ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5 ಸೇವಾ ಶುಲ್ಕ ಮತ್ತು ಅನ್ವಯಿಸುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಿ ರಾಜ್ಯ ಸರ್ಕಾರವು 2022ರ ನವೆಂಬರ್ 25ರಂದು ಹೊರಡಿಸಿದ್ದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆ ವಿಧಿಸಿದೆ.
ಆ್ಯಪ್ ಆಧರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಅರ್ಜಿ ಸಲ್ಲಿಸಿದ್ದವು. ಈ ಮಧ್ಯೆ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಹೇಳಿದ್ದ ಸರ್ಕಾರವು ಶೇ.5 ಸೇವಾ ಶುಲ್ಕ ಮತ್ತು ಜಿಎಸ್‌ಟಿ ವಿಧಿಸಲು ಅನುಮತಿಸಿ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಓಲಾ ಮತ್ತು ಉಬರ್ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ್ದ ಮಧ್ಯಪ್ರವೇಶ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನ ಆದೇಶ ಮಾಡಿದೆ.
“ಆ್ಯಪ್ ಆಧರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂಬುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗಳು ಇತ್ಯರ್ಥವಾಗುವವರೆಗೆ 2022ರ ನವೆಂಬರ್ 25ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆ ನೀಡಲಾಗಿದೆ. ವಿಚಾರಣೆಯನ್ನು 2023ರ ಜನವರಿ 12ಕ್ಕೆ ಮುಂದೂಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ. 5ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‌ಟಿ ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣದರ ನಿಗದಿಪಡಿಸಲು ರಾಜ್ಯದ ಎಲ್ಲಾ ಸಾರಿಗೆ ಪ್ರಾಧಿಕಾರಿಗಳಿಗೆ ರಾಜ್ಯ ಸರ್ಕಾರವು 2022ರ ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿತ್ತು.