ಕರ್ನಾಟಕ ಹೈಕೋರ್ಟ್‌ನ ಮೂರೂ ಪೀಠಗಳಲ್ಲಿನ ವಿವಿಧ ಆರು ರಿಜಿಸ್ಟ್ರಾರ್, ಜಿಲ್ಲಾ, ಹಿರಿಯ ಸಿವಿಲ್ ಮತ್ತು ಸಿವಿಲ್ ನ್ಯಾಯಾಧೀಶರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ.
ಆರು ಮಂದಿ ಜಿಲ್ಲಾ ನ್ಯಾಯಾಧೀಶರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರನ್ನು ಹೈಕೋರ್ಟ್ ವಿವಿಧ ಪೀಠಗಳಿಗೆ ರಿಜಿಸ್ಟ್ರಾರ್‌ಗಳಾಗಿ ನೇಮಕ ಮಾಡಲಾಗಿದೆ.
16 ಮಂದಿ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ (ಆಡ್ ಹೋಕ್) ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿದೆ. 62 ಮಂದಿ ಹಿರಿಯ ಸಿವಿಲ್ ನ್ಯಾಯಾಧೀಶರನ್ನು ವಿವಿಧೆಡೆಗೆ ವರ್ಗಾವಣೆ ಮಾಡಲಾಗಿದೆ.
112 ಮಂದಿ ಜಿಲ್ಲಾ ನ್ಯಾಯಾಧೀಶರು, 166 ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ 138 ಸಿವಿಲ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪ್ರತ್ಯೇಕವಾಗಿ ಹೊರಡಿಸಿರುವ ನಾಲ್ಕು ಅಧಿಸೂಚನೆಗಳಲ್ಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಕೆ ಎಸ್ ಭರತ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಹಿರೇಮಠ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆಯಾಗಿ, ಚಿತ್ರದುರ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ ಬಿ ಗೀತಾ ಅವರನ್ನು ಬೆಂಗಳೂರು ಗ್ರಾಮಾಂತರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಯಾಗಿ, ಮಂಡ್ಯದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ ಜೆ ರಮಾ ಅವರನ್ನು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಯಾಗಿ ಹಾಗೂ ಹಾಸನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ತ್ಯಾಗರಾಜ ಎನ್ ಇನವಲ್ಲಿ ಅವರನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ಎಲ್ ರಘುನಾಥ್ ಅವರನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧದ ಕಡತವು ಸರ್ಕಾರಕ್ಕೆ ಕಳುಹಿಸಲಾಗಿದೆ.
ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಅವರನ್ನು ಹೈಕೋರ್ಟ್‌ನ ಧಾರವಾಡ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಆಗಿ, ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿ ಅಧಿಕೃತ ಕರ್ತವ್ಯದಲ್ಲಿರುವ ವೆಂಕಟೇಶ್ ಆರ್ ಹುಲಗಿ ಅವರನ್ನು ಬೆಂಗಳೂರು ಪೀಠದ ಸಾಂಖ್ಯಿಕ ಮತ್ತು ಪರಿಶೀಲನಾ ರಿಜಿಸ್ಟ್ರಾರ್ ಹುದ್ದೆಗೆ, ಬೆಂಗಳೂರು ಪೀಠದ ಆಡಳಿತಾತ್ಮಕ ರಿಜಿಸ್ಟ್ರಾರ್ ಇ ರಾಜೀವ್ ಗೌಡ ಅವರನ್ನು ನ್ಯಾಯಾಂಗ ರಿಜಿಸ್ಟ್ರಾರ್ ಹುದ್ದೆಗೆ, ಬೆಂಗಳೂರು ಪೀಠದ ಸಾಂಖ್ಯಿಕ ಮತ್ತು ಪರಿಶೀಲನಾ ರಿಜಿಸ್ಟ್ರಾರ್ ಬಸವರಾಜ ಚೆಂಗಟಿ ಅವರನ್ನು ಕಲಬುರ್ಗು ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಹುದ್ದೆಗೆ, ಬೆಂಗಳೂರಿನ 4ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ವಿ ನಾಗರಾಜ ಅವರನ್ನು ಹೈಕೋರ್ಟ್‌ನ ಆಡಳಿತ ವಿಭಾಗದ ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿದೆ. ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿ ಉಪ ಕಾರ್ಯದರ್ಶಿ ಗಣಪತಿ ಪ್ರಶಾಂತ್ ಎಂ ಅವರನ್ನು ಹೈಕೋರ್ಟ್‌ನ ಅಧಿಕೃತ ಕರ್ತವ್ಯದ ಹಿರಿಯ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇಮಕ ಮಾಡಲಾಗಿದೆ.