ಬ್ಯಾಂಕ್‌ ಖಾತೆ ದುರ್ಬಳಕೆ: ನಟಿ ಚೈತ್ರಾ ಪತಿ ಬಾಲಾಜಿ, ಮಾವ ಪೋತರಾಜು ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

ಚೈತ್ರಾ ಅವರು ತನ್ನ ಬ್ಯಾಂಕ್ ಖಾತೆಯಲ್ಲಿದ್ದ ₹14 ಲಕ್ಷ ಮೊತ್ತವನ್ನು ಬಾಲಾಜಿ ಮತ್ತವರ ತಂದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
High Court of Karnataka
High Court of Karnataka
Published on

ಬ್ಯಾಂಕ್ ಖಾತೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಉದ್ಯಮಿ ಬಾಲಾಜಿ ಪೋತರಾಜು ಮತ್ತು ಮಾವ ಎಂ ಕೆ ಪೋತರಾಜು ವಿರುದ್ಧ ದಾಖಲಿಸಿರುವ ದೂರಿಗೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಬಾಲಾಜಿ ಪೋತರಾಜು ಮತ್ತು ಅವರ ತಂದೆ ಎಂ ಕೆ ಪೋತರಾಜು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ನಟಿ ಚೈತ್ರಾ ದೂರು ಆಧರಿಸಿ ಬೆಂಗಳೂರಿನ ವೈಟ್‌ ಫೀಲ್ಡ್ ಠಾಣೆ ಪೊಲೀಸರು, ಬಾಲಾಜಿ ಹಾಗೂ ಎಂ ಕೆ ಪೋತರಾಜು ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ದೂರಿಗೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ಪೀಠವು ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣ ಹಿನ್ನೆಲೆ: ನಟಿ ಚೈತ್ರಾ ಮತ್ತು ಬಾಲಾಜಿ 2006ರಲ್ಲಿ ಮದುವೆಯಾಗಿದ್ದು, ಕೌಟುಂಬಿಕ ಕಲಹದ ಆರೋಪದಡಿ ಚೈತ್ರಾ ಅವರು ಬಾಲಾಜಿ ವಿರುದ್ಧ 2018ರಲ್ಲಿ ದೂರು ದಾಖಲಿಸಿದ್ದರು. ಬಳಿಕ ದಂಪತಿ ಸಹಬಾಳ್ವೆ ಮುಂದುವರಿಸಿದ್ದರು. ಆದರೆ, ಪತ್ನಿಯ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿದ್ದ ಬಾಲಾಜಿ 2021ರ ಮಾರ್ಚ್‌ನಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಯಾಗಿ ಚೈತ್ರಾ 2021ರ ಸೆಪ್ಟೆಂಬರ್‌ನಲ್ಲಿ ಬಾಲಾಜಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು ಮತ್ತು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಇತ್ತೀಚೆಗೆ ಚೈತ್ರಾ ಅವರು ನನ್ನ ಬ್ಯಾಂಕ್ ಖಾತೆಯಲ್ಲಿದ್ದ ₹ 14 ಲಕ್ಷ ಮೊತ್ತವನ್ನು ಬಾಲಾಜಿ ಮತ್ತವರ ತಂದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಈ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಅರ್ಜಿದಾರರ ಪರ ವಕೀಲೆ ಪಿ ಎಲ್‌ ವಂದನಾ ವಕಾಲತ್ತು ವಹಿಸಿದ್ದರು. ಹಿರಿಯ ವಕೀಲ ಎಸ್ ಶ್ಯಾಮ್ ಸುಂದರ್ ವಾದ ಮಂಡಿಸಿದರು.

Kannada Bar & Bench
kannada.barandbench.com