
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರನ್ಯಾ ಅವರ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ ಮಾಡಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆ ನೀಡಿದೆ. ಸದ್ಯ ರನ್ಯಾ ಅವರು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫಿಪೋಸಾ) ಅಡಿ ಕಂದಾಯ ಗುಪ್ತಚರ ನಿರ್ದೇಶನಾಲಯದ ವಶದಲ್ಲಿದ್ದಾರೆ.
ಹಣ ಅಕ್ರಮ ವರ್ಗಾವಣೆ ಕಾಯಿದೆ ಸೆಕ್ಷನ್ 5(1)ರ ಅಡಿ ಜಾರಿ ನಿರ್ದೇಶನಾಲಯವು 04.07.2025ರಂದು ಮಾಡಿರುವ ಜಫ್ತಿ ಆದೇಶವನ್ನು ವಜಾಗೊಳಿಸುವಂತೆ ಕೋರಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
“ಮೇಲ್ನೋಟಕ್ಕೆ ಆಕ್ಷೇಪಾರ್ಹವಾದ ಜಾರಿ ನಿರ್ದೇಶನಾಲಯದ ಜಪ್ತಿ ಆದೇಶವು ಅನುಸೂಚಿತ ಅಪರಾಧ (ಮೂಲ ಅಪರಾಧ) ವರದಿಯಾಗುವುದಕ್ಕೂ ಮುನ್ನ ಸಂಪಾದಿಸಿರುವ ಆಸ್ತಿಗಳನ್ನು ಒಳಗೊಂಡಿರುವುದರಿಂದ ಆದೇಶಕ್ಕೆ ಯಾವುದೇ ವ್ಯಾಪ್ತಿಯಿಲ್ಲ. ಪವನ ದಿಬ್ಬೂರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾನೂನು ರೂಪಿಸಿರುವುದರಿಂದ ಇದನ್ನು ಪರಿಗಣಿಸಬೇಕಿದೆ. ಹೀಗಾಗಿ, 4.07.2025ರ ಜಾರಿ ನಿರ್ದೇಶನಾಲಯದ ಜಫ್ತಿ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಚಿನ್ನ ಕಳ್ಳ ಸಾಗಣೆಗೆ ಸಂಬಂಧಿಸಿದ ಅನುಸೂಚಿತ ಅಪರಾಧವು 2025ರಲ್ಲಿ ನಡೆದಿದ್ದು, ಈ ಅಪರಾಧ ವರದಿಯಾಗುವುದಕ್ಕೂ ಮುನ್ನ ಸಂಪಾದಿಸಿರುವ ರನ್ಯಾ ಅವರ ಆಸ್ತಿಗಳನ್ನು ಜಪ್ತಿ ಮಾಡಲಾಗದು. ಇದಕ್ಕೆ ಪೂರಕವಾಗಿ ಪವನ ದಿಬ್ಬೂರ್ ವರ್ಸಸ್ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿದೆ. ಅಪರಾಧ ನಡೆಯುವುದಕ್ಕೂ ಮುನ್ನ ಸಂಪಾದಿಸಿರುವ ಆಸ್ತಿಗಳನ್ನು ಜಪ್ತಿ ಆದೇಶದಲ್ಲಿ ಸೇರಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ” ಎಂದರು.
ಪ್ರಕರಣದ ಹಿನ್ನೆಲೆ: ಮಾರ್ಚ್ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾರನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್ ಬ್ಯಾಗ್) ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್ ಅಡ್ಹೆಸಿವ್ ಬ್ಯಾಂಡೇಜ್ ಬಳಸಿ ಅಂಟಿಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್ ಕಾಯಿದೆ 1962ರ ಸೆಕ್ಷನ್ 135 (1)(a) ಮತ್ತು 135(1)(b) ಅಡಿ ಪ್ರಕರಣ ದಾಖಲಿಸಲಾಗಿದೆ.