
ರೌಡಿ ಶೀಟರ್ ರಾಜೇಶ್ ಅಲಿಯಾಸ್ ಮೊಟ್ಟೆ ಎಂಬಾತನನ್ನು ಕೊನೆಯ ಅಪರಾಧ ದಾಖಲಾದ 164 ದಿನಗಳ ನಂತರ ಗೂಂಡಾ ಕಾಯಿದೆ ಅಡಿ ಬಂಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ.
ರಾಜೇಶ್ ಬಂಧನ ಆಕ್ಷೇಪಿಸಿ ಆತನ ಪತ್ನಿ ಪ್ರಿಯದರ್ಶಿನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಟಿ ಎಂ ನದಾಫ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.
“ಬಂಧನ ಆದೇಶವು ಸಂಪೂರ್ಣವಾಗಿ ಮುಂಜಾಗ್ರತಾ ಕ್ರಮವಾಗಿದ್ದು, ಸಮಾಜಕ್ಕೆ ರಕ್ಷಣೆ ಒದಗಿಸುವ ಉದ್ದೇಶದಿಂದ ಮಾಡಲಾಗಿದೆ. ಮುಂಜಾಗ್ರತಾ ಬಂಧನವು ರಕ್ಷಣೆ ಮತ್ತು ಭದ್ರತೆ ಖಾತರಿಪಡಿಸುವ ಉದ್ದೇಶ ಹೊಂದಿರುವುದರಿಂದ ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಸಮಾಜದ ಅವಶ್ಯಕತೆ ನಡುವೆ ಸಮಾನತೆ ಸಾಧಿಸಬೇಕಿದೆ. ಈ ನೆಲೆಯಲ್ಲಿ ಬಂಧನ ಆದೇಶವನ್ನು ಎತ್ತಿ ಹಿಡಿಯಬೇಕಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಸರ್ಕಾರಿ ಅಭಿಯೋಜಕ ಪಿ ತೇಜೇಶ್ ಅವರು “ಪೊಲೀಸ್ ಇಲಾಖೆ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ರಾಜೇಶ್ ನಿಲ್ಲಿಸಿಲ್ಲ. ಇದರಿಂದ ಅನ್ಯ ಮಾರ್ಗವಿಲ್ಲದ ಗೂಂಡಾ ಕಾಯಿದೆ ಅಡಿ ರಾಜೇಶ್‌ನನ್ನು ಬಂಧಿಸಲಾಗಿದೆ. ಸಾರ್ವಜನಿಕ ವ್ಯವಸ್ಥೆಗೆ ಅಪಾಯ ಉಂಟಮಾಡುವಂತಹ ರಾಜೇಶ್‌ನ ಎಲ್ಲಾ ಅಪರಾಧ ಚಟುವಟಿಕೆಗಳನ್ನು ಪರಿಗಣಿಸಿದ ನಂತರವೇ ಬಂಧಿಸಲಾಗಿದೆ. ಆತನ ವಿರುದ್ಧ 12 ಅಪರಾಧ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮೂರು ಕೊಲೆ ಯತ್ನ, ಹಲ್ಲೆ ಪ್ರಕರಣಗಳಿವೆ. ಮಾರಕಾಸ್ತ್ರಗಳೊಂದಿಗೆ ಸುತ್ತಾಡುತ್ತಿದ್ದ ಆತನ ನಡೆಯಿಂದ ಜನರಲ್ಲಿ ಭೀತಿ ಉಂಟಾಗಿತ್ತು” ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಪರ ವಕೀಲ ರೋಹನ್ ತಿಗಾಡಿ ಅವರು “ಕೊನೆಯದಾಗಿ ಮೊಟ್ಟೆ ರಾಜೇಶ್ ವಿರುದ್ಧ 2024ರ ಆಗಸ್ಟ್ 18ರಂದು ಅಪರಾಧ ಪ್ರಕರಣ ದಾಖಲಾಗಿದೆ. ಅದಾದ 164 ನಂತರ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಮಾಡಲಾಗಿದೆ. ಈ 164 ದಿನಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿರುವುದನ್ನು ಸಮರ್ಥಿಸುವ ಯಾವೊಂದು ದಾಖಲೆ ಇಲ್ಲ. ಆದ್ದರಿಂದ ಸರ್ಕಾರದ ಆದೇಶ ರದ್ದುಪಡಿಸಬೇಕು”ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ರಾಜೇಶ್ ಅಲಿಯಾಸ್ ಮೊಟ್ಟೆ ರಾಜೇಶ್ ವಿರುದ್ಧ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸರು 2023ರ ಡಿಸೆಂಬರ್ 13ರಂದು ಎ ಕೆಟಗರಿ ರೌಡಿ ಶೀಟ್ ತೆರೆದಿದ್ದರು. 2018ರಿಂದ ಸಮಾಜ ವಿರೋಧಿ ಮತ್ತು ಅಪರಾಧ ಚಟುವಟಿಕೆಗಳು ಭಾಗಿಯಾಗಿ, ಮನುಷ್ಯನ ಜೀವ ಮತ್ತು ಆಸ್ತಿಗೆ ಅಪಾಯ ಉಂಟು ಮಾಡುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾನೆ. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಹೀನಾಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದ ಪೊಲೀಸರು, ಗೂಂಡಾ ಕಾಯಿದೆ ಅಡಿ 2025ರ ಜನವರಿ 29ರಂದು ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ, ತಮ್ಮ ಪತಿಯನ್ನು ಅಕ್ರಮ ಬಂಧನದಲ್ಲಿ ಇಡಲಾಗಿದ್ದು, ತಕ್ಷಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುಂತೆ ಕೋರಿ ಪ್ರಿಯದರ್ಶಿನಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.