ಯಶ್‌ ನಟನೆಯ 'ಟಾಕ್ಸಿಕ್‌ʼ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್‌

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೋ ತೆಗೆದುಕೊಂಡು ಟ್ವೀಟ್‌ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಸೆಟ್‌ ಹಾಕಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆಕ್ಷೇಪಿಸಿದ ವಕೀಲ ಬಿಪಿನ್‌ ಹೆಗ್ಡೆ.
Karnataka HC & Toxic poster
Karnataka HC & Toxic poster
Published on

ನಟ ಯಶ್‌ ಪ್ರಧಾನ ಭೂಮಿಕೆಯಲ್ಲಿರುವ ʼಟಾಕ್ಸಿಕ್‌ʼ ಸಿನಿಮಾದ ಶೂಟಿಂಗ್‌ಗಾಗಿ ಬೆಂಗಳೂರಿನ ಜಾಲಹಳ್ಳಿಯ ಎಚ್‌ಎಂಟಿ ಮೀಸಲು ಅರಣ್ಯದಲ್ಲಿ ಮರಗಳ ಹನನ ಮಾಡಲಾಗಿದೆ ಎಂದು ಆರೋಪಿಸಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ ವಿರುದ್ದದ ತನಿಖೆ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿನ ನ್ಯಾಯಾಂಗ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ ಸಂಸ್ಥೆಯು ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಆನಂತರ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರನ್ನು ಪ್ರತಿನಿಧಿಸಿದ್ದ ವಕೀಲ ಬಿಪಿನ್‌ ಹೆಗ್ಡೆ ಅವರು “ಮೈಸೂರು ಸರ್ಕಾರವು 1963ರಲ್ಲಿ 443 ಎಕರೆ ಭೂಮಿಯನ್ನು ಜಾರಕಬಂಡೆ ಕಾವಲ್‌ ಮತ್ತು ಪೀಣ್ಯಾ ಪ್ಲಾಂಟೇಶನ್‌ನಲ್ಲಿ ಹಿಂದೂಸ್ತಾನ್‌ ಮೆಷೀನ್ಸ್‌ ಟೂಲ್ಸ್‌ಗೆ (ಎಚ್‌ಎಂಟಿ) ನೀಡಿತ್ತು. ಇದರಲ್ಲಿ ಎಚ್‌ಎಂಟಿಯು 18.2 ಎಕರೆ ಜಾಗವನ್ನು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿತ್ತು. ಈ ಜಾಗವನ್ನು ಕೆವಿಎನ್‌ ಸಂಸ್ಥೆಯು ಭೋಗ್ಯಕ್ಕೆ ಪಡೆದು ತಾತ್ಕಾಲಿಕವಾಗಿ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ಗೆ ಸೆಟ್‌ ಹಾಕಿದೆ. ಇದು ಮೀಸಲು ಅರಣ್ಯ ಎಂದು ಎಫ್‌ಐಆರ್‌ ಹಾಕಲಾಗಿದೆ. ಸರ್ಕಾರವೇ ಈಗ ಜಾಲಹಳ್ಳಿ ಅರಣ್ಯವಲ್ಲ ಎಂದು ಹೇಳುತ್ತಿದೆ. ಅಲ್ಲಿ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌, ಆಸ್ಪತ್ರೆ ನಿರ್ಮಾಣವಾಗಿವೆ” ಎಂದರು.

ಮುಂದುವರಿದು, “ಈ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಸ್ಥಳಕ್ಕೆ ಭೇಟಿ ನೀಡಿ ವಿಡಿಯೋ ತೆಗೆದುಕೊಂಡು ಅದನ್ನು ಟ್ವೀಟ್‌ ಮಾಡಿದ್ದರು ಎನ್ನಲಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಸೆಟ್‌ ಹಾಕಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ” ಎಂದರು.

ಆಗ ರಾಜ್ಯದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಅಲ್ಲಿದ್ದ ಗಿಡ ಮರಗಳನ್ನು ಕಡಿದು ಹಾಕಲಾಗಿದೆ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ ವಿರುದ್ಧ ಕರ್ನಾಟಕ ಅರಣ್ಯ ಕಾಯಿದೆ ಸೆಕ್ಷನ್‌ 24(ಜಿ) ಅಡಿ ದಾಖಲಿಸಿರುವ ಎಫ್‌ಐಆರ್‌ ಸಂಬಂಧದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ ಎಂದು ಆದೇಶಿಸಿತು. ಅಲ್ಲದೇ, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಜಾಲಹಳ್ಳಿಯ ಎಚ್‌ಎಂಟಿ ಜಾಗವು ಮೀಸಲು ಅರಣ್ಯವಾಗಿದ್ದು, ಅಲ್ಲಿ ನಿಷೇಧವಿದ್ದರೂ ಗಿಡ ಗಂಟಿ ಹಾಗೂ ಮರಗಳನ್ನು ತೆರವು ಮಾಡುವ ಮೂಲಕ ಟಾಕ್ಸಿಕ್‌ ಸಿನಿಮಾದ ಸೆಟ್‌ ಹಾಕಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲು ಅನುಮತಿಸುವಂತೆ ಕೋರಿ ಅರಣ್ಯ ಇಲಾಖೆಯು ನವೆಂಬರ್‌ 4ರಂದು ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್‌ ಅವರು ನವೆಂಬರ್‌ 6ರಂದು ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್‌ 24(ಜಿ) ಅಡಿ ಪ್ರಕರಣ ದಾಖಲಿಸಲು ಅನುಮತಿಸಿದ್ದರು. ಇದರ ಅನ್ವಯ ಎಫ್‌ಐಆರ್‌ ದಾಖಲಾಗಿ, ತನಿಖೆ ಆರಂಭವಾಗಿತ್ತು. ಈಗ ಅದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Kannada Bar & Bench
kannada.barandbench.com