
ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕಕರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ತನಿಖೆ ಹಾಜರಾಗುವಂತೆ ಸೂಚಿಸಿ ಐಪಿಎಸ್ ಅಧಿಕಾರಿ ಶ್ರೀನಾಥ್ ಎಂ. ಜೋಶಿ ಅವರಿಗೆ ಜಾರಿ ಮಾಡಿದ್ದ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ತನಿಖೆಗೆ ಹಾಜರಾಗುವಂತೆ ಜೂನ್ 15ರಂದು ಜಾರಿ ಮಾಡಿರುವ ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಶ್ರೀನಾಥ್ ಎಂ. ಜೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನೋಟಿಸ್‌ಗೆ ತಡೆ ನೀಡಲಾಗಿದ್ದು, ಪ್ರಕರಣದಲ್ಲಿ ನಿಂಗಪ್ಪ ಉಲ್ಲೇಖಿಸಿರುವ ಇತರೆ 35 ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ.
ಲೋಕಾಯುಕ್ತ ಪೊಲೀಸ್ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ ಅರಬಟ್ಟಿ ಅವರು “ನಿಂಗಪ್ಪ ಅವರು 35 ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದು, ಶ್ರೀನಾಥ್ ಜೋಶಿ ಅವರಿಗೆ ನೀಡಿರುವ ನೋಟಿಸ್‌ಗೆ ತಡೆ ನೀಡಿದರೆ ತನಿಖೆಗೆ ಸಮಸ್ಯೆಯಾಗಲಿದೆ. ಹೀಗಾಗಿ, ತನಿಖೆಗೆ ಅನುಮತಿಸಬೇಕು” ಎಂದು ಕೋರಿದೆ.
ಜೋಶಿ ಪರ ವಕೀಲ ಸಿ ಎನ್ ಮಹದೇಶ್ವರನ್ ಅವರು “ಜೋಶಿ ಅವರು ಚಿತ್ರದುರ್ಗದಲ್ಲಿ ಐದು ವರ್ಷಗಳ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಸಹೋದ್ಯೋಗಿಯಾಗಿದ್ದರು. ಆನಂತರ ಜೋಶಿಗೂ ನಿಂಗಪ್ಪಗೂ ಯಾವುದೇ ಸಂಪರ್ಕವಿಲ್ಲ. ಜೋಶಿ ಅವರ ಸೇವಾ ದಾಖಲೆಗಳಿಗೆ ಸಮಸ್ಯೆ ಮಾಡಲು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ” ಎಂದರು.
ಜೂನ್ 15ರಂದು ಜೋಶಿ ಅವರ ಮನೆಯಲ್ಲಿ ಶೋಧ ನಡೆಸಿ, ಬಿಎನ್‌ಎಸ್‌ಎಸ್ ಸೆಕ್ಷನ್ 35(ಎ) ನೋಟಿಸ್ ಜಾರಿ ಮಾಡಲಾಗಿದೆ. ಜೂನ್ 16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ನೋಟಿಸ್ ಜೊತೆಗೆ ದೂರು ಅಥವಾ ಎಫ್‌ಐಆರ್ ಲಗತ್ತಿಸಿಲ್ಲ. ಎಫ್‌ಐಆರ್ ಅಥವಾ ದೂರಿನಲ್ಲಿ ಜೋಶಿ ಅವರ ಹೆಸರು ಉಲ್ಲೇಖಿಸಿಲ್ಲ. ನಿಂಗಪ್ಪ ವಿರುದ್ಧ ದೂರು ದಾಖಲಾಗಿರುವುದನ್ನು ತಿಳಿಸದೇ ಜೋಶಿ ಅವರನ್ನು ತನಿಖೆಗೆ ಬರುವಂತೆ ಸೂಚಿಸಿರುವುದು ಲೋಕಾಯುಕ್ತ ಪೊಲೀಸರ ಮೇಲೆ ಗಂಭೀರ ಅನುಮಾನಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಜೂನ್ 2ರಂದು ನಿವೃತ್ತ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ಸಾವಂತ್ ಅವರನ್ನು ಮೊದಲಿಗೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಿಗೇ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ -1 ಎಸ್‌ಪಿಯಾಗಿದ್ದ ಶ್ರೀನಾಥ್ ಜೋಶಿಯನ್ನು ಲೋಕಾಯುಕ್ತ ಪೊಲೀಸ್ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಆನಂತರ ಜೋಶಿ ಮಾತೃ ಇಲಾಖೆಗೆ ವರದಿ ಮಾಡಿಕೊಂಡಿದ್ದರು. ಇನ್ನಷ್ಟೇ ಅವರಿಗೆ ಹುದ್ದೆ ತೋರಿಸಬೇಕಿದೆ.
ಲೋಕಾಯುಕ್ತ ದಾಳಿಯ ನೆಪವೊಡ್ಡಿ ಸರ್ಕಾರಿ ನೌಕಕರಿಂದ ಸುಲಿಗೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ಸಾವಂತ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನಿಂಗಪ್ಪ ಪತ್ನಿ ಜಿ ಕೆ ಚಂದ್ರಕಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠವು ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಮಧ್ಯಂತರ ಜಾಮೀನು, ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಮತ್ತು ಲೋಕಾಯುಕ್ತ ಪೊಲೀಸರು ಮಾಧ್ಯಮಗಳ ಜೊತೆ ಮಾತನಾಡುವಂತಿಲ್ಲ ಎಂಬ ಷರತ್ತನ್ನೂ ನ್ಯಾಯಾಲಯ ಇದೇ ವೇಳೆ ವಿಧಿಸಿದೆ.