Rahul Gandhi, Siddaramaiah and D K Shivakumar
Rahul Gandhi, Siddaramaiah and D K Shivakumar

ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ: ಕಾಂಗ್ರೆಸ್‌, ಡಿಕೆಶಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಎಸ್‌ ಕೇಶವ ಪ್ರಸಾದ್‌ ಸಲ್ಲಿಸಿರುವ ಖಾಸಗಿ ದೂರಿನ ಅನ್ವಯ ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Published on

ಬಿಜೆಪಿ ನೇತೃತ್ವದ ಈ ಹಿಂದಿನ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡುವ ಮೂಲಕ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನಹಾನಿ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್‌ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಎಸ್‌ ಕೇಶವ ಪ್ರಸಾದ್‌ ಸಲ್ಲಿಸಿರುವ ಖಾಸಗಿ ದೂರಿನ ಅನ್ವಯ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕಾಂಗ್ರೆಸ್‌ ಮತ್ತು ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಪ್ರಕರಣಕ್ಕೆ ತಡೆ ನೀಡಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.

ಡಿ ಕೆ ಶಿವಕುಮಾರ್‌ ಅವರನ್ನು ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಮತ್ತು ಸೂರ್ಯ ಮುಕುಂದರಾಜ್‌, ಕೆಪಿಸಿಸಿಯನ್ನು ವಕೀಲರಾದ ಎಸ್‌ ಎ ಅಹ್ಮದ್‌ ಮತ್ತು ಸಂಜಯ್‌ ಯಾದವ್‌ ಪ್ರತಿನಿಧಿಸಿದ್ದರು.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರವನ್ನು ಪ್ರಧಾನ ಅಸ್ತ್ರವಾಗಿಸಿದ್ದ ಕಾಂಗ್ರೆಸ್‌ 2023ರ ಮೇ 5ರಂದು ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರ ದರ ಪಟ್ಟಿ ಎಂಬ ಹೆಸರಿನ ಅಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿ ಜಾಹೀರಾತು ನೀಡಿತ್ತು. ಅಲ್ಲದೇ, ಕೋವಿಡ್‌ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಶೇ 25-30% ಕಮಿಷನ್‌ ಪಡೆಯಲಾಗುತ್ತಿದೆ. ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಕಮಿಷನ್ ನ (ಬಿಜೆಪಿ) ಸರ್ಕಾರವು ರೂ.1.5 ಲಕ್ಷ ಕೋಟಿಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಇದರ ವಿರುದ್ಧ ದೂರು ದಾಖಲಿಸಿದ್ದ ಬಿಜೆಪಿಯು, ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬದಲಾಗಿ ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಕಾಂಗ್ರೆಸ್‌ ಹಾನಿ ಮಾಡಿದೆ; ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ. ಕೊನೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಆರೋಪಿಗಳು ಕೇಳಿದ್ದಾರೆ. ಸುಳ್ಳು ಜಾಹೀರಾತು ನೀಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರು ನೇರ ಕಾರಣವಾಗಿದ್ದಾರೆ ಎಂದು ಆರೋಪಿಸಿತ್ತು.

Also Read
ಬಿಜೆಪಿ ವಿರುದ್ಧ ಶೇ.40 ಕಮಿಷನ್ ಆರೋಪ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ಗೆ ಜಾಮೀನು ಮಂಜೂರು

ರಾಹುಲ್‌ ಗಾಧಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಸುಳ್ಳು ಜಾಹೀರಾತನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿಗೆ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್‌, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿಯು ಖಾಸಗಿ ದೂರು ದಾಖಲಿಸಿತ್ತು.

ಈ ಪ್ರಕರಣದಲ್ಲಿ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಅವರು ಜಾಮೀನು ಪಡೆದುಕೊಂಡಿದ್ದಾರೆ. ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Kannada Bar & Bench
kannada.barandbench.com