ದುರುದ್ದೇಶ ಪ್ರಕರಣ: ₹1.5 ಲಕ್ಷ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ಮಹೇಶ್‌ ಜೋಶಿ ವಿರುದ್ಧದ ತೀರ್ಪಿಗೆ ಹೈಕೋರ್ಟ್‌ ತಡೆ

ಫೆಬ್ರವರಿ 24 ಅಥವಾ 25ರಂದು ದೂರದರ್ಶನ ಮತ್ತು ಎಲ್ಲಾ ಪ್ರಮುಖ ಇಂಗ್ಲಿಷ್‌ ಮತ್ತು ಕನ್ನಡ ಪತ್ರಿಕೆಗಳ ಮುಖೇನ ಎನ್‌ ಕೆ ಮೋಹನ್‌ ರಾಮ್‌ ಅವರಿಗೆ ಜೋಶಿ ಬೇಷರತ್‌ ಕ್ಷಮೆ ಕೋರಬೇಕು ಎಂದು ವಿಚಾರಣಾಧೀನ ನ್ಯಾಯಾಲಯ ಕಟ್ಟಪ್ಪಣೆ ಮಾಡಿತ್ತು.
Mahesh Joshi and Karnataka HC
Mahesh Joshi and Karnataka HC
Published on

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು 12 ದಿನಗಳಲ್ಲಿ ಹೈಕೋರ್ಟ್‌ನಲ್ಲಿ ₹1.5 ಲಕ್ಷ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ದೂರದರ್ಶನಕ್ಕೆ ಸೇರ್ಪಡೆಯಾದಾಗಿನಿಂದಲೂ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದ್ದ ಆರೋಪದ ಸಂಬಂಧ ₹1.2 ಲಕ್ಷ ದಂಡ ವಿಧಿಸಿ ವಿಚಾರಣಾ ನ್ಯಾಯಾಲಯವು ಮಾಡಿರುವ ಆದೇಶಕ್ಕೆ ತಡೆ ನೀಡಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಬೆಂಗಳೂರಿನ ಎನ್‌ ಕೆ ಮೋಹನ್‌ ರಾಮ್‌ ಅವರ ಮೂಲ ದಾವೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಆದೇಶ ಬದಿಗೆ ಸರಿಸುವಂತೆ ಕೋರಿ ಮಹೇಶ್‌ ಜೋಶಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌ ಟಿ ನರೇಂದ್ರ ಪ್ರಸಾದ್‌ ಅವರ ಏಕಸದಸ್ಯ ಪೀಠ ನಡೆಸಿತು.

ಪ್ರತಿವಾದಿ ಮೋಹನ್‌ ರಾಮ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು, ಮಾರ್ಚ್‌ 6ರ ಒಳಗೆ ಜೋಶಿ ಅವರು ನ್ಯಾಯಾಲಯದಲ್ಲಿ ₹1.5 ಲಕ್ಷ ಠೇವಣಿ ಇಡುವ ಷರತ್ತಿಗೆ ಒಳಪಟ್ಟು ವಿಚಾರಣಾಧೀನ ನ್ಯಾಯಾಲಯವು 19.02.2025ರಂದು ಅವರ ವಿರುದ್ದ ಮಾಡಿರುವ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ಹೈಕೋರ್ಟ್‌ ಆದೇಶ ಮಾಡಿದೆ.

Also Read
ಸಹೋದ್ಯೋಗಿ ವಿರುದ್ಧ ದುರುದ್ದೇಶಪೂರಿತ ಪ್ರಕರಣ: ಕ್ಷಮೆ ಯಾಚಿಸಿ, ₹1.2 ಲಕ್ಷ ಪರಿಹಾರ ನೀಡಲು ಮಹೇಶ್‌ ಜೋಶಿಗೆ ಆದೇಶ

ದೂರದರ್ಶನಕ್ಕೆ ಸೇರ್ಪಡೆಯಾದಾಗಿನಿಂದಲೂ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿರುವ ದೂರದರ್ಶನ ಮಾಜಿ ಉದ್ಯೋಗಿ ಮಹೇಶ್‌ ಜೋಶಿ ಅವರ ನಡೆ ಸರ್ವತಾ ಒಪ್ಪುವಂಥದ್ದಲ್ಲ ಎಂದು ಬೆಂಗಳೂರಿನ ನ್ಯಾಯಾಲಯವು ಕಟುವಾಗಿ ನುಡಿದಿದ್ದು, ಫಿರ್ಯಾದಿ ಎನ್‌ ಕೆ ಮೋಹನ್‌ ರಾಮ್‌ ಅವರಿಗೆ ₹1.2 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ಪಾವತಿಸಲು ಆದೇಶಿಸಿತ್ತು. ಅಲ್ಲದೇ, ಫೆಬ್ರವರಿ 24 ಅಥವಾ 25ರಂದು ದೂರದರ್ಶನ ಮತ್ತು ಎಲ್ಲಾ ಪ್ರಮುಖ ಇಂಗ್ಲಿಷ್‌ ಮತ್ತು ಕನ್ನಡ ಪತ್ರಿಕೆಗಳ ಮುಖೇನ ಎನ್‌ ಕೆ ಮೋಹನ್‌ ರಾಮ್‌ ಅವರಿಗೆ ಜೋಶಿ ಬೇಷರತ್‌ ಕ್ಷಮೆ ಕೋರಬೇಕು ಎಂದು ಕಟ್ಟಪ್ಪಣೆ ಮಾಡಿತ್ತು. 

Kannada Bar & Bench
kannada.barandbench.com