

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ಜಫ್ತಿ ಮಾಡಿರುವುದನ್ನು ಬಿಡುಗಡೆ ಮಾಡುವಂತೆ ಒಂದು ಕೋಮಿನ ಜನರು ಅಕ್ರಮ ಕೂಟ ನಿರ್ಮಿಸಿ ಕಲಬುರ್ಗಿಯ ಚಿತ್ತಾಪುರ ಪೊಲೀಸ್ ಠಾಣೆಯ ಮುಂದೆ ಗುಂಪುಗಟ್ಟಿದ್ದ ಆರೋಪದ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಅನುಮತಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಮಂಗಳವಾರ ತಡೆ ನೀಡಿದೆ.
ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ಸಲ್ಲಿಸಿದ್ದ ಮೆಮೊ ಪರಿಗಣಿಸಿ ಅಭಿಯೋಜನೆಯಿಂದ ಹಿಂಪಡೆಯಲು ಅನುಮತಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ವಜಾ ಮಾಡುವಂತೆ ಕೋರಿ ಬೆಂಗಳೂರಿನ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಗಿರೀಶ್ ಭಾರದ್ವಾಜ್ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ 2025ರ ಮೇನಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಾಡಿರುವ ಆದೇಶಕ್ಕೆ ಹಾಲಿ ಪ್ರಕರಣ ವಿರುದ್ಧವಾಗಿದೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಅಭಿಯೋಜನೆ ಮತ್ತು ಸರ್ಕಾರಿ ವ್ಯಾಜ್ಯ ಇಲಾಖೆಯ ಉಪನಿರ್ದೇಶಕರು ಭಿನ್ನವಾದ ಅಭಿಪ್ರಾಯ ನೀಡಿರುವ ಹೊರತಾಗಿಯೂ ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ಅಭಿಯೋಜನೆ ಹಿಂಪಡೆಯುವಾಗ ಸರ್ಕಾರಿ ಅಭಿಯೋಜಕರು ವಿವೇಚನೆ ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಹೀಗಾಗಿ, ಅಭಿಯೋಜನೆಯಿಂದ ಹಿಂಪಡೆಯಲು ಅನುಮತಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲಾಗಿದೆ” ಎಂದು ಹೈಕೋರ್ಟ್ ಆದೇಶಿಸಿದೆ.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು “ಹಾಲಿ ಪ್ರಕರಣದ ವಿಚಾರಣೆ ಮುಂದುವರಿಸಲು ಸೂಕ್ತವಾಗಿದೆ ಎಂದು ಅಭಿಯೋಜನಾ ಮತ್ತು ಸರ್ಕಾರಿ ವ್ಯಾಜ್ಯ ಇಲಾಖೆಯ ಉಪ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕರಣ ಹಿಂಪಡೆಯಲು ಶಿಫಾರಸ್ಸು ಮಾಡಿದ್ದಾರೆ. ಇಂಥದ್ದೇ ಬೇರೊಂದು ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಧ್ಯಪ್ರವೇಶಿಸಿದ್ದರು. ಹಾಲಿ ಪ್ರಕರಣದಲ್ಲಿ ನ್ಯಾಯಾಲಯವು ಮಾರ್ಗಸೂಚಿ ರೂಪಿಸಬೇಕಿದೆ” ಎಂದರು.
2025ರ ಸೆಪ್ಟೆಂಬರ್ 17ರಂದು ಸಂಪುಟ ಮತ್ತು ಇತರ ಇಲಾಖೆಗಳ ಅಭಿಪ್ರಾಯವನ್ನು ಆಧರಿಸಿ ಗೃಹ ಇಲಾಖೆಯು ಅಭಿಯೋಜನಾ ಮತ್ತು ಪೊಲೀಸ್ ಇಲಾಖೆಗೆ ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸೇರಿ ಒಟ್ಟು 62 ಪ್ರಕರಣಗಳನ್ನು ಹಿಂಪಡೆಯಲು ಆದೇಶಿಸಿತ್ತು. ಇದರ ಅನ್ವಯ ಅಕ್ಟೋಬರ್ 10ರಂದು ಸರ್ಕಾರಿ ಅಭಿಯೋಜಕರು ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿದ್ದ ಜಾನುವಾರು ಸಾಗಣೆ ವಾಹನ ಜಫ್ತಿ ಸಂಬಂಧಿತ ಪ್ರಕರಣ ಹಿಂಪಡೆಯಲು ಸಿಆರ್‌ಪಿಸಿ ಸೆಕ್ಷನ್ 321ರ ಅಡಿ ವಿಚಾರಣಾಧೀನ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿ, ಆರೋಪ ಪಟ್ಟಿ ಮುಕ್ತಾಯವಾಗಿದೆ ಎಂದು ಮ್ಯಾಜಿಸ್ಟ್ರೇಟ್ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಸದ್ಯ ಪ್ರಶ್ನಿಸಲಾಗಿದೆ.
ಸುಪ್ರಿಂ ಕೋರ್ಟ್ ತೀರ್ಪು ಉಲ್ಲಂಘಿಸಿ 2025ರ ಸೆಪ್ಟೆಂಬರ್ 4ರಂದು ಚಿತ್ತಾಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಿಂಪಡೆಯಲು ಸಂಪುಟದ ಮುಂದೆ ಪ್ರಸ್ತಾವ ಮಂಡಿಸಲಾಗಿತ್ತು. ಅಭಿಯೋಜನಾ ಇಲಾಖೆಯ ಭಿನ್ನ ಅಭಿಪ್ರಾಯದ ಹೊರತಾಗಿಯೂ ಪ್ರಕರಣ ಹಿಂಪಡೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಗಮನಾರ್ಹ ವಿಚಾರಗಳನ್ನು ಪತ್ತೆಹಚ್ಚಿದ್ದು, ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿಗಳು ಸಿಆರ್‌ಪಿಸಿ ಸೆಕ್ಷನ್ 144 ಮತ್ತು ಸರ್ಕಾರವು ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಿರುವ ಎಸ್‌ಒಪಿ ಉಲ್ಲಂಘಿಸಿದ್ದಾರೆ ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ತಿಳಿಸಿತ್ತು. ಸರ್ಕಾರಿ ಅಭಿಯೋಜಕರು ಪ್ರಕರಣ ಹಿಂಪಡೆಯುವುದಕ್ಕೆ ಅನುಮತಿಸುವ ಮುನ್ನ ವಿವೇಚನೆ ಬಳಸಬೇಕು ಎಂದು ಅಭಿಯೋಜನಾ ಇಲಾಖೆ ತಿಳಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರಕರಣದ ಹಿನ್ನೆಲೆ: 2019ರ ಆಗಸ್ಟ್ 11ರಂದು ಕಲಬುರ್ಗಿಯ ಚಿತ್ತಾಪುರದ ದಿಗ್ಗಾಂವ್ ಕ್ರಾಸ್ ಬಳಿ ಅನಧಿಕೃತವಾಗಿ ಬೊಲೆರೊ ಪಿಕ್ ಅಪ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದನ್ನು ಪತ್ತೆ ಮಾಡಿ, ವಾಹನವನ್ನು ಪೊಲೀಸರು ಜಫ್ತಿ ಮಾಡಿದ್ದರು. ಇದನ್ನು ವಿರೋಧಿಸಿ ರಾತ್ರಿ 10 ಗಂಟೆ ವೇಳೆಗೆ ಹಲವಾರು ಮಂದಿ ಅಕ್ರಮ ಗುಂಪು ಸೇರಿ ಪ್ರತಿಭಟಿಸಿದ್ದರು. ಪರಿಶೀಲನೆ ನಡೆಸಿ, ವಾಹನ ಬಿಡುಗಡೆ ಮಾಡುವುದಾಗಿ ತಿಳಿಸಿದರೂ ಅವರಾರು ಸ್ಥಳ ಬಿಟ್ಟು ಕದಲಿರಲಿಲ್ಲ. ಈ ವೇಳೆ ಪೊಲೀಸರು ಅವರನ್ನು ಚದುರಿಸಲು ಯತ್ನಿಸಿದಾಗ ಕಲ್ಲು ತೂರಾ ನಡೆಸಿದ್ದರಿಂದ ಹಲವು ವಾಹನಗಳು ಜಖಂ ಆಗಿದ್ದವು. ಕೋವಿಡ್ ಮಾರ್ಗಸೂಚಿಗಳು ಜಾರಿಯಲ್ಲಿದ್ದರೂ ಪ್ರತಿಭಟನಾಕಾರರು ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಶೇಖ್ ಮೊಹ್ಸೀನ್, ಮೊಹಮ್ಮದ್ ಫಯಾಜ್, ಮೊಹಮ್ಮದ್ ಯೂಸಫ್, ಇಮ್ರಾನ್, ನೂರ್ ಅಲಿಯಾಸ್ ಮೊಹಮ್ಮದ್ ಆಸೀಫ್, ಮೊಹಮ್ಮದ್ ಜಾಕೀರ್, ಮೊಹಮ್ಮದ್ ವಾಜೀದ್, ಮುಜಾಹಿದ್, ಮೊಹಮ್ಮದ್ ಖಲೀಲ್, ಇಕ್ಬಾಲ್, ಮೊಹಮ್ಮದ್ ರಿಯಾಜ್, ಶೇಖ್ ಫಾರೂಖ್, ಬಾಬಾ, ಜಾಹೀರ್‌ಮಿಯಾನ್, ವಾಸಿಮ್ ಅಕ್ರಂ, ಸಯದ್ ಬಶೀರ್, ಮೊಹಮ್ಮದ್ ಆತೀಕ್, ವಾಸೀಮ್ ಅಕ್ರಂ, ಶೇಖ್ ಅಬ್ದುಲ್ ಮಜೀದ್ ಅವರ ವಿರುದ್ಧ ಚಿತ್ತಾಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147,148, 353, 427 ಜೊತೆಗೆ 149 ಅಡಿ ಪ್ರಕರಣ ದಾಖಲಿಸಲಾಗಿತ್ತು.