ಹಳೆಯ ವಾಹನಗಳ ನೋಂದಣಿ, ಎಫ್‌ಸಿ ನವೀಕರಣಕ್ಕೆ ದುಬಾರಿ ಶುಲ್ಕ ಮತ್ತು ದಂಡದ ಆದೇಶಕ್ಕೆ ಮಧ್ಯಂತರ ತಡೆ ವಿಧಿಸಿದ ಹೈಕೋರ್ಟ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಅಕ್ಟೋಬರ್ 4ರಂದು 2022ರ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ದಂಡದ ಶುಲ್ಕವನ್ನು ಹೆಚ್ಚಳ ಮಾಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
Karnataka High Court
Karnataka High Court

ಹದಿನೈದು ವರ್ಷ ಹಳೆಯದಾದ ವಾಹನಗಳ ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ನವೀಕರಣಕ್ಕೆ ವಿಧಿಸುತ್ತಿದ್ದ ದುಬಾರಿ ಶುಲ್ಕ ಮತ್ತು ದಂಡದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕರ್ನಾಟಕ ಲಾರಿ ಮಾಲೀಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇತ್ತೀಚೆಗೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ರಜಾಕಾಲೀನ ಪೀಠವು ಮಧ್ಯಂತರ ತಡೆ ವಿಧಿಸಿದ್ದು, ರಾಜ್ಯ ಸರ್ಕಾರ, ಸಾರಿಗೆ ಇಲಾಖೆ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ನ್ಯಾಯಾಲಯದ ಮುಂದೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿ, “ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ ಅನ್ವಯವಾಗುವಂತೆ 15 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಳೆಯ ವಾಹನಗಳ ದಂಡದ ಪ್ರಮಾಣದಲ್ಲಿ ಭಾರಿ ಏರಿಕೆ ಮಾಡಲಾಗಿದೆ. ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರಗಳ ನವೀಕರಣಕ್ಕೆ ರೂ.10 ಸಾವಿರ ಶುಲ್ಕ ವಿಧಿಸಲಾಗುತ್ತಿದೆ. ಒಂದು ವೇಳೆ ಕ್ಷಮತಾ ಅವಧಿ ಮುಕ್ತಾಯಗೊಂಡಿದ್ದರೆ ಸಾರಿಗೇತರ ವಾಹನಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ರೂಪಾಯಿ ವಿಧಿಸಲಾಗುತ್ತಿದೆ. ಇದು ದುಬಾರಿಯಾಗಿದ್ದು, ವಾಹನ ಸವಾರರಿಗೆ ಹೊರೆಯಾಗಿದೆ” ಎಂದರು.

Also Read
ಸಿಬಿಐಗೆ ಸ್ವತಂತ್ರ ಸಂವಿಧಾನ ರೂಪಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ಪಿಐಎಲ್‌ ಸಲ್ಲಿಕೆ

“ಪ್ರತಿದಿನ ವಿಳಂಬಕ್ಕೂ ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ. 10 ಸಾವಿರ ರೂಪಾಯಿಗಳನ್ನು ನೋಂದಣಿ ಮತ್ತು ನವೀಕರಣಕ್ಕೆ ನಿಗದಿಪಡಿಸಿದ್ದರೂ ಸಹ ಭಾರಿ ಸರಕು ವಾಹನಗಳಿಗೆ ದಿನವೊಂದಕ್ಕೆ 1,500 ರೂಪಾಯಿ ಮತ್ತು ಮಧ್ಯಮ ಸರಕು ವಾಹನಗಳಿಗೆ ದಿನವೊಂದಕ್ಕೆ 1,300 ರೂಪಾಯಿ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತಿದೆ. ಹಾಗಾಗಿ ಹಳೆಯ ವಾಹನ ಹೊಂದಿರುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಮೊದಲೇ ಹಳೆಯದಾಗಿರುವ ವಾಹನಗಳಿಗೆ ಅಷ್ಟು ದೊಡ್ಡ ಮೊತ್ತದ ದಂಡ ಪಾವತಿಸಿ ಅವುಗಳನ್ನು ನಿರ್ವಹಣೆ ಮಾಡುವುದು ಕಷ್ಟ. ಈಗಾಗಲೇ ತೈಲ ಬೆಲೆ ಗಗನಕ್ಕೆ ಏರಿದೆ. ಆದ್ದರಿಂದ ದಂಡ ಶುಲ್ಕ ಹೆಚ್ಚಳದ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಅಕ್ಟೋಬರ್ 4ರಂದು 2022ರ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ದಂಡದ ಶುಲ್ಕವನ್ನು ಹೆಚ್ಚಳ ಮಾಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com