ರೋಹಿಣಿ ವಿರುದ್ಧ ರೂಪಾ ಹೂಡಿರುವ ಮಾನಹಾನಿ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ

“ರೋಹಿಣಿ ಅವರು ಮ್ಯಾಜಿಸ್ಟ್ರೇಟ್‌ ಅವರನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಉನ್ನತ ಸ್ಥಾನದಲ್ಲಿರುವವರು ನ್ಯಾಯಾಲಯದ ಪ್ರಕ್ರಿಯೆಯೆನ್ನು ದುರ್ಬಳಕೆ ಮಾಡಲು ಅನುಮತಿಸಬಾರದು” ಎಂದು ವಾದಿಸಿದ ಹಿರಿಯ ವಕೀಲ ಡಿ ಆರ್‌ ರವಿಶಂಕರ್.‌
IPS D Roopa and IAS Rohini Sindhuri and Karnataka HC
IPS D Roopa and IAS Rohini Sindhuri and Karnataka HC
Published on

“ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ತಿಮಿತ ಕಳೆದುಕೊಂಡಿರುವವರ ರೀತಿಯಲ್ಲಿ ಐಪಿಎಸ್‌ ಅಧಿಕಾರಿ ರೂಪಾ ವರ್ತಿಸುತ್ತಿದ್ದಾರೆ” ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿ ಡಿ ರೂಪಾ ಅವರು ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ.

ರೂಪಾ ಹೂಡಿರುವ ಮಾನಹಾನಿ ಪ್ರಕರಣದ ಸಂಬಂಧ ಜನವರಿ 13ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು ಮುಂದಿನ ವಿಚಾರಣೆವರೆಗೆ ವಿಚಾರಣಾಧೀನ ನ್ಯಾಯಾಲಯದಲ್ಲಿನ ಮಾನಹಾನಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಆದೇಶಿಸಿ, ವಿಚಾರಣೆಯನ್ನು ಮಾರ್ಚ್‌ ಎರಡನೇ ವಾರಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ರೋಹಿಣಿ ಪ್ರತಿನಿಧಿಸಿದ್ದ ವಕೀಲ ಬಿ ಎ ಬೆಳ್ಳಿಯಪ್ಪ ಅವರು “ರೂಪಾ ಅವರ ಮಾನಹಾನಿ ಹೇಳಿಕೆಗಳಿಗೆ ರೋಹಿಣಿ ಪ್ರತಿಕ್ರಿಯಿಸಿದ್ದಾರೆ. ಮ್ಯಾಜಿಸ್ಟ್ರೇಟ್‌ ಈ ಪ್ರಕರಣದಲ್ಲಿ ಆತುರಾತುರವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಮ್ಯಾಜಿಸ್ಟ್ರೇಟ್‌ ಕಾರ್ಯನಿರ್ವಹಣೆಗೆ ಆಕ್ಷೇಪಿಸಿ, ಪ್ರಕರಣವನ್ನು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಮಂಡಿಸುವಂತೆ ಮೆಮೊ ಸಲ್ಲಿದ್ದೇನೆ” ಎಂದರು.

ಇದಕ್ಕೆ ಆಕ್ಷೇಪಿಸಿದ ರೂಪಾ ಪರ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಪ್ರಕರಣದವನ್ನು ಒಮ್ಮತದ ಮೂಲಕ ಬಗೆಹರಿಸಿಕೊಳ್ಳಲು ರೂಪಾ ಸಿದ್ಧರಿದ್ದಾರೆ. ಸುಪ್ರೀಂ ಕೋರ್ಟ್‌ ಸಹ ಇದನ್ನೇ ಹೇಳಿತ್ತು. ರೋಹಿಣಿ ಒಪ್ಪದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದ ಅರ್ಜಿಯನ್ನು ಹಿಂಪಡೆದು, ಇಲ್ಲಿ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಇನ್ನು, ಮ್ಯಾಜಿಸ್ಟ್ರೇಟ್‌ ವಿವೇಚನೆ ಬಳಸಿಯೇ ಪ್ರಕರಣದ ಸಂಜ್ಞೇ ಪರಿಗಣಿಸಿದ್ದಾರೆ. ವಿನಾ ಕಾರಣ ಮ್ಯಾಜಿಸ್ಟ್ರೇಟ್‌ ಮೇಲೆ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ರೋಹಿಣಿ ಅವರ ಮ್ಯಾಜಿಸ್ಟ್ರೇಟ್‌ ಅವರನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಉನ್ನತ ಸ್ಥಾನದಲ್ಲಿರುವವರು ನ್ಯಾಯಾಲಯದ ಪ್ರಕ್ರಿಯೆಯೆನ್ನು ದುರ್ಬಳಕೆ ಮಾಡಲು ಅನುಮತಿಸಬಾರದು” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆ ವಿಧಿಸಲಾಗಿದೆ ಎಂದು ಆದೇಶಿಸಿತು.

Kannada Bar & Bench
kannada.barandbench.com