ಗಾಯಕ ಲಕ್ಕಿ ಅಲಿ ವಿರುದ್ದ ದೂರು: ಜ.6ಕ್ಕೆ ಇತ್ಯರ್ಥಪಡಿಸಲಿದೆ ಹೈಕೋರ್ಟ್‌

ಲಕ್ಕಿ ಅಲಿ ಪರವಾಗಿ ಮಧ್ಯಂತರ ತಡೆ ನೀಡುವಾಗ ದೂರುದಾರೆ ಬುಜ್ಜಮ್ಮ ಅವರ ಸೊಸೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಎಂಬ ಏಕೈಕ ವಿಚಾರವನ್ನು ನ್ಯಾಯಾಲಯ ಪರಿಗಣಿಸಿದೆ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ.
Lucky Ali & Karnataka HC
Lucky Ali & Karnataka HC
Published on

ಬಾಲಿವುಡ್‌ ಗಾಯಕ ಮಕ್ಸೂದ್‌ ಅಲಿ ಅಲಿಯಾಸ್‌ ಲಕ್ಕಿ ಅಲಿ ಮತ್ತು ಅವರ ಬೆಂಬಲಿಗ ಬೆಂಗಳೂರಿನ ವಾಸುದೇವಪುರದಲ್ಲಿರುವ (ಕೆಂಚೇನಹಳ್ಳಿ) ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್‌ ಹೊಡೆದು, ಗಿಡಗಳನ್ನು ನಾಶಪಡಿಸಿ ಸುಮಾರು ರೂ. 75 ಲಕ್ಷ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಅತ್ತೆ ದಾಖಲಿಸಿರುವ ಎಫ್‌ಐಆರ್‌ ಮತ್ತು ಅದರ ಸಂಬಂಧಿತ ನ್ಯಾಯಾಂಗ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಿಸ್ತರಿಸಿದ್ದು, ಜನವರಿ 6ರಂದು ಅಂತಿಮವಾಗಿ ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದಿದೆ.

ಗಾಯಕ ಲಕ್ಕಿ ಅಲಿ ಮತ್ತು ಬೆಂಗಳೂರಿನ ಮೈಲಪ್ಪನಹಳ್ಳಿಯ ಶ್ರೀನಿವಾಸ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರೋಹಿಣಿ ಸಿಂಧೂರಿ ಅವರ ಅತ್ತೆ ಜಿ ಬುಜ್ಜಮ್ಮ ಪ್ರತಿನಿಧಿಸಿರುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ನ್ಯಾಯಾಲಯವು ತಮಗೆ ಔಪಚಾರಿಕ ನೋಟಿಸ್‌ ಜಾರಿ ಮಾಡದಿದ್ದರೂ ಮಾಧ್ಯಮಗಳು ನೋಟಿಸ್‌ ಜಾರಿ ಮಾಡಿವೆ. ಸೊಸೆ ರೋಹಿಣಿ ಸಿಂಧೂರಿ ಅವರ ಫೋಟೊವನ್ನು ಎಲ್ಲಾ ಕಡೆ ಬಳಕೆ ಮಾಡಲಾಗಿದೆ. ತನ್ನ ಫೋಟೊ ಬದಲಿಗೆ ರೋಹಿಣಿಯವರ ಫೋಟೊವನ್ನು ಏಕೆ ಬಳಸಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಅರ್ಜಿದಾರರ ಪರವಾಗಿ ಮಧ್ಯಂತರ ತಡೆ ನೀಡುವಾಗ ದೂರುದಾರೆ ಬುಜ್ಜಮ್ಮ ಅವರ ಸೊಸೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಎಂಬ ಏಕೈಕ ವಿಚಾರವನ್ನು ನ್ಯಾಯಾಲಯ ಪರಿಗಣಿಸಿದೆ” ಎಂದು ಆಕ್ಷೇಪಿಸಿದರು.

ಮುಂದುವರಿದು “ಅರ್ಜಿಯಲ್ಲಿ ವಾಸ್ತವಿಕ ವಿಚಾರಗಳನ್ನು ಮರೆಮಾಚಲಾಗಿದೆ. 1991ರಲ್ಲಿ ಲಕ್ಕಿ ಅಲಿ ಮತ್ತು ಅವರ ಸಹೋದರ ಆಸ್ತಿ ಮಾರಾಟ ಮಾಡಿದ್ದಾರೆ. 1993ರಲ್ಲಿ ದಾವೆ ಹೂಡಿದ್ದರು. ಆನಂತರ ಸಂಧಾನ ನಡೆದಿತ್ತು. ಭೂಮಿಯು ಸದ್ಯ ಖರೀದಿ ಮಾಡಿದವರ ವಶದಲ್ಲಿದ್ದು, ಅವರೇ ಪೂರ್ಣ ಮಾಲೀಕರಾಗಿದ್ದಾರೆ ಎಂದು ಹೇಳಲಾಗಿದೆ. ಮೊದಲ ಬಾರಿಯ ಸಂಧಾನದ ನಂತರ ಮತ್ತೊಮ್ಮೆ ಲಕ್ಕಿ ಅಲಿ ಅವರು ಇನ್ನೊಂದು ದಾವೆ ಹೂಡಿದ್ದಾರೆ” ಎಂದರು.

Also Read
ಐಎಎಸ್‌ ಅಧಿಕಾರಿ ಸಿಂಧೂರಿ ಅತ್ತೆಯಿಂದ ದೂರು: ಬಾಲಿವುಡ್‌ ಗಾಯಕ ಲಕ್ಕಿ ಅಲಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ವಿಚಾರಣಾಧೀನ ನ್ಯಾಯಾಲಯವು ಆರು ವರ್ಷಗಳ ಹಿಂದೆ ನಮ್ಮ ಪರವಾಗಿ ಲಕ್ಕಿ ಅಲಿ ವಿರುದ್ಧವಾಗಿ ಪ್ರತಿಬಂಧಕಾದೇಶ ಮಾಡಿತ್ತು. ಮೆರಿಟ್‌ ಆಧಾರದಲ್ಲಿ ಅಕ್ಟೋಬರ್‌ನಲ್ಲಿ ಪ್ರತಿಬಂಧಕಾದೇಶ ತೆರವಾಗಿದೆ. ನಾವು ಎಂಎಫ್‌ಎ (ಮಿಸಲೇನಿಯಸ್‌ ಫಸ್ಟ್‌ ಅಪೀಲ್‌) ಹಾಕಿದ್ದು, ತಕ್ಷಣ ಅವರು ಕೇವಿಯಟ್‌ ಹಾಕಿದ್ದಾರೆ. ಡಿಸೆಂಬರ್‌ 4ರಂದು ಈ ನ್ಯಾಯಾಲಯವು ಪ್ರತಿಬಂಧಕಾದೇಶ ಮಾಡಿದೆ. ಈ ನಡುವೆ ಲಕ್ಕಿ ಅಲಿ ಮತ್ತು ಅವರ ಕಡೆಯವರು ಜಮೀನಿನ ಕಾಂಪೌಂಡ್‌ ನಾಶಪಡಿಸಿದ್ದಾರೆ. ಅರ್ಜಿಯಲ್ಲಿ ಉಲ್ಲೇಖಿಸಿರುವ ಆಧಾರಗಳಲ್ಲಿ ವಾಸ್ತವಿಕ ವಿಚಾರಗಳನ್ನು ಬಚ್ಚಿಡಲಾಗಿದೆ” ಎಂದು ದೂರಿದರು.

ವಾದ ಆಲಿಸಿದ ಪೀಠವು 2025ರ ಜನವರಿ 6ರಂದು ಅಂತಿಮವಾಗಿ ಅರ್ಜಿ ಇತ್ಯರ್ಥಪಡಿಸಲಾಗುವುದು ಎಂದಿತು.

Kannada Bar & Bench
kannada.barandbench.com