![[ಸಹಾಯಕ ಎಂಜಿನಿಯರ್ ನೇಮಕದಲ್ಲಿ ಅಕ್ರಮ] ಸೂಕ್ತ ಸಂದರ್ಭದಲ್ಲಿ ಪ್ರಕರಣ ಸಿಬಿಐ ತನಿಖೆಗೆ: ಹೈಕೋರ್ಟ್](http://media.assettype.com/barandbench-kannada%2F2025-03-18%2F7jqk4nwb%2FWhatsApp-Image-2025-03-18-at-14.44.39.jpeg?w=480&auto=format%2Ccompress&fit=max)
ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮದ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವಿರುದ್ದ ಕಟು ಟೀಕೆ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ಸೂಕ್ತ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮಂಗಳವಾರ ಆದೇಶಿಸಿದೆ.
ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಮತ್ತು ಕೆಪಿಎಸ್‌ಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ರೊಬೆನ್ ಜಾಕಬ್ ಅವರಿಗೆ ನಿರ್ದಿಷ್ಟ ಪ್ರಶ್ನೆಗಳನ್ನು ಹಾಕುವ ಮೂಲಕ ಕೆಪಿಎಸ್‌ಸಿಯಲ್ಲಿನ ಲೋಪಗಳು ಮತ್ತು ಸರ್ಕಾರದ ಉದ್ದೇಶಪೂರ್ವಕ ವಿಫಲತೆಯನ್ನು ಪೀಠವು ಅನಾವರಣಗೊಳಿಸಿತು.
ವಿಚಾರಣೆ ಒಂದು ಹಂತದಲ್ಲಿ ಪೀಠವು “ನಾವು ಏನು ಮಾಡಿದರೂ ನಡೆದು ಹೋಗುತ್ತದೆ ಎಂಬ ಸೊಕ್ಕಿನ ನಡತೆಯನ್ನು ತಕ್ಷಣ ಸಂಬಂಧಪಟ್ಟವರು ಬಿಡಬೇಕು. ಅಲೆಕ್ಸಾಂಡರ್‌ನಂಥವನು ಕಾಲಗರ್ಭದಲ್ಲಿ ಮುಗಿದು ಹೋಗಿದ್ದಾನೆ. ಏನು ಮಾಡಿದರೂ ನಾವು ಬಿಡಲ್ಲ. ನಾವು ಹಾಗೆ ನಿಲ್ಲುತ್ತವೆ. ನಾವು ಇಲ್ಲಿ ಏನು ಮಾಡಿದರೂ ನಡೆಯುತ್ತದೆ. ಸಂಬಂಧಿತರಿಗೆ ಗಂಭೀರ ಹಾನಿ ಮಾಡಲಾಗುವುದು” ಎಂದರು.
ನ್ಯಾಯಾಲಯ ಕೇಳಿದ ಪ್ರಶ್ನೆಗೆ ಕಾಲಾವಕಾಶ ಕೋರುತ್ತಿದ್ದ ಎಜಿ ಮತ್ತು ಕೆಪಿಎಸ್‌ಸಿ ವಕೀಲರನ್ನು ಕುರಿತು ಪೀಠವು “ನಾಳೆ ಒಂದು ಲಾರಿ ತೆಗೆದುಕೊಂಡು ಹೋಗಿ ದಾಖಲೆಗಳನ್ನು ತಂದು ಇಟ್ಟುಕೊಂಡು ಬಿಡಿ. ನಾವು ಕೇಳಿದಂಗೆ ಉತ್ತರ ನೀಡಬೇಕು. ಕಾಲಹರಣ ಮಾಡಬಾರದು” ಎಂದಿತು.
“ಈ ಪ್ರಕರಣದಲ್ಲಿ ಸಿಒಡಿ, ಸಿಐಡಿಯಿಂದ ಏನೂ ಮಾಡಲಾಗುವುದಿಲ್ಲ. ಏಕೆಂದರೆ ಅವೆಲ್ಲವೂ ರಾಜ್ಯ ಸರ್ಕಾರದ ನಿಯಂತ್ರಣದಲ್ಲೇ ಇರುತ್ತವೆ. ಬೇರೆಬೇರೆ ರಾಜ್ಯದಲ್ಲಿ ಇಂಥ ಪ್ರಕರಣಗಳಲ್ಲಿ ಯಾರಕಡೆಯಿಂದ ತನಿಖೆ ಮಾಡಿಸಲಾಗಿದೆ ಎಂಬುದರ ಮಾಹಿತಿಯನ್ನು ಒದಗಿಸಬೇಕು. ಪ್ರಕರಣದಲ್ಲಿ ಸಿಬಿಐ ಅನ್ನು ಪ್ರತಿವಾದಿಯಾಗಿ ಮಾಡಲು ಯಾರಿಗಾದರೂ ಆಕ್ಷೇಪಣೆ ಇದೆಯೇ?” ಎಂದಿತು.
ಇದಕ್ಕೆ ಎಜಿ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಪೀಠವು “ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಯಾಗಿರುವ ಎಲ್ಲರಿಗೂ ತಿಳಿಸುವುದೇನೆಂದರೆ ಸೂಕ್ತ ಸಂದರ್ಭದಲ್ಲಿ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್ ಸ್ಥಾಪನಾ ಕಾಯಿದೆ ಅಡಿ ಸಿಬಿಐಗೆ ನೀಡುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಈ ಸಂಬಂಧ ಪಕ್ಷಕಾರರು ಪರ/ವಿರೋಧ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಈ ಸಂಬಂಧ ಅರ್ಹ ನಿರ್ಧಾರವನ್ನು ಸೂಕ್ತ ಸಂದರ್ಭದಲ್ಲಿ ಕೈಗೊಳ್ಳಲಾಗುವುದು. ಹೀಗಾಗಿ, ವಿಚಾರಣೆಯ ಸಂದರ್ಭದಲ್ಲಿ ಸಿಬಿಐ/ಎನ್‌ಐಎ ಪರ ವಕೀಲ ಪಿ ಪ್ರಸನ್ನಕುಮಾರ ಅವರು ಲಭ್ಯರಿರಬೇಕು” ಎಂದು ಆದೇಶಿಸಿತು. ಅಲ್ಲದೇ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ವಿಚಾರಣೆಯ ಒಂದು ಹಂತದಲ್ಲಿ ಕೆಪಿಎಸ್‌ಸಿ ಪರ ವಕೀಲ ರೊಬೆನ್ ಜಾಕಬ್ ಅವರು “ಸಹಾಯಕ ಎಂಜಿನಿಯರ್ ನೇಮಕಾತಿಯಲ್ಲಿನ ಹಗರಣದ ತನಿಖೆಗಾಗಿ ಕೆಪಿಎಸ್‌ಸಿಯ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಲಿಖಿತವಾಗಿ ೨೦೨೪ರ ಫೆಬ್ರವರಿ ೨ರಂದು ಮುಖ್ಯ ಕಾರ್ಯದರ್ಶಿಗೆ ತಿಳಿಸಲಾಗಿತ್ತು. ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ನಿರ್ಣಯದ ಮೂಲಕ ಕೆಪಿಎಸ್‌ಸಿಯು ತಿಳಿಸಿತ್ತು. ಆದರೆ, ಅವರು ಎಫ್‌ಐಆರ್ ದಾಖಲಿಸಿರಲಿಲ್ಲ. ಈ ಎಲ್ಲಾ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿತ್ತು” ಎಂದರು.
ಇದನ್ನು ಉಲ್ಲೇಖಿಸಿದ ಪೀಠವು ತನಿಖೆ ವಿಚಾರವನ್ನು ಕೆಪಿಎಸ್‌ಸಿ ತಿಳಿಸಿದರೂ ಸರ್ಕಾರವು ಹೇಗೆ ನೇಮಕಾತಿ ಆದೇಶಗಳನ್ನು ನೀಡಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ನ್ಯಾಯಾಲಯ ಪ್ರಶ್ನಿಸಿದಾಗ ಅವರು “ಸಹಾಯಕ ಎಂಜಿನಿಯರ್‌ಗಳ ಅಗತ್ಯ ತುಂಬಾ ಇತ್ತು. ಅಲ್ಲದೇ, ಇದೇ ಸಂದರ್ಭದಲ್ಲಿ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ನಡೆಯುತ್ತಿತ್ತು” ಎಂದು ಸಮರ್ಥನೆ ನೀಡಲು ಮುಂದಾದರು. ಇದರಿಂದ ಕೆರಳಿದ ಪೀಠವು “ಹಾಗಾದರೆ ಮಾರ್ಕೆಟ್‌ನಲ್ಲಿ ಕುಳಿತಿರುವವರನ್ನು ಕೂಡ್ರಿಸಿಬಿಡಿ. ಸಿಐಡಿ ತನಿಖೆ ಅಗತ್ಯವಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಲಿಖಿತವಾಗಿ ಹೇಳಿರುವಾಗ ನೇಮಕಾತಿ ಆದೇಶ ನೀಡಿರುವುದು ಹಿಂದೆದೂ ಕಂಡಿರದ ನಡೆಯಾಗಿದೆ. ಇದೆಲ್ಲವೂ ಹಾಗೆ ಆಗಿರಲು ಸಾಧ್ಯವಿಲ್ಲ. ವ್ಯವಹಾರ ಏನಾಗಿದೆ ಎಂದು ಎಸ್‌ಎಸ್‌ಎಲ್‌ಸಿ ಓದಿರುವವರಿಗೂ ಗೊತ್ತಿರುತ್ತದೆ. ವ್ಯವಹಾರ ಎಂದರೆ ಬೇರೆ ಏನೋ ಎಂದು ತಿಳಿದುಕೊಳ್ಳಬೇಡಿ. ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗುವುದು ಇದೆ. ಅದರಿಂದ ಹಲವರಿಗೆ ಮುಜುಗರವಾಗಲಿದೆ ಮಿಸ್ಟರ್ ಅಡ್ವೊಕೇಟ್ ಜನರಲ್” ಎಂದೂ ಮೌಖಿಕವಾಗಿ ಹೇಳಿತು.