ಪಿಡಿಒ ವಿರುದ್ಧದ ಪ್ರಕರಣಕ್ಕೆ ತಡೆ: ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ದುರ್ಬಳಕೆಗೆ ಉದಾಹರಣೆ ಎಂದ ಹೈಕೋರ್ಟ್‌

ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿಲ್ಲ. ದೂರುದಾರೆಯ ಕೊಠಡಿಗೆ ಹೋಗಿಲ್ಲ ಎಂಬ ಕಾರಣಕ್ಕೆ ಪಿಡಿಒ ರಶ್ಮಿ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಮಾಜಿ ಅಧ್ಯಕ್ಷೆ ಚಾಂದಿನಿ.
Karnataka High Court
Karnataka High Court
Published on

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗದ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಕೊಠಡಿಗೆ ಹೋಗುವುದಿಲ್ಲ ಎಂದು ಹೇಳಿರುವ ಆರೋಪದ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಶ್ಮಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ ಕಾಯಿದೆ) ಅಡಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಾಂದಿನಿ ನೀಡಿದ್ದ ದೂರು ಆಧರಿಸಿ ತಮ್ಮ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣಾ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಪಿಡಿಒ ರಶ್ಮಿ ಸಲ್ಲಿಸಿದ್ದ ಅರ್ಜಿಯ  ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ದೂರುದಾರೆಯ ಕೊಠಡಿಗೆ ಹೋಗಿಲ್ಲ ಎಂಬ ಕಾರಣಕ್ಕೆ ಪಿಡಿಒ ರಶ್ಮಿ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಜಾತಿ ನಿಂದನೆ ಮತ್ತು ಶಾಂತಿ ಕದಡಲು ಪ್ರಚೋದಿಸಿದ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಅಪರಾಧದಡಿ ಎಫ್‌ಐಆರ್‌ ದಾಖಲಾಗಿದೆ. ಅರ್ಜಿದಾರರು ವಿವಾದಿತ ದಿನದಂದು ನಡೆದ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ತಿಳಿಸಿ, ಆ ಕುರಿತ ಫೋಟೊಗಳನ್ನು ಸಲ್ಲಿಸಿದ್ದಾರೆ. ಎಸ್‌ಸಿ, ಎಸ್‌ಟಿ (ದೌರ್ಜನ್ಯ) ತಡೆ ಕಾಯ್ದೆಯ ದುರುಪಯೋಗಕ್ಕೆ ಈ ಪ್ರಕರಣವು ಮತ್ತೊಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಅರ್ಜಿದಾರರ ವಿರುದ್ದ ಎಫ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ತನಿಖೆಗೆ ತಡೆ ನೀಡಿದ ಪೀಠವು ಅರ್ಜಿ ಸಂಬಂಧ ದೊಡ್ಡಬಳ್ಳಾಪುರ ಗ್ರಾಮೀಣಾ ಠಾಣಾ ಪೊಲೀಸರಿಗೆ ಮತ್ತು ಪ್ರಕರಣ ದೂರುದಾರರಾದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಚಾಂದಿನಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಚಾಂದಿನಿ ಅವರು 2025ರ ನವೆಂಬರ್‌ 6ರಂದು ಪೊಲೀಸರಿಗೆ ದೂರು ನೀಡಿದ್ದರು. 2025ರ ಅಕ್ಟೋಬರ್‌ 31ರಂದು ಮಧ್ಯಾಹ್ನ 12 ಗಂಟೆಗೆ ನಾನು ಪಂಚಾಯಿತಿ ಆಡಳಿತ ಮಂಡಳಿ ತುರ್ತು ಸಭೆ ಆಯೋಜಿಸಿದ್ದೆ. ಸಭೆ ನಂತರ ಸಭೆಯ ನಡಾವಳಿಯ ಬಗ್ಗೆ ಚರ್ಚಿಸಲು ಪಿಡಿಒ ರಶ್ಮಿ ಅವರನ್ನು ನನ್ನ ಕೊಠಡಿಗೆ ಕರೆದಿದ್ದೆ. ಆಗ ರಶ್ಮಿ, ನಾನು ನಿನ್ನ ಕೊಠಡಿಗೆ ಏಕೆ ಬರಬೇಕು. ಬೇಕಾದರೆ ನೀನೇ ನನ್ನ ಕೊಠಡಿಗೆ ಬಾ. ಎಸ್ ಸಿ ಜನಾಂಗದ ಹೊಲೆಯಳಾದ ನಿನ್ನ ಕೊಠಡಿಗೆ ನಾನು ಬರುವುದಿಲ್ಲ ಎಂದು ಹೇಳಿದ್ದಾಗಿ ದೂರಿದ್ದರು.

ಮುಂದುವರೆದು, ಗ್ರಾಮ ಮಂಚಾಯಿತಿ ಸದಸ್ಯರಾದ ಪ್ರಭಾಕರ್‌, ವಾಲ್ಮೀಕಿ ಜಯಂತಿ ರಾಷ್ಟ್ರೀಯ ಹಬ್ಬದ ಆಚರಣೆ ಮಾಡಲು ಏಕೆ ಬಂದಿಲ್ಲ ಎಂದು ಕೇಳಿದರೆ, ಯಾವ ವಾಲ್ಮೀಕಿ, ಯಾವ ಜಯಂತಿ. ನನಗೇನು ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಆ ಮೂಲಕ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಹಾನ್‌ ದಾರ್ಶನಿಕ ವಾಲ್ಮೀಕಿ ಅವರನ್ನು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಚಾಂದಿನಿ ಆರೋಪಿಸಿದ್ದರು.

ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಅದರ ರದ್ದತಿಗೆ ಕೋರಿ ರಶ್ಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com