
ನಟ ಪ್ರಕಾಶ್ ರಾಜ್ ಮಹಾಕುಂಭ ಮೇಳದಲ್ಲಿ ಮಿಂದೆದ್ದಿದ್ದಾರೆ ಎಂಬುದಾಗಿ ಸುಳ್ಳು ಮಾಹಿತಿಯೊಂದಿಗೆ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧದ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ವಿಧಿಸಿದೆ.
ನಟ ಪ್ರಕಾಶ್ ರಾಜ್ ದೂರು ಆಧರಿಸಿ ಮೈಸೂರಿನ ಲಕ್ಷ್ಮೀಪುರಂ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಪ್ರಕರಣ ಕುರಿತ ಮೈಸೂರು 8ನೇ ಹೆಚ್ಚುವರಿ ಸಿವಿಲ್ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪ್ರಶಾಂತ್ ಸಂಬರಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.
ಮೈಸೂರಿನ ಲಕ್ಷ್ಮೀಪುರಂ ಠಾಣಾ ಪೊಲೀಸರು ಮತ್ತು ಪ್ರಕಾಶ್ ರಾಜ್‌ಗೆ ನೋಟಿಸ್ ಜಾರಿ ಮಾಡಿದ ಪೀಠವು ಮಾರ್ಚ್ 4ರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಮಧ್ಯಂತರ ಆದೇಶದ ತೆರವಿಗೆ ಮತ್ತು ತಿದ್ದುಪಡಿ ಕೋರಲು ದೂರುದಾರ ಪ್ರಕಾಶ್ ರಾಜ್ ಸ್ವತಂತ್ರರಾಗಿದ್ದಾರೆ ಎಂದು ಆದೇಶದಲ್ಲಿ ಪೀಠ ಸ್ಪಷ್ಟಪಡಿಸಿದೆ.
ಪ್ರಶಾಂತ್ ಸಂಬರಗಿ 2025ರ ಜ. 27ರಂದು ಫೇಸ್‌ಬುಕ್‌ನಲ್ಲಿ “ಪ್ರಕಾಶ್ ರಾಜ್ ನೀರಿನಲ್ಲಿ ಮುಳುಗಿ ನಮಸ್ಕರಿಸುತ್ತಿರುವ ಫೋಟೊ ಹಾಕಿ ನಟ ಪ್ರಕಾಶ್ ರಾಜ್ ಮಹಾಕುಂಭ ಮೇಳದಲ್ಲಿ ಮಿಂದೆದ್ದಿದ್ದಾರೆ. ಅವರ ಎಲ್ಲಾ ಪಾಪಗಳನ್ನು ಕ್ಷಮಿಸಲಾಗಿದೆ” ಎಂದು ಪೋಸ್ಟ್ ಮಾಡಿದ್ದರು.
ಇದರಿಂದ 2025ರ ಫೆಬ್ರವರಿ 1ರಂದು ಬೆಳಿಗ್ಗೆ 8 ಗಂಟೆಗೆ ಪ್ರಕಾಶ್ ರಾಜ್ ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಶಾಂತ್ ಸಂಬರಗಿ ಉದ್ದೇಶಪೂರ್ವಕವಾಗಿ ತಮ್ಮ ಹೆಸರು ಹಾಗೂ ಭಾವಚಿತ್ರ ಉಪಯೋಗಿಸಿಕೊಂಡು ಫೇಸ್‌ಬುಕ್‌ನಲ್ಲಿ ಸುಳ್ಳು ಶೀರ್ಷಿಕೆಯಡಿ ಪೋಸ್ಟ್ ಪ್ರಕಟಿಸಿದ್ದಾರೆ. ಇದರಿಂದ ತಮ್ಮ ಖ್ಯಾತಿಗೆ ಧಕ್ಕೆಯಾಗಿದೆ. ಆದ್ದರಿಂದ, ಸಂಬರಗಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು. ದೂರಿನ ಆಧಾರದಲ್ಲಿ ಸಂಬರಗಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಕೈಗೊಂಡಿದ್ದರು. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇದರಿಂದ ಸಂಬರಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.