ಅರಣ್ಯ ಭೂಮಿ ಒತ್ತುವರಿ: ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಅರಣ್ಯ ಭೂಮಿ ಒತ್ತುವರಿ ಆರೋಪದಲ್ಲಿ 2006ರಲ್ಲಿ ಕನಕಪುರ ವಲಯ ಅರಣ್ಯಾಧಿಕಾರಿ ದಾಖಲಿಸಿದ ಎಫ್ಐಆರ್, ಅದರ ಸಂಬಂಧ 2025ರಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಆರಂಭವಾಗಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ‌ ಹುಸೇನ್‌ ಕೋರಿದ್ದಾರೆ.
Ramanagar Congress MLA H A Iqbal Hussain & HC
Ramanagar Congress MLA H A Iqbal Hussain & HC
Published on

ಅರಣ್ಯ ಭೂಮಿ ಒತ್ತುವರಿ ಮಾಡಿದ ಆರೋಪದಲ್ಲಿ ರಾಮನಗರ‌ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಹತ್ತೊಂಬತ್ತು ವರ್ಷಗಳ ಹಿಂದೆ ದಾಖಲಾಗಿದ್ದ‌ ಪ್ರಕರಣ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ 2025ರಲ್ಲಿ‌ ಆರಂಭವಾಗಿರುವ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಅರಣ್ಯ ಭೂಮಿ ಒತ್ತುವರಿ ಮಾಡಿದ ಆರೋಪದಲ್ಲಿ 2006ರಲ್ಲಿ ಕನಕಪುರ ವಲಯ ಅರಣ್ಯಾಧಿಕಾರಿ ದಾಖಲಿಸಿದ ಎಫ್ಐಆರ್ ಹಾಗೂ ಅದರ ಸಂಬಂಧ 2025ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರಂಭವಾಗಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ‌ ಕೋರಿ ಶಾಸಕ ಎಚ್ ಎ ಇಕ್ಬಾಲ್ ಹುಸೇನ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಹತ್ತೊಂಬತ್ತು ವರ್ಷಗಳ ಹಿಂದಿನ ಆಧಾರರಹಿತ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. 2023ರಲ್ಲಿ ಅರ್ಜಿದಾರರು ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆ ಪ್ರಕರಣ‌ ಏಕಾಏಕಿ‌ ಜೀವ ಪಡೆದುಕೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಗೊಂಡು ವಿಚಾರಣಾ ಪ್ರಕ್ರಿಯೆ ಆರಂಭವಾಗಿದೆ” ಎಂದರು.

ವಾದ ಆಲಿಸಿದ‌ ಪೀಠವು ಪ್ರಕರಣಕ್ಕೆ ತಡೆ ನೀಡಿತು. ಅಲ್ಲದೆ, ಪ್ರತಿವಾದಿ ವಲಯ ಅರಣ್ಯಾಧಿಕಾರಿಗೆ ನೋಟಿಸ್ ‌ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿತು.

Kannada Bar & Bench
kannada.barandbench.com