

ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರದ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ರಣವೀರ್ ಸಿಂಗ್ ಕ್ರಿಮಿನಲ್ ವಿಚಾರಣಾ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಮತ್ತು ಪ್ರಕರಣದ ಖಾಸಗಿ ದೂರುದಾರ ಪ್ರಶಾಂತ್ ಮೆಥಲ್ ಅವರನ್ನು ಪ್ರತಿವಾದಿಯಾಗಿಸಿದ್ದಾರೆ.
ರಣವೀರ್ ಸಿಂಗ್ ಪರ ವಕೀಲರು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠದ ಮುಂದೆ ಹಾಜರಾಗಿ ಅರ್ಜಿದಾರರು ಬಾಲಿವುಡ್ ನಟರಾಗಿದ್ದಾರೆ. ರಣವೀರ್ ಸಿಂಗ್ ಕಾಂತರಾ ಚಾಪ್ಟರ್ -1 ರ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟನೆ ಬಗ್ಗೆ ಪ್ರಾಮಾಣಿಕವಾಗಿ ಹೊಗಳಿ ಮಾತನಾಡಿದ್ದಾರೆ. ಆದರೆ, ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ. ಪ್ರಕರಣದಲ್ಲಿನ ಖಾಸಗಿ ದೂರುದಾರರು ವಕೀಲರಾಗಿದ್ದಾರೆ. ಅರ್ಜಿಯನ್ನು ಇಂದು ಮಧ್ಯಾಹ್ನ 2.30ಕ್ಕೆ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಏಕೆ, ತುರ್ತು ವಿಚಾರಣೆ ನಡೆಸಬೇಕು? ಅರ್ಜಿದಾರರು ಬಾಲಿವುಡ್ ನಟರೆಂಬ ಕಾರಣಕ್ಕಾಗಿಯೇ? ಹಾಲಿವುಡ್‌ನವರಾದರೆ ಈಗಲೇ ವಿಚಾರಣೆ ನಡೆಸಬೇಕಾ?” ಎಂದು ಪ್ರಶ್ನಿಸಿದರು.
ರಣವೀರ್ ಪರ ವಕೀಲರು “ಪೊಲೀಸರು ಅರ್ಜಿದಾರರಿಗೆ ಈಗಾಗಲೇ ಎರಡು ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ, ತುರ್ತು ವಿಚಾರಣೆಗೆ ಕೋರಲಾಗುತ್ತಿದೆ” ಎಂದು ಪೀಠದ ಗಮನಕ್ಕೆ ತಂದರು. ಈ ಮನವಿಗೆ ಒಪ್ಪಿದ ಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಪ್ರಶಾಂತ್ ಮೆಥಲ್ ಎಂಬುವವರು 1ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಗೋವಾದಲ್ಲಿ ಕಳೆದ 2025ರ ನವೆಂಬರ್ 28ರಂದು ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರ ಚಾಪ್ಟರ್-1 ಕುರಿತು ಮಾತನಾಡಿದ್ದರು. ಈ ವೇಳೆ ಚಿತ್ರದ ಕರಾವಳಿ ಕರ್ನಾಟಕ ಭಾಗದ ಪಂಜುರ್ಲಿ/ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಿಸಿದ್ದಾರೆ. ಇನ್ನೂ ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಇದರಿಂದ ಚಾವುಂಡಿ ದೈವದ ಭಕ್ತರ ಮನಸ್ಸಿಗೆ ನೋವಾಗಿದೆ. ಆ ಮೂಲಕ ರಣವೀರ್, ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ್ದಾರೆ. ಹೀಗಾಗಿ, ರಣವೀರ್ ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯವು ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಬಿಎನ್‌ಎಸ್ ಸೆಕ್ಷನ್ 196, 299 ಮತ್ತು 302 ಅಡಿಯಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸಿದ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗಲು ರಣವೀರ್‌ಗೆ ನೋಟಿಸ್ ನೀಡಿದ್ದರು. ಇದರಿಂದ ಪ್ರಕರಣ ರದ್ದತಿಗೆ ಕೋರಿ ರಣವೀರ್ ಹೈಕೋರ್ಟ್ ಮೊರೆ ಹೋಗಿದ್ದಾರೆ.