![[₹500 ಬೆಟ್ಟಿಂಗ್] ʼಹಾಸ್ಯ ಮಾಡುವುದು ಕ್ರಿಮಿನಲ್ ಅಪರಾಧವೇʼ? ಗೃಹ ಸಚಿವ ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ತಡೆ](http://media.assettype.com/barandbench-kannada%2F2026-04-23%2F82x356id%2FParameshwar-High-Court.jpg?w=480&auto=format%2Ccompress&fit=max)
![[₹500 ಬೆಟ್ಟಿಂಗ್] ʼಹಾಸ್ಯ ಮಾಡುವುದು ಕ್ರಿಮಿನಲ್ ಅಪರಾಧವೇʼ? ಗೃಹ ಸಚಿವ ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ತಡೆ](http://media.assettype.com/barandbench-kannada%2F2026-04-23%2F82x356id%2FParameshwar-High-Court.jpg?w=480&auto=format%2Ccompress&fit=max)
“ಹಾಸ್ಯ ಮಾಡುವುದು ಕ್ರಿಮಿನಲ್ ಅಪರಾಧವಾಗುತ್ತದೆಯೇ” ಎಂದು ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್ ಗೃಹ ಸಚಿವ ಜಿ ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶ ಮತ್ತು ಆನಂತರದ ಪ್ರಕ್ರಿಯೆಗೆ ಗುರುವಾರ ತಡೆ ನೀಡಿದೆ.
ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರ ₹500 ಬೆಟ್ಟಿಂಗ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪರಮೇಶ್ವರ್ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು.
ಈ ಪ್ರಕರಣ ರದ್ದತಿ ಕೋರಿ ಜಿ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
"ಪ್ರಕರಣ ದಾಖಲಿಸಲು ಆದೇಶಿಸುವುದಕ್ಕೂ ಮುನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಿಎನ್‌ಎಸ್‌ಎಸ್ ಸೆಕ್ಷನ್ 175 (3) ಅಡಿ ಪೊಲೀಸರ ವಾದ ಆಲಿಸಿಲ್ಲ. ಹೀಗಾಗಿ, ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 21.4.2026ರಂದು ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಮಾಡಿರುವ ಆದೇಶ ಹಾಗೂ ಆನಂತರದ ಪ್ರಕ್ರಿಯೆಗೆ ತಡೆ ನೀಡಲಾಗಿದೆ" ಎಂದು ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮುನ್ನ, ಪರಮೇಶ್ವರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಮೊದಲಿಗೆ ಪೊಲೀಸರು ಏನು ಹೇಳಿದ್ದಾರೆ ಎಂಬುದನ್ನು ಅರಿತು ಆನಂತರ ತನಿಖೆಗೆ ಮ್ಯಾಜಿಸ್ಟ್ರೇಟ್ ಆದೇಶಿಸಬೇಕಿತ್ತು. 19.10.2025ರಂದು ಕಬಡ್ಡಿ ಟೂರ್ನಿಯಲ್ಲಿ ದಕ್ಷಿಣ ಕನ್ನಡ ತಂಡ ಗೆದ್ದಿತ್ತು. ಆನಂತರ ಪರಮೇಶ್ವರ್ ಅವರು ತಮಾಷೆಗೆ ಪಣ ಕಟ್ಟಿ ಸೋತಿದ್ದೇನೆ ಎಂದು ಹೇಳಿದ್ದಾರೆ” ಎಂದರು.
ದೂರುದಾರ ಎಚ್ ಆರ್ ನಾಗಭೂಷಣ್ ಪರ ವಕೀಲ ಎಸ್ ಉಮಾಪತಿ ಅವರು “ಪ್ರಕರಣವು ಪೂರ್ವ ಎಫ್‌ಐಆರ್ ಹಂತದಲ್ಲಿದೆ. ವಿಡಿಯೊ ಕ್ಲಿಪಿಂಗ್ ಮತ್ತು ಸಂಬಂಧಿತ ದಾಖಲೆಯನ್ನು ದೂರುದಾರರು ಸಂಬಂಧಿತ ಪೊಲೀಸರಿಗೆ ಸಲ್ಲಿಸಿದ್ದಾರೆ. ಗೃಹ ಸಚಿವರ ಹೇಳಿಕೆ ವೈರಲ್ ಆಗಿದ್ದು, ಪತ್ರಿಕೆಗಳಲ್ಲೂ ವರದಿಯಾಗಿದೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸದೇ ಹಿಂಬರಹ ನೀಡಿದ್ದಾರೆ. ಏಕೆಂದರೆ, ಅರ್ಜಿದಾರರು ಗೃಹ ಸಚಿವರು ಎಂದು. ಪರಮೇಶ್ವರ್ ಅವರು ಯಾವ ಗ್ಯಾಂಗ್‌ನ ಸದಸ್ಯರು ಎಂಬುದು ತನಿಖೆಯಿಂದ ತಿಳಿಯಬೇಕಿದೆ” ಎಂದು ಪೀಠದ ಪ್ರಶ್ನೆಗೆ ಉತ್ತರಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಅಪರಾಧ ಏನು? ಬಿಎನ್‌ಎಸ್ ಸೆಕ್ಷನ್ 112 (ಕ್ಷುಲ್ಲಕ ಸಂಘಟಿತ ಅಪರಾಧ). ಪರಮೇಶ್ವರ್ ಯಾವ ಗ್ಯಾಂಗ್‌ನ ಸದಸ್ಯರು? ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ? ಯಾರಾದರೂ ಹಾಸ್ಯ ಮಾಡಿದರೆ ಅದು ಕ್ರಿಮಿನಲ್ ಅಪರಾಧವೇ? ಬಿಎನ್‌ಎಸ್‌ಎಸ್ ಸೆಕ್ಷನ್ 175(3)ಅಡಿ ಪೊಲೀಸರಿಗೆ ಎಲ್ಲಿ ನೋಟಿಸ್ ಜಾರಿ ಮಾಡಲಾಗಿದೆ” ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಅಕ್ಟೋಬರ್ 19ರಂದು ತುಮಕೂರು ನಗರದಲ್ಲಿ ನಡೆದ ಕಬಡ್ಡಿ ಪಂದ್ಯದ ವೇಳೆ ಕೊರಟೆಗೆರೆ ಶಾಸಕರೂ ಆದ ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಗೆದ್ದ ತಂಡವಾದ ದಕ್ಷಿಣ ಕನ್ನಡ ತಂಡದ ವಿರುದ್ಧ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ ಹಾಗೂ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರೇರೇಪಿಸಿದ್ದಾರೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಿದ್ದ ನಾಗಭೂಷಣ್, ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳ ಪ್ರತಿ ಹಾಗೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ದೂರನ್ನು 'ಆಧಾರರಹಿತ' ಎಂಬ ಕಾರಣ ನೀಡಿ ಮುಕ್ತಾಯಗೊಳಿಸಿ 2025ರ ಅಕ್ಟೋಬರ್ 29ರಂದು ಕೊಡಿಗೇಹಳ್ಳಿ ಪೊಲೀಸರು ನೀಡಿದ್ದ ಹಿಂಬರಹದ ಪ್ರತಿಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ದಾಖಲೆಗಳನ್ನು ಗಮನಿಸಿದರೆ, ದೂರುದಾರರು ಒದಗಿಸಿರುವ ಪತ್ರಿಕಾ ವರದಿಗಳನ್ನು ಗಮನಿಸದೆ ಅಥವಾ ದೂರುದಾರರಿಂದ ಯಾವುದೇ ಸಾಕ್ಷ್ಯಗಳನ್ನು ಪಡೆಯದೆ ಪೊಲೀಸರು ದೂರನ್ನು ಮುಕ್ತಾಯಗೊಳಿಸಿದ್ದಾರೆ. ದೂರುದಾರರು ಆರೋಪಿಗಳ ವಿರುದ್ಧ ಬೆಟ್ಟಿಂಗ್‌ನಲ್ಲಿ ತೊಡಗಿದ ಆರೋಪ ಮಾಡಿದ್ದಾರೆ. ಇದು ಶಾಸಕರ ಅಥವಾ ಜಿಲ್ಲಾಧಿಕಾರಿಗಳ ಅಧಿಕೃತ ಕರ್ತವ್ಯದ ಭಾಗವಲ್ಲ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಸರ್ಕಾರದ ಪೂರ್ವಾನುಮತಿಯ ಅಗತ್ಯವಿಲ್ಲ ಎಂದಿದ್ದ ಮ್ಯಾಜಿಸ್ಟ್ರೇಟ್, ಆರೋಪಿಗಳ ವಿರುದ್ಧ ಬಿಎನ್‌ಎಸ್‌ಎಸ್ ಸೆಕ್ಷನ್ 175(3) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಪರಮೇಶ್ವರ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರನ್ನು ಆರೋಪಿಗಳನ್ನಾಗಿಸಲಾಗಿತ್ತು.