ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

“ಮಾರ್ಗಸೂಚಿಯ ಹಿಂದೆ ಮೇಲ್ನೋಟಕ್ಕೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತ ಉದ್ದೇಶವಿದೆ. ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಅದೇ ತರಗತಿಯಲ್ಲಿ ಉಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಮಾರ್ಗಸೂಚಿಯಲ್ಲಿ ಹಸ್ತಕ್ಷೇಪ ಮಾಡಲಾಗದು” ಎಂದಿರುವ ಪೀಠ.
School Children
School Children

ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಮೊದಲನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು 2022ರ ಜುಲೈ 26ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ನಾಲ್ಕು ವರ್ಷದ ಪುತ್ರಿ ಪ್ರಸಕ್ತ ವರ್ಷದಲ್ಲಿ ಎಲ್‌ಕೆಜಿ ಕಲಿಯಲು ಅನುಮತಿಸಬೇಕು ಎಂದು ಕೋರಿ ಬೆಂಗಳೂರಿನ ಅನಿಕೇತ್‌ (ಮಗುವಿನ ತಂದೆ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಮಾರ್ಗಸೂಚಿಯ ಹಿಂದೆ ಮೇಲ್ನೋಟಕ್ಕೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತ ಉದ್ದೇಶವಿದೆ ಎಂದು ನ್ಯಾಯಾಲಯಕ್ಕೆ ಅರ್ಥವಾಗಿದೆ. ಹೀಗಾಗಿ, ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಅದೇ ತರಗತಿಯಲ್ಲಿ ಉಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಮಾರ್ಗಸೂಚಿಯಲ್ಲಿ ಹಸ್ತಕ್ಷೇಪ ಮಾಡಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಅಳವಡಿಸಿಕೊಂಡಿದ್ದು, ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ಮತ್ತು ಗರಿಷ್ಠ ಅರ್ಹತಾ ಮಾನದಂಡವನ್ನು ಸರಿಯಾಗಿ ಮಾರ್ಪಾಡು ಮಾಡಿದೆ. ವಿದ್ಯಾಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸಿರುವ ಪ್ರವೇಶಾತಿ ಮಾರ್ಗಸೂಚಿಗಳು ಸಿಂಧುವಾಗಿದ್ದು, ಎನ್‌ಇಪಿಗೆ ಅನುಗುಣವಾಗಿವೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

“ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ಶಿಕ್ಷಣ ಇಲಾಖೆಯ ಮೂಲಕ ಕೇಂದ್ರ ಸರ್ಕಾರ ನಡೆಸುತ್ತಿದೆ. ಹೀಗಾಗಿ, ವಿದ್ಯಾಕೇಂದ್ರವು ಎನ್‌ಇಪಿ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಜಾಗತಿಕ ಶೈಕ್ಷಣಿಕ ಮಾರ್ಗಸೂಚಿಗಳನ್ನು ಆಧರಿಸಿ ಪ್ರವೇಶಾತಿ ವಯಸ್ಸನ್ನು ಎನ್‌ಇಪಿ ಮಾನದಂಡಗಳಲ್ಲಿ ಸೇರಿಸಲಾಗಿದೆ. ಮಕ್ಕಳಿಗೆ ಸರಿಯಾದ ಆರೈಕೆ ಮತ್ತು ಶಿಕ್ಷಣ ನೀಡಬೇಕು. ಆಟ ಕೇಂದ್ರಿತ, ಚಟುವಟಿಕೆ ಕೇಂದ್ರಿತ, ಹೊಂದಿಕೊಳ್ಳುವ ಕಲಿಕೆಯ ಭರವಸೆಯ ಹಿನ್ನೆಲೆಯಲ್ಲಿ ತಜ್ಞರು ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ಮಕ್ಕಳು ಪ್ರೌಢ ಶಿಕ್ಷಣ ಪಡೆಯುವಾಗ ಅವರಲ್ಲಿ ಪರೀಕ್ಷಾ ಸಂಬಂಧಿ ಒತ್ತಡ ಮತ್ತು ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಸಮಗ್ರ ನೀತಿ ರೂಪಿಸಲಾಗಿದೆ ಎಂದು ತಜ್ಞರು ಹೇಳಿರುವಾಗ ಸಕ್ಷಮ ಪ್ರಾಧಿಕಾರ ರೂಪಿಸಿರುವ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರವಾಗಿ ವಾದಿಸಿದ್ದ ವಕೀಲ ಕೆ ಎನ್‌ ಶ್ರೀನಿವಾಸ ಅವರು “2020ರ ಮೇ 11ರ ಅಧಿಸೂಚನೆಯ ಪ್ರಕಾರ ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 5.5 ವರ್ಷ ಆಗಿರಬೇಕು. ಎಲ್‌ಕೆಜಿಗೆ ಮಗು ಸೇರಿಸಲು 3.5 ವರ್ಷ ಆಗಿರಬೇಕು ಎಂದು ಹೇಳಲಾಗಿದೆ. ಈ ಅಧಿಸೂಚನೆಯು ತಮಗೆ ಅನ್ವಯವಾಗುತ್ತದೆಯೇ ವಿನಾ ಆಕ್ಷೇಪಾರ್ಹವಾದ ಅಧಿಸೂಚನೆ ಅನ್ವಯಿಸುವುದಿಲ್ಲ” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ಅವರು “ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009ರ ನಿಬಂಧನೆಗಳು ಮತ್ತು ಎನ್‌ಇಪಿಯನ್ನು ಗಮನದಲ್ಲಿಟ್ಟುಕೊಂಡು ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ಮಿತಿ ನಿಗದಿಪಡಿಸಲಾಗಿದೆ” ಎಂದು ಸಮರ್ಥಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಮ್ಮ ಪುತ್ರಿಯನ್ನು ಪ್ರಸಕ್ತ ವರ್ಷ ಎಲ್‌ಕೆಜಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಕೆಯ ಪೋಷಕರು ಕೋರಿದ್ದರು. ಇದನ್ನು ಮನ್ನಿಸಿ, ಈ ಸಂಬಂಧ ಶಾಲೆಯು ಶುಲ್ಕವನ್ನೂ ವಸೂಲಿ ಮಾಡಿತ್ತು.

ಮಗುವು 2023ರ ಜೂನ್‌ 1ಕ್ಕೆ ಸರಿಯಾಗಿ ನಾಲ್ಕು ವರ್ಷ ಪೂರ್ಣಗೊಳಿಸದಿರುವುದರಿಂದ ಆಕೆ ಎಲ್‌ಕೆಜಿಗೆ ಪ್ರವೇಶ ಪಡೆಯಲು ಅರ್ಹಳಲ್ಲ ಎಂದು ಶಾಲೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರ 2018ರ ಮೇ 23ರ ಆದೇಶ ಉಲ್ಲೇಖಿಸಿ (ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿರುವ ಆದೇಶ) 2023ರ ಮೇ 27ರಂದು ಪೋಷಕರಿಗೆ ಶಾಲೆಯು ಈಮೇಲ್‌ ಕಳುಹಿಸಿತ್ತು. ಮಗುವನ್ನು ನರ್ಸರಿಯಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು. 2018ರ ಮೇ 23ರ ಆದೇಶದಲ್ಲಿ ರಾಜ್ಯ ಸರ್ಕಾರವು ಒಂದನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಲ್ಲಿ ಆರು ವರ್ಷ ತುಂಬಿರಬೇಕು ಎಂದು ಹೇಳಿದೆ ಎನ್ನಲಾಗಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

Attachment
PDF
Tishika Aniket Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com