ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ

ಧಾರವಾಡ ತಾಲ್ಲೂಕಿನ ಮುಗದ ಗ್ರಾಮದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಬಸವರಾಜ ಹೊರಟ್ಟಿ ಅವರ ನಾಮಫಲಕ ತೆಗೆಯಲು ತಿಳಿಸಿದ್ದು ಗಲಾಟೆಗೆ ಕಾರಣವಾಗಿದೆ.
Karnataka HC and Basavaraj Horatti

Karnataka HC and Basavaraj Horatti

Published on

ಜಾತಿ ನಿಂದನೆ ಆರೋಪದ ಪ್ರಕರಣದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಜಾತಿನಿಂದನೆ ಆರೋಪ ಸಂಬಂಧ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಘಟನೆ ನಡೆದ ಸ್ಥಳದಲ್ಲಿ ಅರ್ಜಿದಾರರು ಇರಲಿಲ್ಲ. ಎಫ್‌ಐಆರ್‌ನಲ್ಲಿಯೂ ಅವರ ವಿರುದ್ಧ ಗಂಭೀರ ವಿಚಾರಗಳು ಇಲ್ಲ. ಅರ್ಜಿದಾರರು ವಿಧಾನ ಪರಿಷತ್ ಸಭಾಪತಿಯಾಗಿದ್ದು, ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಕರಣವನ್ನು ನ್ಯಾಯಾಲಯ ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಈ ಹಂತದಲ್ಲಿ ತಡೆ ನೀಡಬಹುದಾಗಿದೆ ಎಂದ ಪೀಠವು ಹೊರಟ್ಟಿ ಅವರ ವಿರುದ್ಧದ ವಿಚಾರಣೆಗೆ ಸೀಮಿತವಾಗಿ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿತು.

Also Read
ಬಿಟ್‌ ಕಾಯಿನ್‌ ಹಗರಣ: ನೆದರ್‌ಲ್ಯಾಂಡ್‌ಗೆ ತೆರಳಲು ಅನುಮತಿ ಕೋರಿ ಹೈಕೋರ್ಟ್‌ ಕದತಟ್ಟಿದ ಶ್ರೀಕಿ ಸಹೋದರ

ಅಲ್ಲದೇ, ಪ್ರಕರಣದಲ್ಲಿ ಉಳಿದವರ ವಿರುದ್ಧ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಇದೇ ವೇಳೆ ಪೀಠವು ಸ್ಪಷ್ಟಪಡಿಸಿದೆ. ಹಾಗೆಯೇ, ಪ್ರಕರಣದ ದೂರುದಾರರಿಗೆ ತುರ್ತು ನೋಟಿಸ್ ಹಾಗೂ ರಾಜ್ಯ ಸರ್ಕಾರ ಸೇರಿ ಉಳಿದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ಧಾರವಾಡ ತಾಲ್ಲೂಕಿನ ಮುಗದ ಗ್ರಾಮದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್‌ಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಬಸವರಾಜ ಹೊರಟ್ಟಿ ಅವರ ನಾಮಫಲಕ ತೆಗೆಯಲು ತಿಳಿಸಿದ್ದು ಗಲಾಟೆಗೆ ಕಾರಣವಾಗಿತ್ತು. ವಾಲ್ಮೀಕಿ ಸಂಘದ ಪದಾಧಿಕಾರಿಗಳ ಕಾರಿನ ಮೇಲೆ ಹೊರಟ್ಟಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವಾಲ್ಮೀಕಿ ಸಂಘದ ಜಿಲ್ಲಾ ಅಧ್ಯಕ್ಷ ಮೋಹನ ಗುಡಸಲಮನಿ ಆರೋಪಿಸಿದ್ದರು. ಹೊರಟ್ಟಿ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ.

Kannada Bar & Bench
kannada.barandbench.com