯ ನಿರ್ವಹಣೆ ವೇಳೆ ನಿದ್ರೆಗೆ ಜಾರಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿದ್ದ ನಿಗಮದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ರದ್ದುಪಡಿಸಿದೆ.

ಕೊಪ್ಪಳದ ಪೇದೆ ಚಂದ್ರಶೇಖರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಜೀವನದಲ್ಲಿ ಸಮತೋಲನ ಸಾಧಿಸಲು ಉದ್ಯೋಗಿಗಳಿಗೆ ಸರಿಯಾದ ನಿದ್ರೆ ಮತ್ತು ವೃತ್ತಿ ಬದುಕಿನ ನಡುವೆ ಸಮನ್ವಯ ಅವಶ್ಯ. ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಲು ಉದ್ಯೋಗಿಗೆ ಸೂಚಿಸಿದರೆ ದೇಹವು ಆ ಉದ್ಯೋಗಿಯನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ. ಇಂದಿನ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ನಿದ್ರೆ ಮತ್ತು ವೃತ್ತಿ ಬದುಕಿನ ನಡುವೆ ಸಮನ್ವಯ ಅಗತ್ಯ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಇಂದು ಪೊಲೀಸ್‌ ಪೇದೆ, ನಾಳೆ ಬೇರೆ ಯಾರೇ ಆದರೂ ನಿದ್ರೆ ಕೊರತೆಯಾದರೆ ಮನುಷ್ಯ ಎಲ್ಲಿಯಾದರೂ ನಿದ್ರೆಗೆ ಜಾರುತ್ತಾನೆ. ಹೀಗಾಗಿ, ನಿದ್ರೆ ಮತ್ತು ವಿರಾಮ ಕೆಲಸ ಮತ್ತು ಜೀವನದ ನಡುವಿನ ಸಮತೋಲನದ ಪ್ರಮುಖ ವಿಚಾರಗಳು ಎಂದು ಪರಿಗಣಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ನಿಗಮದ ಮೂರು ಕೆಎಸ್‌ಟಿ ಪೇದೆಗಳು ದಿನಕ್ಕೆ 8 ಗಂಟೆಯಷ್ಟೇ ಕರ್ತವ್ಯ ನಿರ್ವಹಿಸಬೇಕಿದೆ. ಮೂರು ಪೇದೆಗಳು ತಲಾ 8 ಗಂಟೆಯಂತೆ 24 ಗಂಟೆ ಕೆಲಸ ಮಾಡುತ್ತಾರೆ. ಹೆಚ್ಚಿನ ಕಾರ್ಯಭಾರ ಇರುವುದರಿಂದ ಚಂದ್ರಶೇಖರ್‌ ಅವರನ್ನು ಎರಡು ಪಾಳಿಯಲ್ಲಿ (16 ಗಂಟೆ) ನಿರಂತರವಾಗಿ 60 ದಿನಗಳವರೆಗೆ ವಿಶ್ರಾಂತಿ ನೀಡದೇ ಕೆಲಸ ಮಾಡಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಪ್ಪಂದಗಳು ಕೆಲಸ ಮತ್ತು ಜೀವನ ಸಮತೋಲನ ಗುರುತಿಸುತ್ತವೆ. ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ಕೆಲಸದ ಸಮಯವು ವಾರದಲ್ಲಿ 48 ಗಂಟೆ ಮತ್ತು ದಿನಕ್ಕೆ 8 ಗಂಟೆ ಮೀರಬಾರದು ಎಂದು ಹೇಳಲಾಗಿದೆ. ಯಾವುದೇ ಸಂಸ್ಥೆಯಲ್ಲಿ, ಪಾಳಿಯಲ್ಲಿ ಕೆಲಸ ಮಾಡುವ ನೌಕರರು ಕೆಲಸ ಮತ್ತು ಜೀವನ ಸಮತೋಲನವನ್ನು ಹೊಂದಿರಬೇಕು. ಆದ್ದರಿಂದ, ಪ್ರಕರಣದ ಅರ್ಜಿದಾರರು ಕರ್ತವ್ಯದ ಸಮಯದಲ್ಲಿ ನಿದ್ರಿಸುವುದರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಾಗದು. ಅರ್ಜಿದಾರ ಕರ್ತವ್ಯವು ಒಂದೇ ಪಾಳಿಗೆ ಸೀಮಿತವಾಗಿದ್ದರೆ, ಆಗ ಆತ ಕರ್ತವ್ಯದಲ್ಲಿರುವಾಗ ಮಲಗಿದ್ದರೆ, ನಿಸ್ಸಂದೇಹವಾಗಿ ದುಷ್ಕೃತ್ಯವಾಗುತ್ತದೆ. ಇಲ್ಲಿ ಚಂದ್ರಶೇಖರ್‌ ಅವರನ್ನು ಕರ್ತವ್ಯದಿಂದ ಅಮಾನತುಪಡಿಸಿದ ಆದೇಶ ಅಸಮರ್ಥನೀಯವಾಗಿರುವುದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ” ಎಂದಿದೆ.

“ತನ್ನ ಹೇಳಿಕೆಯಲ್ಲಿ ಚಂದ್ರಶೇಖರ್‌ ಅವರು ವೈದ್ಯರ ಸೂಚನೆಯಂತೆ ಔಷಧಿ ತೆಗೆದುಕೊಂಡಿದ್ದು, ನಿರಂತರವಾಗಿ ಎರಡು ಮತ್ತು ಮೂರನೇ ಪಾಳಿಯಲ್ಲಿದ್ದುದರಿಂದ ಹತ್ತು ನಿಮಿಷ ನಿದ್ರೆ ಮಾಡಿದ್ದೆ ಎಂದಿದ್ದರು. ಆದರೆ, ನಿಗಮವು ಕರ್ತವ್ಯದಲ್ಲಿದ್ದಾಗ ನಿದ್ರಿಸುವ ವೇಳೆ ಚಂದ್ರಶೇಖರ್‌ ಸಿಕ್ಕಿ ಬಿದ್ದಿದ್ದಾರೆ. ಚಂದ್ರಶೇಖರ್‌ ನಿದ್ರಿಸುತ್ತಿರುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡಲಾಗಿದೆ. ಇದರಿಂದ ನಿಗಮಕ್ಕೆ ಕೆಟ್ಟ ಹೆಸರು ಬಂದಿದ್ದು, ಚಂದ್ರಶೇಖರ್‌ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಸಮರ್ಥಿಸಿತ್ತು.

ವಿಚಕ್ಷಣಾ ವರದಿ ಪ್ರಕಾರ 2024ರ ಏಪ್ರಿಲ್‌ 23ರಂದು ಕರ್ತವ್ಯ ನಿರ್ವಹಣೆ ಅವಧಿಯಲ್ಲಿ ನಿದ್ರೆಗೆ ಜಾರಿದ್ದ ಚಂದ್ರಶೇಖರ್‌ ಅವರ ವಿಡಿಯೊ ವಾಟ್ಸ್‌ಆ್ಯಪ್‌ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಆಗಿತ್ತು. ಈ ಬಗ್ಗೆ ಸಕ್ಷಮ ಪ್ರಾಧಿಕಾರವು ಚಂದ್ರಶೇಖರ್‌ ಅವರಿಂದ ವಿವರಣೆ ದಾಖಲಿಸಿಕೊಂಡಿತ್ತು. ಕೇವಲ ಮೂರು ಮಂದಿ ಕೆಎಸ್‌ಟಿ ಪೇದೆಗಳು ಡಿಪೊನಲ್ಲಿದ್ದರು ಎಂದು ವಿಚಕ್ಷಣಾ ವಿಭಾಗ ವರದಿ ಸಲ್ಲಿಸಿತ್ತು. ಹಾಲಿ ಸಿಬ್ಬಂದಿಯ ಮೇಲೆ ಹೆಚ್ಚಿನ ಕಾರ್ಯಭಾರದ ಒತ್ತಡವಿದ್ದು, ಇನ್ನೂ ಇಬ್ಬರು ಪೇದೆಗಳನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿತ್ತು.

Kannada Bar & Bench
kannada.barandbench.com