ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸಹೋದರ ಸೇರಿ ಮೂವರ ವಿರುದ್ಧದ ತನಿಖೆಗೆ ಹೈಕೋರ್ಟ್‌ನಿಂದ ತಡೆ; ಬಿಡುಗಡೆಗೆ ಆದೇಶ

ಲೋಕಸಭಾ ಟಿಕೆಟ್‌ ಕೊಡಿಸಲು ಚೆಕ್‌ ಮೂಲಕ ₹25 ಲಕ್ಷ ಹಣವನ್ನು ಅರ್ಜಿದಾರರಾದ ಗೋಪಾಲ್ ಜೋಶಿ ಪಡೆದಿರುವುದನ್ನು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆನಂತರ ₹1.75 ಕೋಟಿ ಕೈ ಸಾಲ ಪಡೆಯಲಾಗಿದೆ ಎನ್ನುವ ಮಾಹಿತಿ ನೀಡಿದರು.
BJP
BJP
Published on

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ₹2 ಕೋಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸಹೋದರ ಗೋಪಾಲ ಜೋಶಿ ಮತ್ತಿತರರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಪೊಲೀಸ್‌ ಕಸ್ಟಡಿಯಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಹುಬ್ಬಳ್ಳಿಯ ಗೋಪಾಲ ಜೋಶಿ ಮತ್ತು ಅಜಯ್‌ ಜೋಶಿ ಹಾಗೂ ಬೆಂಗಳೂರಿನ ವಿಜಯಲಕ್ಷ್ಮಿ ಜೋಶಿ ಎಸ್‌ ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna
Justice M Nagaprasanna

“ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಿಸಲು ₹25 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದು ಚುನಾವಣೆಗೂ ಮುನ್ನ ನಡೆದಿರುವ ಘಟನೆ. ಟಿಕೆಟ್‌ ಸಿಗದೇ ಇದ್ದುದು ಗೊತ್ತಾದ ನಂತರ ಸುನೀತಾ ಚವ್ಹಾಣ್‌ ದೂರು ದಾಖಲಿಸಬಹುದಿತ್ತು. ಆದರೆ, ಆರು ತಿಂಗಳ ಬಳಿಕ 2024 ಅಕ್ಟೋಬರ್‌ 17ರಂದು ದೂರು ದಾಖಲಿಸಲಾಗಿದೆ. ಈ ನಡುವೆ, ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ಆರೋಪಿಗಳು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ, ಇದು ಹಣದ ವಿವಾದವಾಗಿದೆ. ಇದಕ್ಕೆ ಈಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯಿದೆ ಬಣ್ಣ ನೀಡಲಾಗಿದೆ. ಅರ್ಜಿದಾರರ ಮನೆಯಲ್ಲಿ ಜಾತಿ ನಿಂದನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದು ನಾಲ್ಕು ಗೋಡೆಗಳ ನಡುವೆ ನಡೆದಿರುವ ಘಟನೆ. ಅದು ಸಾರ್ವಜನಿಕ ಸ್ಥಳವಲ್ಲ. ಹೀಗಾಗಿ, ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(1) ಆರ್‌ ‍ಮತ್ತು ಎಸ್‌ ಅಡಿ ಅಪರಾಧವಾಗುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಹೀಗಾಗಿ, “ಮುಂದಿನ ಪ್ರಕ್ರಿಯೆ/ತನಿಖೆಗೆ ಅನುಮತಿಸುವುದು ಲಲಿತ್‌ ಚತುರ್ವೇದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಲಾಗಿದೆ. ತನಿಖೆ ಹಾಗೂ ದೂರಿನ ಆಧಾರದಲ್ಲಿ ಆನಂತರ ಕೈಗೊಂಡಿರುವ ಎಲ್ಲಾ ಕ್ರಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮುನ್ನ, ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು “ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಈಡೇರಿಸುವ ಆಶ್ವಾಸನೆಗಳನ್ನು ಆರೋಪಿಗಳು ನೀಡಿರಲಿಲ್ಲ. ತನಿಖಾ ವರದಿಯನ್ನು ನೋಡಿ. ಕೃತ್ಯಕ್ಕೆ ಕೇಂದ್ರ ಸಚಿವರ ಕಚೇರಿಯನ್ನು ಬಳಕೆ ಮಾಡಲಾಗಿದೆ. ತನಿಖೆಯ ಸಂದರ್ಭದಲ್ಲಿ ಕೆಲವು ವಿಡಿಯೋ ಮತ್ತು ಆಡಿಯೋಗಳು ಲಭ್ಯವಾಗಿವೆ. ಹಣ ಕೇಳಿದಾಗ ಆರೋಪಿಗಳು ಜಾತಿ ಹೆಸರಿಡಿದು ನಿಂದನೆ ಮಾಡಿದ್ದಾರೆ. ಆರೋಪಿಗಳು ಒಬ್ಬೇ ಒಬ್ಬ ವ್ಯಕ್ತಿಯಿಂದ ಮಾತ್ರ ಹಣ ಸಂಗ್ರಹಿಸಿಲ್ಲ” ಎಂದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಅರ್ಜಿದಾರರು ಹಣ ಹಿಂದಿರುಗಿಸಲು ಸಿದ್ಧರಿದ್ದಾರೆ. 2024ರ ಮಾರ್ಚ್‌ನಲ್ಲಿ ಲೋಕಸಭಾ ಟಿಕೆಟ್‌ ಪಡೆಯಲು ಚೆಕ್‌ ಮೂಲಕ ₹25 ಲಕ್ಷ ನೀಡಲಾಗಿದೆ. ಆಂತರ ₹1.75 ಕೋಟಿ ಕೈ ಸಾಲ ಪಡೆಯಲಾಗಿದೆ. ಇದಕ್ಕೆ ಮೂರನೇ ಆರೋಪಿ ಅಜಯ್‌ ಜೋಶಿ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ” ಎಂದರು.

ಈ ನಡುವೆ, ಪೀಠವು “ಹಣ ಕೊಡಲು ದೂರುದಾರರಿಗೆ ಹೇಳಿದವರಾರು? ಸಿವಿಲ್‌ ದಾವೆ ಹೂಡಿ, ಹಣ ಪಡೆದುಕೊಳ್ಳಬಹುದು. ಆರೋಪಿಗಳು ಹಣ ಪಡೆದಿರುವುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ, ಇದು ಸಿವಿಲ್‌ ಪ್ರಕರಣ. ಇದು ಸಿವಿಲ್‌ ನ್ಯಾಯಾಲಯಕ್ಕೆ ಹೋಗಬೇಕು. ದೂರುದಾರರು ರಾಜಕೀಯಕ್ಕೆ ಹೊಸಬರೇ? ಇದೆಲ್ಲ ಆಗುವುದು ಅವರಿಗೂ ಗೊತ್ತಿರುತ್ತದೆ. ಕೇಂದ್ರ ಸಚಿವರು ದೂರುದಾರರಲ್ಲ” ಎಂದಿತು.

Also Read
ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸಹೋದರನ ವಿರುದ್ಧದ ಎಫ್‌ಐಆರ್‌ ರದ್ದತಿ ಕೋರಿಕೆ: ಅ.28ಕ್ಕೆ ಹೈಕೋರ್ಟ್‌ನಿಂದ ವಿಚಾರಣೆ

“ಕಳೆದ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮೂವ್‌ ಮಾಡಿದ್ದರು. ಕಡತಗಳನ್ನು ನೋಡಿರಲಿಲ್ಲ. ಇಲ್ಲವಾದಲ್ಲಿ ಅಂದೇ ತಡೆ ನೀಡುವ ಪ್ರಕರಣ ಇದು. ಹಣವನ್ನು ಪಡೆದಿದ್ದೇವೆ. ಅದನ್ನು ಮರಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಅಪರಾಧವೆಲ್ಲಿದೆ? ಜಾತಿ ನಿಂದನೆ ಅನ್ವಯಿಸುವಾಗ ಎಲ್ಲಿ (ಸ್ಥಳ) ಎಂಬುದು ಮುಖ್ಯವಾಗುತ್ತದೆ. ದಾಖಲೆಗಳನ್ನು (ಸರ್ಕಾರಕ್ಕೆ) ಸಲ್ಲಿಸಿ, ಅದನ್ನು ಪರಿಶೀಲಿಸಲಾಗುವುದು” ಎಂದಿತು.

ಒಮ್ಮೆ ದಾಖಲೆಗಳನ್ನು ನೋಡಿ ಎಂಬ ಜಗದೀಶ್‌ ಕೋರಿಕೆಯನ್ನು ತಿರಸ್ಕರಿಸಿದ ಪೀಠವು “ನಿರ್ಧಾರ ಕೈಗೊಂಡು, ಆನಂತರ ತನಿಖಾ ದಾಖಲೆಗಳನ್ನು ನೋಡುತ್ತೇನೆ” ಎಂದು ತನಿಖೆಗೆ ತಡೆಯಾಜ್ಞೆ ಆದೇಶ ಮಾಡಿತು.

ಅರ್ಜಿದಾರ ಆರೋಪಿಗಳು ಅಕ್ಟೋಬರ್‌ 29ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿರುವುದರಿಂದ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಸೂಕ್ತ ಅರ್ಜಿ ಹಾಕಿದರೆ ಬಿಡುಗಡೆಗೆ ಆದೇಶಿಸುವುದಾಗಿ ರವಿಶಂಕರ್‌ ಅವರಿಗೆ ನ್ಯಾಯಾಲಯ ಮೌಖಿಕವಾಗಿ ಸೂಚಿಸಿತು.

Kannada Bar & Bench
kannada.barandbench.com