

ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಒಯ್ದಿದ್ದ ಆರೋಪದಡಿ 12ನೇ ತರಗತಿಯ ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಯೊಬ್ಬನನ್ನು ಎರಡು ವರ್ಷ ಡಿಬಾರ್ ಮಾಡಿದ್ದ ಸಿಬಿಎಸ್‌ಇ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಬಿಎಸ್‌ಇ ಮತ್ತು ನವದೆಹಲಿಯ ಪರೀಕ್ಷಾ ನಿಯಂತ್ರಣ ಕೇಂದ್ರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ಈ ಕುರಿತು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕಲಿಯುತ್ತಿರುವ ನಗರದ ವಿದ್ಯಾರ್ಥಿಯೊಬ್ಬ 12ನೇ ತರಗತಿ ದೈಹಿಕ ಶಿಕ್ಷಣ ಪರೀಕ್ಷೆ ಬರೆಯುವಾಗ ಮೊಬೈಲ್ ಅನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡ ಆರೋಪದಡಿ ಎರಡು ವರ್ಷ ಡಿಬಾರ್‌ಗೆ ಒಳಗಾಗಿದ್ದ.
2024–25ನೇ ಸಾಲಿನ ಸಿಬಿಎಸ್‌ಇ 12ನೇ ತರಗತಿಯ ದೈಹಿಕ ಶಿಕ್ಷಣ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಪರೀಕ್ಷೆ 2025ರ ಫೆಬ್ರುವರಿ 17ರಿಂದ ಮಾರ್ಚ್ 3ರವರೆಗೆ ನಡೆದಿತ್ತು. ಮೊದಲ ದಿನ ನಡೆದಿದ್ದ ದೈಹಿಕ ಶಿಕ್ಷಣ ಪರೀಕ್ಷೆಗೆ ವಿದ್ಯಾರ್ಥಿ ತಡವಾಗಿ ಬಂದಿದ್ದ. ವಿಳಂಬಕ್ಕೆ, ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಪರೀಕ್ಷಾ ಕೇಂದ್ರಕ್ಕೂ ತನ್ನ ಮನೆಗೂ 23 ಕಿ ಮೀ ಅಂತರ ಇದೆ ಎಂದು ಕಾರಣ ನೀಡಿದ್ದ.
ವಿದ್ಯಾರ್ಥಿ ಪರೀಕ್ಷೆ ಬರೆಯಲು ಆರಂಭಿಸಿದ 25 ನಿಮಿಷಗಳ ನಂತರ ಕೊಠಡಿಯ ಪರೀಕ್ಷಾ ನಿರೀಕ್ಷಕ ವಿದ್ಯಾರ್ಥಿಯ ಜೇಬಿನಲ್ಲಿ ಮೊಬೈಲ್ ಫೋನ್ ಇರುವುದನ್ನು ಗಮನಿಸಿ ಅದನ್ನು ತಮ್ಮ ವಶಕ್ಕೆ ಪಡೆದಿದ್ದರು. ನಂತರ ವಿದ್ಯಾರ್ಥಿಗೆ ಬೇರೆ ನಮೂನೆಯ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಬರೆಯಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲೇ, ಸಿಬಿಎಸ್‌ಇ ಪರೀಕ್ಷಾ ನಿಯಂತ್ರಣ ಕೇಂದ್ರವು ವಿದ್ಯಾರ್ಥಿಯನ್ನು ಆ ಶೈಕ್ಷಣಿಕ ಮತ್ತು ಮುಂದಿನ ಒಂದು ವರ್ಷದ ಅವಧಿಗೆ ಪರೀಕ್ಷೆ ಬರೆಯದಂತೆ ಡಿಬಾರ್ ಮಾಡಿ ಆದೇಶಿಸಿತ್ತು.
ಡಿಬಾರ್ ಆದೇಶವನ್ನು ವಿದ್ಯಾರ್ಥಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಸಿಬಿಎಸ್‌ಇ ಆದೇಶ ಅನ್ಯಾಯದ ಕ್ರಮ ಮತ್ತು ದುರುದ್ದೇಶಪೂರಿತ ನಡೆ. ವಿಚಾರಣೆ ವೇಳೆ ವಿದ್ಯಾರ್ಥಿಯ ಬಳಿಯಿದ್ದ ಮೊಬೈಲ್ ಫೋನ್‌ನಲ್ಲಿ ಯಾವುದೇ ನಕಲು ಸಾಮಗ್ರಿ ಇರಲಿಲ್ಲ ಮತ್ತು ಆತ ಮೊಬೈಲ್‌ನಿಂದ ಏನನ್ನೂ ನಕಲು ಮಾಡಿಲ್ಲ ಎಂಬುದು ಈಗಾಗಲೇ ದೃಢಪಟ್ಟಿದೆ. ಹೀಗಿರುವಾಗ, ವಿದ್ಯಾರ್ಥಿ ಸಹಜವಾಗಿಯೇ ಸಂದೇಹದ ಲಾಭ ಪಡೆಯಲು ಅರ್ಹವಾಗಿದ್ದಾನೆ ಎಂಬ ಅಭಿಪ್ರಾಯದಲ್ಲಿ ಸಿಬಿಎಸ್‌ಇ ಹೊರಡಿಸಿದ್ದ ಡಿಬಾರ್ ಆದೇಶವನ್ನು ರದ್ದುಪಡಿಸಿತ್ತು.
ಈ ಆದೇಶ ಪ್ರಶ್ನಿಸಿ ಸಿಬಿಎಸ್‌ಇ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿದೆ.