

ಅರಣ್ಯ ಉತ್ಪನ್ನಗಳ ಸಾಗಣೆ ಪರವಾನಿಗೆ ಶುಲ್ಕವನ್ನು ಒಂದು ಆರ್ಥಿಕ ವರ್ಷದಲ್ಲಿ ₹10 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಹೊಡಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಆಲ್ ಕೇರಳ ಸಾಮಿಲ್ ಆ್ಯಂಡ್ ವುಡ್ ಇಂಡಸ್ಟ್ರೀಸ್ ಓನರ್ಸ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಇದೇ ವಿಚಾರವಾಗಿ ದಿ ಫೆಡರೇಷನ್ ಆಫ್ ಕರ್ನಾಟಕ ಟಿಂಬರ್ ಮರ್ಚಂಟ್ಸ್ ಆ್ಯಂಡ್ ಸಾಮಿಲ್ಲರ್ಸ್ ಸಲ್ಲಿಸಿರುವ ಅರ್ಜಿಯಲ್ಲಿ ಕರ್ನಾಟಕ ಸರ್ಕಾರದ ಆದೇಶಕ್ಕೆ ಈಗಾಗಲೇ ಮಧ್ಯಂತರ ತಡೆ ನೀಡಿದೆ. ಈ ಅರ್ಜಿಯಲ್ಲೂ ಆ ಆದೇಶ ಅನ್ವಯವಾಗಲಿದೆ ಎಂದು ಹೇಳಿ ಮಧ್ಯಂತರ ತಡೆ ನೀಡಿತು. ಅಲ್ಲದೇ ಅರ್ಜಿ ಸಂಬಂಧ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಕರ್ನಾಟಕ ಅರಣ್ಯ ಅಧಿನಿಯಮ 1969ರ ನಿಯಮ 53ರಡಿ ಪರವಾನಿಗೆ ಶುಲ್ಕ ಪರಿಷ್ಕರಿಸಿ 2023ರ ನವೆಂಬರ್ 17 ಹಾಗೂ 2024ರ ಏಪ್ರಿಲ್ 1ರಂದು ಹೊರಡಿಸಲಾಗಿರುವ ಅಧಿಸೂಚನೆಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. 2013ರಿಂದ ಇಲ್ಲಿವರೆಗೆ ಆಗಿರುವ ಶುಲ್ಕ ಪರಿಷ್ಕರಣೆ 200 ಪಟ್ಟು ಹೆಚ್ಚಾಗಿದೆ. ಇದು ಟಿಂಬರ್ ಉದ್ದಿಮೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ದರಿಂದ, ಅಧಿಸೂಚನೆಗಳನ್ನು ರದ್ದುಪಡಿಸಬೇಕು. ಅರ್ಜಿದಾರ ಸಂಸ್ಥೆಯ ಸದಸ್ಯರಿಂದ ವಸೂಲಿ ಮಾಡಿರುವ ಶುಲ್ಕವನ್ನು ಮರುಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.