ಪಾಸ್‌ಪೋರ್ಟ್ ಪಡೆಯಲು ನಕಲಿ ಸಹಿ: ಪ್ರಾಸಿಕ್ಯೂಷನ್‌ ಇಲಾಖೆ ನಿರ್ದೇಶಕಿ ಅಂಜಲಿ ದೇವಿ ವಿರುದ್ಧದ ಪ್ರಕರಣಕ್ಕೆ ತಡೆ

ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 204, 319(2), 336(3), 336(2), 340(2) ಅಡಿ ಪ್ರಕರಣ ಅಂಜಲಿ ದೇವಿ ವಿರುದ್ಧ ಅಂಜನಾ ಚವ್ಹಾಣ್‌ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.
Karnataka High Court
Karnataka High Court
Published on

ಪಾಸ್‌ಪೋರ್ಟ್‌ ಪಡೆಯಲು ದಾಖಲೆಗಳಿಗೆ ಸಹಿ ನಕಲು ಮತ್ತು ಕಚೇರಿಯ ಅಧಿಕೃತ ಮೊಹರು ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪ್ರಾಸಿಕ್ಯೂಷನ್‌ ಇಲಾಖೆಯ ನಿರ್ದೇಶಕಿ ಅಂಜಲಿ ದೇವಿ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದತಿ ಕೋರಿ ಅಂಜಲಿ ದೇವಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಇದನ್ನು ಆಲಿಸಿದ ಪೀಠವು ಆಕ್ಷೇಪಣೆ ಸಲ್ಲಿಸುವವರೆಗೆ ಅಂಜಲಿ ದೇವಿ ಅವರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲಾಗಿದೆ. ಆನಂತರ ಇಲಾಖಾ ಪದೋನ್ನತಿ ಸಮಿತಿಯು (ಡಿಪಿಸಿ) ಉಭಯ ಪಕ್ಷಕಾರ ಪ್ರಕರಣವನ್ನು ಪರಿಗಣಿಸಬಹುದು ಎಂದು ಹೇಳಿದ್ದು, ವಿಚಾರಣೆಯನ್ನು ಏಪ್ರಿಲ್‌ 22ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಪ್ರಕರಣ ದಾಖಲಿಸುವ ಮೂಲಕ ದೂರುದಾರೆಯು ತಮ್ಮ ಗುರಿ ಸಾಧಿಸಿದ್ದಾರೆ. ಅಂಜಲಿ ದೇವಿ ಅವರನ್ನು ಪ್ರಾಸಿಕ್ಯೂಷನ್‌ ಉಪನಿರ್ದೇಶಕರ ಹುದ್ದೆಯಿಂದ ತೆಗೆಯಲಾಗಿದ್ದು, ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯು ಹೊಸದಾಗಿ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆಸಲು ನಿರ್ದೇಶಿಸಿದೆ” ಎಂದು ತಿಳಿಸಿದರು.

ದೂರುದಾರೆ ಅಂಜನಾ ಚವ್ಹಾಣ್‌ ಪ್ರತಿನಿಧಿಸಿದ್ದ ವಕೀಲ ಸುನೀಲ್‌ ನಾರಾಯಣ್‌ ಅವರು ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಕೋರಿದರು.

ಪ್ರಕರಣದ ಹಿನ್ನೆಲೆ: ಅಂಜಲಿ ದೇವಿ ಅವರು ಸಮುಚಿತ ಕ್ರಮ ಮತ್ತು ಮಾರ್ಗದಲ್ಲಿ ಪಾಸ್‌ಪೋರ್ಟ್‌ ಪಡೆಯಲು ನಮೂನೆ ಸಲ್ಲಿಸಿದ್ದು, ಸದರಿ ಅರ್ಜಿ ವಿಲೇವಾರಿಯಾದೇ ಇರುವಾಗ್ಗೆ ಈ ಹಿಂದೆ ಸಲ್ಲಿಸುರುವ ಅರ್ಜಿ ವಿಲೇವಾರಿ ಆಗದೇ ಇರುವುದನ್ನು ಮರೆಮಾಚಿ ಪಾಸ್‌ಪೋರ್ಟ್‌ ಪಡೆಯಲು ಫಿರ್ಯಾದಿಯ ಸಹಿಯನ್ನು ನಕಲು ಮಾಡಿದ್ದಾರೆ. ಈ ಸೃಷ್ಟಿತ ದಾಖಲೆಯನ್ನು ಪರಿಶೀಲಿಸಲಾಗಿ ಅದು ನಕಲು ಎಂದು ಕಂಡುಬಂದಿದೆ. ಹೀಗಾಗಿ, ತನ್ನ ಪದನಾಮೆಯ ಮೊಹರು ದುರ್ಬಳಕೆಯಾಗಿದ್ದು, ಸದರಿ ದಾಖಲೆಗೆ ಸಹಿ ಮಾಡಬೇಕಾದ ಪ್ರಾಧಿಕಾರ ಸಹಿ ಮಾಡಿರುವುದಿಲ್ಲ. ಇದನ್ನು ಪಾಸ್‌ಪೋರ್ಟ್‌ ಅಧಿಕಾರಿಗೆ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅಂಜನಾ ಚವ್ಹಾಣ್‌ ಹಲಸೂರುಗೇಟ್‌ ಠಾಣೆಗೆ ದೂರು ನೀಡಿದ್ದರು.

ಇದನ್ನು ಆಧರಿಸಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 204, 319(2), 336(3), 336(2), 340(2) ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com