ಯುವಿಸಿಇ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಆಯ್ಕೆ ಠರಾವಿಗೆ ಹೈಕೋರ್ಟ್‌ ತಡೆ

ಠರಾವು ಸ್ವೀಕರಿಸಿದ 2024ರ ಡಿಸೆಂಬರ್ 7ರಂದು ಕೈಗೊಂಡ ನಿರ್ಣಯಗಳನ್ನು ದಾಖಲಿಸಿಕೊಂಡ ದಸ್ತಾವೇಜು ಪುಸ್ತಕವನ್ನು ಜನವರಿ 6ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಕಾರ್ಯದರ್ಶಿಗೆ ನಿರ್ದೇಶಿಸಿರುವ ಹೈಕೋರ್ಟ್‌.
Karnataka High Court
Karnataka High Court
Published on

ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸಂಘದ ಠರಾವಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮಧ್ಯಂತರ ತಡೆ ನೀಡಿದೆ.

ಚುನಾವಣೆ ನಡೆಸಲು ಹಾಲಿ ಪದಾಧಿಕಾರಿಗಳ ಸಂಘದ ಅಡಿಯಲ್ಲಿ ಕೈಗೊಂಡ ಠರಾವನ್ನು ಪ್ರಶ್ನಿಸಿ ಸಂಘದ ಸದಸ್ಯರೂ ಆದ ಮಾಗಡಿ ರಸ್ತೆಯಲ್ಲಿರುವ ವೃಷಭ ಅಷ್ಟಗ್ರಾಮ ಬಡಾವಣೆಯ ಬಿ ಎನ್‌ ಆನಂದ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ ವಿ ಅಮರನಾಥನ್ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಕಾರ ಸಂಘಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್‌, ಮಲ್ಲೇಶ್ವರ ವಿಭಾಗದ ಸಹಕಾರ ಅಭಿವೃದ್ಧಿ ಅಧಿಕಾರಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ್ದು, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.

“ಠರಾವು ಸ್ವೀಕರಿಸಿದ 2024ರ ಡಿಸೆಂಬರ್ 7ರಂದು ಕೈಗೊಂಡ ನಿರ್ಣಯಗಳನ್ನು ದಾಖಲಿಸಿಕೊಂಡ ದಸ್ತಾವೇಜು ಪುಸ್ತಕವನ್ನು ಜನವರಿ 6ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು” ಎಂದು ಪ್ರತಿವಾದಿಯೂ ಆದ ಸಂಘದ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಅರ್ಜಿಯಲ್ಲಿ ಏನಿದೆ?: ಯುವಿಸಿಇ (ಯೂನಿವರ್ಸಿಟಿ ಆಫ್‌ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು) ಹಳೆಯ ವಿದ್ಯಾರ್ಥಿಗಳ ಈ ಸಂಘವು 1950ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ ಮೊದಲ ಎಂಜಿನಿಯರಿಂಗ್‌ ಕಾಲೇಜಾಗಿದೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳ ಸಂಘವು ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳ ಸಂಘಗಳಲ್ಲಿ ಒಂದೆನಿಸಿದೆ. ಸಂಘದ ಸದಸ್ಯರಲ್ಲಿ ಹಲವು ಪ್ರತಿಭಾನ್ವಿತ ಮತ್ತು ಖ್ಯಾತನಾಮರಿದ್ದು, ಅವರೆಲ್ಲಾ ವಿಶ್ವದೆಲ್ಲೆಡೆ ನೆಲೆಸಿದ್ದು ತಂತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ರಾಜ್ಯಕ್ಕೆ ಕೀರ್ತಿಪ್ರಾಯರಾಗಿದ್ದಾರೆ. ಇಂತಹ ಸಂಘದ ಹಾಲಿ ಕಾರ್ಯದರ್ಶಿ ನೇತೃತ್ವದಲ್ಲಿ ಸಂಘದ ಬೈಲಾಗೆ ತರಲಾಗಿರುವ ತಿದ್ದುಪಡಿ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ–1960ಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಸಾಮಾನ್ಯ ಸಭೆ ಮತ್ತು ಚುನಾವಣಾ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

"ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಆಗಾಗ್ಗೆ ಸಭೆ, ವಿಚಾರ ಗೋಷ್ಠಿಗಳನ್ನು ಆಯೋಜಿಸುವ ಮೂಲಕ ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಮತ್ತು ಈ ಕ್ಷೇತ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವುದು ಸಂಘದ ಮೂಲ ಉದ್ದೇಶವಾಗಿದೆ. ಆದರೆ, ಕಳೆದ 26 ವರ್ಷಗಳಿಂದ ಸಂಘದ ಕೆಲವು ಸದಸ್ಯರು ತಮ್ಮದೇ ಆದ ಸ್ವಹಿತಾಸಕ್ತಿಯ ವರ್ತುಲವೊಂದನ್ನು ಸೃಷ್ಟಿಸಿಕೊಂಡು ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಪ್ರಜಾಸತ್ತಾತ್ಮಕ ನಡವಳಿಕೆಗೆ ತಿಲಾಂಜಲಿ ಇರಿಸಿದ್ದಾರೆ" ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

‘ಮತದಾರರ ಯಾದಿಯನ್ನು ಸದಸ್ಯರ ಗಮನಕ್ಕೆ ತಾರದೆ ಕಳೆದ 26 ವರ್ಷಗಳಿಂದ ಅವಿರೋಧ ಆಯ್ಕೆ ಮಾಡಿಕೊಂಡು ಬರಲಾಗುತ್ತಿದೆ. ಈ ಕುರಿತಂತೆ ಬಿ ಎನ್‌ ಆನಂದ ಅವರು ವಿಷಯವನ್ನು ಸಂಬಂಧಿಸಿದ ಸಹಕಾರ ಸಂಘಗಳ ನೋಂದಣಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಪ್ರಯೋಜನವಾಗಿರುವುದಿಲ್ಲ. ಅಂತೆಯೇ, ಈ ಸಂಬಂಧದ ಹೈಕೋರ್ಟ್‌ ನಿರ್ದೇಶನಗಳೂ ಈತನಕ ಪಾಲನೆ ಆಗಿರುವುದಿಲ್ಲ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

Kannada Bar & Bench
kannada.barandbench.com