
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರ ಘನತೆಗೆ ಚ್ಯುತಿ ಉಂಟು ಮಾಡುವ ಮಾತುಗಳನ್ನಾಡಿರುವ ಆರೋಪದ ಸಂಬಂಧ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ರನ್ಯಾ ಸಂಬಂಧಿ ಅಕುಲ ಅನುರಾಧಾ ನೀಡಿದ ದೂರಿನ ಅನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ನಿಗದಿಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.
ಯತ್ನಾಳ್ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ ಅವರು “ರನ್ಯಾ ಸಂಬಂಧಿ ಎಂದು ಅನುರಾಧಾ ದೂರು ನೀಡಿದ್ದಾರೆ. ಜೈಲಿನಲ್ಲಿರುವ ರನ್ಯಾಗೆ ಯತ್ನಾಳ್ ನೀಡಿರುವ ಹೇಳಿಕೆಯ ಬಗ್ಗೆ ಅರಿವಿಲ್ಲ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ವಿಡಿಯೋ ನೋಡುವುದರಿಂದ ದೂರಿನ ಅಂಶಗಳು ಬದಲಾಗುವುದಿಲ್ಲ. ಹೀಗಾಗಿ, ಬಿಎನ್‌ಎಸ್ ಸೆಕ್ಷನ್ 79 ಅನ್ವಯಿಸುವುದಿಲ್ಲ. ನಿಂದನೆಗೆ ಗುರಿಯಾಗಿರುವ ಮಹಿಳೆ ಅದನ್ನು ನೋಡಿರಬೇಕು, ಇಲ್ಲವೇ ಆಲಿಸಿರಬೇಕು ಎಂದು ಸೆಕ್ಷನ್ ಹೇಳುತ್ತದೆ. ದೂರಿನಲ್ಲಿ ಏನಿದೆ ಎಂಬುದನ್ನು ಆಧರಿಸಿ ಯತ್ನಾಳ್ ಅವರ ಕುರಿತು ನಿರ್ಧರಿಸಬೇಕೆ ವಿನಾ ನೈತಿಕ ತಳಹದಿಯ ಮೇಲಲ್ಲ” ಎಂದರು.
ದೂರುದಾರೆ ಅನುರಾಧಾ ಪ್ರತಿನಿಧಿಸಿದ್ದ ವಕೀಲ ವೈ ಎನ್ ಮಹೇಶ್ ಅವರು “ಶಾಸಕರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಯತ್ನಾಳ್ ಅವರು ಆಕ್ಷೇಪಾರ್ಹವಾದ ಹೇಳಿಕೆ ನೀಡುವುದಲ್ಲದೇ ಅದನ್ನು ಪುನರುಚ್ಚರಿಸಿದ್ದಾರೆ. ಸಾಂವಿಧಾನಿಕವಾಗಿ ಜವಾಬ್ದಾರಿಯುತ ಸ್ಥಾನಹೊಂದಿರುವ ಯತ್ನಾಳ್ ಅವರು ನೀಡಿರುವ ಹೇಳಿಕೆ ಸ್ವಾಗತಾರ್ಹವಲ್ಲ. ಪ್ರಕರಣ ತನಿಖಾ ಹಂತದಲ್ಲಿದೆ. ಮಾಧ್ಯಮಗಳ ವರದಿಯಲ್ಲಿ ರನ್ಯಾರ ಘನತೆಗೆ ಹಾನಿಯಾಗುವ ಹೇಳಿಕೆಯನ್ನು ಯತ್ನಾಳ್ ನೀಡಿದ್ದಾರೆ. ಆದರೆ, ಇಬ್ಬರು ಸಚಿವರ ಬಗ್ಗೆ ನೀಡಿರುವ ಹೇಳಿಕೆಯನ್ನು ಮಾತ್ರ ಯತ್ನಾಳ್ ಪರ ವಕೀಲರು ನ್ಯಾಯಾಲಯ ಮುಂದಿಟ್ಟಿದ್ದಾರೆ. ಹೀಗಾಗಿ, ಸದ್ಯಕ್ಕೆ ತಡೆಯಾಜ್ಞೆ ನೀಡಬಾರದು” ಎಂದು ಆಕ್ಷೇಪಿಸಿದರು.
“ಸುಪ್ರೀಂ ಕೋರ್ಟ್ ಎ ಆರ್ ಅಂತುಲೆ ಪ್ರಕರಣದಲ್ಲಿ ಸಂಬಂಧಿ ದೂರು ದಾಖಲಿಸಬಹುದು ಎಂದು ಹೇಳಿದೆ. ಜೈಲಿನಲ್ಲಿ ಪತ್ರಿಕೆಗಳು ಆರೋಪಿಗಳಿಗೆ ಲಭ್ಯವಿದೆ. ಮಾಧ್ಯಮಗಳೇ ಯತ್ನಾಳ್ ಅವರ ಹೇಳಿಕೆಯು ಆಕ್ಷೇಪಾರ್ಹ ಎಂದು ಹೇಳಿವೆ. ಪ್ರಕರಣದ ಕುರಿತು 30 ಸೆಕೆಂಡ್‌ಗಳ ವಿಡಿಯೋ ಬೆಳಕು ಚೆಲ್ಲುತ್ತದೆ. ಹೀಗಾಗಿ, ಮಧ್ಯಂತರ ತಡೆ ನೀಡಬಾರದು” ಎಂದರು.
ಪ್ರಕರಣದ ಹಿನ್ನೆಲೆ:
ಅಕುಲ ಅನುರಾಧ ಅವರು ಮಾರ್ಚ್ 18ರಂದು ನೀಡಿದ್ದ ದೂರಿನಲ್ಲಿ, "ಯತ್ನಾಳ್ ಅವರು ಹರ್ಷವರ್ಧಿನಿ ರನ್ಯಾ ರಾವ್ ಬಗ್ಗೆ 'ಆ ರನ್ಯನ್ ಜೋಡಿ ಯಾರ್ಯಾರ್ ಸಂಬಂಧ ಅದಾವೊ ಆಕೆಗೆ ಏನೇನ್ ಸೆಕ್ಯೂರಿಟಿ ಕೊಟ್ಟಾರೋ ಎಲ್ಲಾ ಮಾಹಿತಿ ತೊಗೊಂಡಿವಿ. ಗೋಲ್ಡ್ ಎಲ್ಲಿಂದ ತಂದ್ರು ಯಾವ್ಯಾವ್ ತೂತ್ ನಾಗ್ ಇಟ್ಕೊಂಡು ತಂದ್ರು ಎಲ್ಲಾನೂ ಹೇಳ್ತೀವಿ… ಮೈ ತುಂಬಾ ಆಕೆ ಬಂಗಾರ ಇಟ್ಕೊಂಡು ಬಂದಾಳ ಮತ್ತು ಎಲ್ಲೆಲ್ ತೂತ್ ಅದಾವೊ ಅಲ್ಲಿ ಇಡ್ಕೊಂಡು ಬಂದಾಳ' ಎಂದು ಬೇಜವಾಬ್ದಾರಿಯಿಂದ ಅಸಭ್ಯವಾಗಿ, ಲೈಂಗಿಕವಾಗಿ ಅವರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ ಎಂದು ವಿವರಿಸಿದ್ದರು.
ಮುಂದುವರಿದು, "ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿರುವ ರನ್ಯಾ ಗೌರವ ಸಂಪಾದಿಸಿದ್ದಾರೆ. ಆಕೆಯ ಗೌರವಕ್ಕೆ ಚ್ಯುತಿ ಮತ್ತು ಚಾರಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿರುವ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿವರಿಸಿದ್ದರು. ಇದನ್ನು ಆಧರಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಯತ್ನಾಳ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 79ರ ಅಡಿ ಪ್ರಕರಣ ದಾಖಲಿಸಿದ್ದಾರೆ.