
ಪೊಲೀಸ್ ಅಧಿಕಾರಿಯನ್ನು ನಿಂದಿಸಿ, ಅವರಿಗೆ ಬೆದರಿಕೆ ಹಾಕಿದ್ದ ಆರೋಪದ ಸಂಬಂಧ ಶಿಕ್ಷೆಯ ಭಾಗವಾಗಿ ಸಿವಿಲ್ ನ್ಯಾಯಾಧೀಶರಾದ (ಹಿರಿಯರ ವಿಭಾಗ) ಕೆ ಎಂ ಗಂಗಾಧರ್ ಅವರ ಕಡ್ಡಾಯ ನಿವೃತ್ತಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಆಧಾರವಿಲ್ಲ ಎಂದು ಏಕಸದಸ್ಯ ಪೀಠ ಮಾಡಿದ್ದ ಆದೇಶ ಪ್ರಶ್ನಿಸಿ ನ್ಯಾಯಾಧೀಶ ಕೆ ಎಂ ಗಂಗಾಧರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
ನ್ಯಾಯಾಧೀಶರಾದ ಗಂಗಾಧರ್ ಅವರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲು ಅಳವಡಿಸಿರುವ ಪ್ರಕ್ರಿಯೆ ಅಸಮಾನತೆಯಿಂದ ಕೂಡಿದೆ ಎಂದು ಹೇಳಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ದೂರಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗೆ ಕ್ರಮಕೈಗೊಳ್ಳದಂತೆ ಬೆದರಿಕೆ ಹಾಕುವ ಮೂಲಕ ತನಿಖೆಯಲ್ಲಿ ಮಧ್ಯಪ್ರವೇಶಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ ಎಂ ಗಂಗಾಧರ್ ಅವರಿಗೆ 2012ರ ಅಕ್ಟೋಬರ್ 1ರಂದು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶವನ್ನು 2025ರ ಫೆಬ್ರವರಿ 25ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಗಂಗಾಧರ್ ಅವರು ಮೇಲ್ಮನವಿ ಸಲ್ಲಿಸಿದ್ದರು.
ಅನಸೂಯಾ ಎಂಬವರ ವಿರುದ್ಧ ತಾನು ನಂದಿನಿ ಲೇಔಟ್ ಠಾಣೆಯಲ್ಲಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಬೆಂಗಳೂರಿನ 13ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮತ್ತು ಸಿವಿಲ್ ನ್ಯಾಯಾಧೀರಾಗಿದ್ದ ಗಂಗಾಧರ್ ಅವರು ಮಧ್ಯಪ್ರವೇಶಿಸಿದ್ದಾರೆ. ಅಲ್ಲದೇ, ಅನಸೂಯಾ ಅವರನ್ನು ಪೊಲೀಸ್ ಠಾಣೆಗೆ ಬರ ಮಾಡಿದರೆ ಗಂಭೀರ ಪರಿಣಾಮದ ಎದುರಿಸಬೇಕಾಗುತ್ತದೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ ಎಂದು ಡಾ. ಬಿ ಇಂದುಮತಿ ದೂರು ನೀಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ನ್ಯಾ. ಗಂಗಾಧರ್ ಅವರ ವಿರುದ್ಧ ತನಿಖೆ ನಡೆಸಿ, 2011ರ ಏಪ್ರಿಲ್ 27ರಂದು ಆರೋಪ ನಿಗದಿ ಮಾಡಲಾಗಿತ್ತು. ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ದೂರು ಮತ್ತು ಅಂದಿನ ಇನ್‌ಸ್ಪೆಕ್ಟರ್ ಎಚ್ ಟಿ ಜಯರಾಮಯ್ಯ ಅವರ ವಾದ ಆಲಿಸಿದಾಗ ನ್ಯಾ. ಗಂಗಾಧರ್ ಅವರು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿರುವುದು ಸಾಬೀತಾಗಿ, ಆರೋಪ ರುಜುವಾತಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳು (ವಿಭಾಗ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 1957ರ ನಿಯಮ 8(vi) ಅಡಿ ಗಂಗಾಧರ್ ಅವರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲಾಗಿತ್ತು.
ಗಂಗಾಧರ್ ಅವರು ತನ್ನ ಸಹೋದರಿಯಾದ ಅನಸೂಯಾ ಅವರಿಗೆ ಕಿರುಕುಳ ನೀಡದಂತೆ ನಂದಿನಿ ಲೇಔಟ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಗಿ ವಾದಿಸಿದ್ದರು. 2007ರ ಆಗಸ್ಟ್ 20ರಂದು ಪೊಲೀಸರಿಗೆ ಕರೆ ಮಾಡಿ ಮಾತನಾಡಿದ್ದ ಗಂಗಾಧರ್ ಅವರು ಪೊಲೀಸರನ್ನು ನಿಂದಿಸಿ, ಬೆದರಿಕೆ ಹಾಕಿದ್ದರು ಎಂಬ ವಿಚಾರ ಸಾಬೀತಾದ ಹಿನ್ನೆಲೆಯಲ್ಲಿ ಅವರ ಮೇಲ್ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಗಂಗಾಧರ್ ಪರವಾಗಿ ವಕೀಲ ಎಸ್ ರಾಜಶೇಖರ್, ಸರ್ಕಾರದ ಪರವಾಗಿ ಕೆ ಎಸ್ ಹರೀಶ್, ಜಿ ಸುಹಾಸ್ ವಾದಿಸಿದ್ದರು.