ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯಲ್ಲಿನ ಅಸ್ಪಷ್ಟತೆ ಸರಿಪಡಿಸಲು ಹೈಕೋರ್ಟ್‌ ಸಲಹೆ

ತೀರ್ಪಿನ ಪ್ರತಿಯನ್ನು ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷರಿಗೆ ರವಾನಿಸುವಂತೆ ಹಾಗೂ ಅವರ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳನ್ನು ಪರಿಗಣಿಸಲು ವಿನಂತಿಸುವಂತೆ ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ಪೀಠ ನಿರ್ದೇಶಿಸಿದೆ.
Justice Suraj Govindraj
Justice Suraj Govindraj
Published on

ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್‌) ಕಾಯಿದೆ ಜಾರಿಯಾಗಿ ಹಲವು ದಶಕಗಳು ಕಳೆದು, ಹಲವು ಬಾರಿ ತಿದ್ದುಪಡಿ ಮಾಡಿದ್ದರೂ ಕಾಯಿದೆಯಲ್ಲಿ ಇನ್ನೂ ಕೆಲ ಅಸ್ಪಷ್ಟತೆಗಳಿದ್ದು, ಅವುಗಳನ್ನು ಸರಿಪಡಿಸಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಅಭಿಪ್ರಾಯಪಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಶಂಕರ್‌ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ‌ ಪೀಠವು ಕಾಯಿದೆಯನ್ನು ಕೂಲಂಕಷ ಪರಿಶೀಲನೆ ಮಾಡಿ ತುರ್ತಾಗಿ ಸಮಗ್ರ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಆದೇಶಿಸಿದೆ.

ಕೆಸಿಎಸ್‌ ಕಾಯಿದೆ 1959 ಹಾಗೂ ಕೆಸಿಎಸ್‌ ನಿಯಮಗಳು 1960 ಅನ್ನು ದಶಕಗಳಿಂದ ಒಂದೊಂದೇ ತಿದ್ದುಪಡಿಗಳಿಗೆ ಒಳಪಡಿಸಲಾಗಿದೆ. ದುರದೃಷ್ಟವಶಾತ್‌, ಅಂತಹ ತಿದ್ದುಪಡಿಗಳನ್ನು ಮಾಡುವಾಗ, ಅಸ್ತಿತ್ವದಲ್ಲಿರುವ ನಿಬಂಧನೆಗಳ ಮೇಲಿನ ಪರಸ್ಪರ ಕ್ರಿಯೆ ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳನ್ನು ಪರಿಗಣಿಸಿಲ್ಲ. ಅದರ ಪರಿಣಾಮ, ಕಾನೂನು ಆಧುನಿಕ ಸಾಮಾಜಿಕ-ಆರ್ಥಿಕ ಪರಿಸರಕ್ಕೆ ಹೊಂದಿಕೆಯಾಗದ ಸಂಘರ್ಷದ ನಿಬಂಧನೆಗಳ ತೇಪೆ ಕೆಲಸ (ಪ್ಯಾಚ್‌ವರ್ಕ್‌)ಆಗಿ ಮಾರ್ಪಟ್ಟಿದೆ. ನ್ಯಾಯಾಲಯಗಳು ಸಾಮರಸ್ಯ ನಿರ್ಮಾಣದ ತತ್ವವನ್ನು ಅನ್ವಯಿಸಲು ಪ್ರಯತ್ನಿಸಿವೆ. ಆದರೆ, ಸಮನ್ವಯವು ಅಸಾಧ್ಯವಾದಾಗ, ಶಾಸಕಾಂಗ ಸುಧಾರಣೆ ಮಾತ್ರ ಕಾರ್ಯಸಾಧ್ಯ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜೊತೆಗೆ, ಕಾಯಿದೆ ಅಡಿ ಬರುವ ಸದಸ್ಯತ್ವ ಹಕ್ಕುಗಳು, ಅನರ್ಹತೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಕಾಲ ಕಾಲಕ್ಕೆ ಚುನಾವಣೆಗಳನ್ನು ನಡೆಸುವುದು, ಆಡಳಿತಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ. ಇಂದು ಸಹಕಾರಿ ಸಂಘಗಳು ನಕಲು ದಾಖಲಾತಿಗಳಿಂದ ತುಂಬಿವೆ, ಸಮಕಾಲೀನ ಅವಶ್ಯಕತೆಗಳನ್ನು ಪರಿಹರಿಸಲು ಕಂಪನಿ ಕಾಯಿದೆಯನ್ನು ಸಮಗ್ರವಾಗಿ ಪರಿಷ್ಕರಿಸಿದಂತೆಯೇ, ಸೆಕ್ಷನ್ 43ಬಿ ಅಡಿಯಲ್ಲಿ ಸಹಕಾರಿ ಸಂಸ್ಥೆಗಳ ಸ್ವಾಯತ್ತತೆಯನ್ನು ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ, ಪಾರದರ್ಶಕತೆ ಮತ್ತು ಹೊಂದಾಣಿಕೆ ಖಾತ್ರಿಪಡಿಸಿಕೊಳ್ಳಲು ಸಹಕಾರಿ ಕಾನೂನನ್ನು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ತಿದ್ದು ಮಾಡಬೇಕು. ಅಂತಹ ಸುಧಾರಣೆ ಇಲ್ಲದೆ ಸಹಕಾರಿಗಳು ವ್ಯರ್ಥ ಮೊಕದ್ದಮೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಸದಸ್ಯರ ಸಬಲೀಕರಣದ ನಿಜವಾದ ಉದ್ದೇಶ ವಿಫಲವಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.

ಇದೇ ವೇಳೆ ಪೀಠವು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ಆದಾಯ ತೆರಿಗೆ ಕಾಯಿದೆಯನ್ನು ಉಲ್ಲೇಖಿಸಿ, ಆದಾಯ ತೆರಿಗೆ ಕಾಯಿದೆ 1961 ಅನ್ನು ಆರು ದಶಕಗಳಲ್ಲಿ 65ಕ್ಕೂ ಅಧಿಕ ಬಾರಿ ತಿದ್ದುಪಡಿ ಮಾಡಲಾಗಿದ್ದು, ಅದು ತುಂಬ ಜಟಿಲವಾಗಿದೆ. ಹೊಸ ಕಾನೂನು, ಅಸ್ತಿತ್ವದಲ್ಲಿರುವ ತೆರಿಗೆ ತತ್ವಗಳನ್ನು ಹೆಚ್ಚಾಗಿ ಉಳಿಸಿಕೊಂಡಿದೆ, ಪಠ್ಯವನ್ನು ಸರಳೀಕರಿಸುವ ಮತ್ತು ಅನಗತ್ಯ ನಿಯಮಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ತಿದ್ದುಪಡಿ ಮಾಡುವಾಗ ಮೊಕದ್ದಮೆಗಳನ್ನು ತಗ್ಗಿಸಲು ಮತ್ತು ತೆರಿಗೆದಾರರಿಗೆ ಅನುಸರಣೆಯನ್ನು ಸುಲಭಗೊಳಿಸುವ ನಿಬಂಧನೆಗಳಿರಬೇಕು. ಸದ್ಯದ ಶಾಸನವನ್ನು ಬದಲಿಸಲು ಕರ್ನಾಟಕಕ್ಕೆ ಹೊಸ, ಸಮಾಧಾನಕರ ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮದ ಅಗತ್ಯವಿದೆ. ಕರ್ನಾಟಕ ಸಹಕಾರ ಸಂಘಗಳ ಚೌಕಟ್ಟಿನ ಅಡಿಯಲ್ಲಿ ನೋಂದಣಾಧಿಕಾರಿಗಳ ಮುಂದೆ ಮತ್ತು ಈ ನ್ಯಾಯಾಲಯದ ಮುಂದೆ ಉದ್ಭವಿಸುವ ವಿವಾದಗಳ ಬೃಹತ್‌ ಪ್ರಮಾಣ ಗಮನಿಸಿದರೆ, ತಾರ್ಕಿಕ ರೀತಿಯಲ್ಲಿ ಕೆಸಿಎಸ್‌ ಕಾನೂನಿಗೆ ಸಮಗ್ರ ತಿದ್ದುಪಡಿವ ತರುವ ಕೆಲಸ ಆಗಬೇಕಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಈ ತೀರ್ಪಿನ ಪ್ರತಿಯನ್ನು ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷರಿಗೆ ರವಾನಿಸುವಂತೆ ಹಾಗೂ ಅವರ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳನ್ನು ಪರಿಗಣಿಸಲು ವಿನಂತಿಸುವಂತೆ ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ಪೀಠ ನಿರ್ದೇಶಿಸಿದೆ.

Kannada Bar & Bench
kannada.barandbench.com