ವಕ್ಫ್‌ ವಿರುದ್ಧದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ: ಬೊಮ್ಮಾಯಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 196(1)(a) ಅಡಿ ಪ್ರಕರಣ ಬೊಮ್ಮಾಯಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 35 (3) ಅಡಿ ನವೆಂಬರ್‌ 7ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ ಮಾಡಲಾಗಿದೆ.
CM Basavaraj Bommai and Karnataka HC
CM Basavaraj Bommai and Karnataka HC
Published on

ವಕ್ಫ್ ಆಸ್ತಿ ವಿಚಾರವಾಗಿ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಸಂಬಂಧ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಅದರ ಸಂಬಂಧ ನೀಡಿರುವ ಪೊಲೀಸ್‌ ನೋಟಿಸ್‌ಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆ ನೀಡಿದೆ.

ಹಾವೇರಿ ಜಿಲ್ಲೆಯ ಸವಣೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ನವೆಂಬರ್‌ 16ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೀಡಿರುವ ನೋಟಿಸ್‌ ರದ್ದುಪಡಿಸಬೇಕು ಎಂದು ಬಸವರಾಜ ಬೊಮ್ಮಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬೊಮ್ಮಾಯಿ ಪರವಾಗಿ ವಕೀಲ ಶಿವಪ್ರಸಾದ್‌ ಶಾಂತನಗೌಡರ್‌ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಯಾವುದೇ ಆಕ್ಷೇಪಾರ್ಹವಾದ ಮಾತುಗಳನ್ನು ಆಡದಿದ್ದರೂ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬೇರೆಯವರು ಹೇಳಿದ್ದನ್ನು ತಮಗೆ ಅನ್ವಯಿಸುವುದು ಬೇಡ” ಎಂದು ಪೀಠಕ್ಕೆ ಮನವರಿಕೆ ಮಾಡಿದರು.

ಆಗ ಪೀಠವು "ಬೊಮ್ಮಾಯಿ ಮತ್ತಿತರರ ಭಾಷಣವನ್ನು ನೀವು ನಿರ್ಬಂಧಿಸುವುದಾದರೆ ನಿಮ್ಮ ಕಡೆಯವರ ಭಾಷಣವನ್ನೂ ನಿರ್ಬಂಧಿಸಬೇಕು" ಎಂದಿತು.

ಆಗ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು "ನಾವು ಬೇರೊಬ್ಬರ ಪರವಾಗಿ ಮಾತನಾಡಲಾಗದು. ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ದೂರಿನಲ್ಲಿನ ಕೊನೆಯ ನಾಲ್ಕು ಸಾಲುಗಳಲ್ಲಿನ ಹೇಳಿಕೆಗಳು ಬೇಕಿರಲಿಲ್ಲ" ಎಂದರು.

ಆಗ ಪೀಠವು "ಪ್ರತಿಯೊಂದು ಕ್ರಿಯೆಗೂ ವಿರುದ್ಧ ಮತ್ತು ಸಮನಾದ ಪ್ರತಿಕ್ರಿಯೆ ಇರುತ್ತದೆ. ಹಾಗೆಯೇ ಪ್ರತಿಯೊಂದು ಹೇಳಿಕೆಗೂ ತಕ್ಕ ಪ್ರತಿಕ್ರಿಯೆ ಇರುತ್ತದೆ" ಎಂದರು.

ಅಂತಿಮವಾಗಿ ಪೀಠವು ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿಲಾಗಿದೆ ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ವಕ್ಫ್‌ ಆಸ್ತಿ ವಿಚಾರವಾಗಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ, ಶಾಸಕ ಅರವಿಂದ್‌ ಬೆಲ್ಲದ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್‌ ಮತ್ತು ಮಾಜಿ ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಅವರು ನವೆಂಬರ್‌ 4ರಂದು ಸವಣೂರಿನ ಭರಮದೇವರ ಸರ್ಕಲ್‌ ಬಳಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

“ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್‌ ಆಸ್ತಿ ಎನ್ನುವಂತಾಗಿದೆ; ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಮೂರು ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್ಫ್‌ ಆಸ್ತಿ ಎನ್ನುತ್ತಾರೆ” ಎಂದು ಬೊಮ್ಮಾಯಿ ಹೇಳಿರುವುದಾಗಿ ದೂರು ದಾಖಲಿಸಲಾಗಿದೆ.

Also Read
ವಕ್ಫ್‌ ವಿರುದ್ಧದ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ: ಎಫ್‌ಐಆರ್‌ ರದ್ದುಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಬೊಮ್ಮಾಯಿ

ಸಿ ಟಿ ರವಿ ಅವರು “ನಮಗೆ ಸಂವಿಧಾನ ದೊಡ್ಡದೋ ಅಥವಾ ಶರಿಯಾ ಕಾನೂನು ದೊಡ್ಡದೋ? ರೈತರ ಜಮೀನು, ದೇವಸ್ಥಾನಗಳ ಕೆರೆಗಳ ಜಾಗವನ್ನು ವಕ್ಫ್‌ ಹೆಸರಿನಲ್ಲಿ ನೋಂದಾಯಿಸುತ್ತಿದ್ದಾರೆ. ಜಮೀರ್‌ ಅಹ್ಮದ್‌ ಖಾನ್‌ ಅವರ ಶರಿಯಾ ಕಾನೂನು ಇಲ್ಲಿ ನಡೆಯಲ್ಲ. 1,600 ವರ್ಷಗಳ ಹಿಂದೆ ನಿರ್ಮಿಸಿರುವ ಸೋಮೇಶ್ವರ ದೇವಸ್ಥಾನ ನಮ್ಮದು ಎನ್ನುತ್ತಿದ್ದಾರೆ. ಇವರಿಗೆ ಯಾವುದರಲ್ಲಿ ಹೊಡೆಯಬೇಕು" ಎಂದು ಕೇಳಿದ್ದರು ಎನ್ನಲಾಗಿದೆ. ಮುಂದುವರಿದು, "1947ರಲ್ಲಿ ಸಾಬರಿಗೆ ಪಾಕಿಸ್ತಾನ, ಹಿಂದೂಗಳಿಗೆ ಇಂಡಿಯಾ ಕೊಟ್ಟು ಲೆಕ್ಕ ಚುಕ್ತಾ ಮಾಡಲಾಗಿದೆ. ಆದರೂ, ನಮ್ಮ ರೈತರ ಜಮೀನು, ದೇವಸ್ಥಾನ ಬೇಕಂತೆ" ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು ಎಂದು ಗುಪ್ತ ಮಾಹಿತಿ ಸಂಗ್ರಹಿಸುವ ಪೇದೆ ಮಂಜುನಾಥ ಮಣ್ಣಿಯವರ್‌ ಸವಣೂರು ಠಾಣಾಧಿಕಾರಿಗೆ ನವೆಂಬರ್‌ 4ರಂದು ದೂರು ನೀಡಿದ್ದರು.

ಇದರ ಅನ್ವಯ ಎಲ್ಲರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 196(1)(a) ಅಡಿ ಪ್ರಕರಣ ದಾಖಲಿಸಲಾಗಿದೆ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 35 (3) ಅಡಿ ನವೆಂಬರ್‌ 7ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ಜಾರಿ ಮಾಡಲಾಗಿದೆ.

Kannada Bar & Bench
kannada.barandbench.com