ಸಹೋದ್ಯೋಗಿ ಪೇದೆಯ ಪತ್ನಿ ಮೇಲೆ ಅತ್ಯಾಚಾರ: ಎಂಟು ಸಿಐಎಸ್‌ಎಫ್‌ ಪೇದೆಗಳ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಸಿಐಎಸ್‌ಎಫ್‌ ಪಡೆಯ ಶಿಸ್ತು ಮತ್ತು ಸದಾಚಾರವನ್ನು ಗಮನದಲ್ಲಿಟ್ಟುಕೊಂಡು ಪ್ರಾಯೋಗಿಕವಾಗಿ ತನಿಖೆ ನಡೆಸುವುದು ಕಾರ್ಯಸಾಧ್ಯವಲ್ಲ ಎಂದು ಶಿಸ್ತುಪಾಲನಾ ಸಮಿತಿಯು ಸರಿಯಾಗಿ ಹೇಳಿದೆ ಎಂದಿರುವ ನ್ಯಾಯಾಲಯ.
ಸಹೋದ್ಯೋಗಿ ಪೇದೆಯ ಪತ್ನಿ ಮೇಲೆ ಅತ್ಯಾಚಾರ: ಎಂಟು ಸಿಐಎಸ್‌ಎಫ್‌ ಪೇದೆಗಳ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್‌
Karnataka High Court

ಸಹೋದ್ಯೋಗಿ ಪೇದೆಯ ಪತ್ನಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ, ಪದೇಪದೇ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶಿಸ್ತುಪಾಲನಾ ಸಮಿತಿಯು ಮೈಸೂರಿನ ಭಾರತೀಯ ರಿಸರ್ವ್‌ ಬ್ಯಾಂಕ್‌ ಮುದ್ರಣ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಕರ್ತವ್ಯದಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಎಂಟು ಪೇದೆಗಳನ್ನು ಸೇವೆಯಿಂದ ವಜಾ ಮಾಡಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ.

ಆರೋಪಿ ಪೇದೆಗಳಾದ ವಿಕಾಸ್‌ ವರ್ಮಾ ಸೇರಿದಂತೆ ಎಂಟು ಮಂದಿಯು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಜೆ ಎಂ ಖಾಜಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಮೇಲ್ಮನವಿದಾರರ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಸೂಕ್ತ ಸಾಕ್ಷ್ಯಗಳು ಇಲ್ಲ ಎಂಬ ವಿಚಾರವನ್ನು ಮೇಲ್ಮನವಿದಾರರು ಎತ್ತಿಲ್ಲ. ಶಿಸ್ತುಪಾಲನೆ ಮತ್ತು ಮೇಲ್ಮನವಿದಾರ ಸಮಿತಿಯು ತಮ್ಮ ಮುಂದಿರುವ ದಾಖಲೆಗಳನ್ನು ಪರಿಗಣಿಸಿ, ಮೇಲ್ಮನವಿದಾರರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಹೇಳಿವೆ. ಈ ಘಟನೆಯು ಅಪರೂಪದಲ್ಲಿ ಅಪರೂಪದ್ದಾಗಿದ್ದು, ಸಿಐಎಸ್‌ಎಫ್‌ ಪಡೆಯ ಶಿಸ್ತು ಮತ್ತು ಸದಾಚಾರವನ್ನು ಗಮನದಲ್ಲಿಟ್ಟುಕೊಂಡು ಪ್ರಾಯೋಗಿಕವಾಗಿ ತನಿಖೆ ನಡೆಸುವುದು ಕಾರ್ಯಸಾಧ್ಯವಲ್ಲ ಎಂದು ಶಿಸ್ತುಪಾಲನಾ ಸಮಿತಿಯು ಸರಿಯಾಗಿ ಹೇಳಿದೆ ಎಂದಿದೆ. ಶಿಸ್ತುಪಾಲನಾ ಸಮಿತಿಯು ವಸ್ತುನಿಷ್ಠ ಅಂಶಗಳಿಂದ ತೃಪ್ತಿಗೊಂಡಿದ್ದು, ಇಲಾಖಾ ವಿಚಾರಣೆಯನ್ನು ಕೈಬಿಡುವ ನಿರ್ಧಾರವು ಶಿಸ್ತುಪಾಲನಾ ಸಮಿತಿಯ ಹುಚ್ಚಾಟಿಕೆ, ಕುತಂತ್ರ ಅಥವಾ ದುರುದ್ದೇಶಪೂರಿತ ನಿರ್ಧಾರವಲ್ಲ” ಎಂದು ನ್ಯಾಯಾಲಯ ಹೇಳಿದೆ.

“ದೂರುದಾರೆಯ ಕರೆ ದಾಖಲೆಗಳನ್ನು ಶಿಸ್ತುಪಾಲನಾ ಸಮಿತಿ ಪರಿಶೀಲಿಸಿದ್ದು, ಮೇಲ್ಮನವಿದಾರ ಪೇದೆಗಳು ದೂರುದಾರೆಯ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಹೀಗಿರುವಾಗ, ದೂರುದಾರೆ ನಮಗೆ ಪರಿಚಿತವಲ್ಲ ಎಂದು ಮೇಲ್ಮನವಿದಾರರು ಹೇಳುವುದು ದಾಖಲೆಗಳಿಗೆ ವಿರುದ್ಧವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೇಲ್ಮನವಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪಿ ಎ ಕುಲಕರ್ಣಿ ಅವರು “ನಿಯಮ 36(2ಎ) ಅಡಿ ಆದೇಶ ಮಾಡುವಾಗ ನಿಯಮ 36ರ ಅಡಿ ಸಾಮಾನ್ಯ ತನಿಖೆಯನ್ನು ಕೈಬಿಡುವ ನಿರ್ಧಾರವನ್ನು ಶಿಸ್ತುಪಾಲನಾ ಸಮಿತಿ ತೆಗೆದುಕೊಳ್ಳಲಾಗದು. ಸಾಮಾನ್ಯ ತನಿಖೆ ಕೈಬಿಡುವಾಗ ಶಿಸ್ತುಪಾಲನಾ ಸಮಿತಿಯು ಸ್ವಾಭಾವಿಕ ನ್ಯಾಯದಾನ ತತ್ವಗಳನ್ನು ಪಾಲಿಸಬೇಕು. ವಿಚಾರಣಾಧೀನ ನ್ಯಾಯಾಲಯವು 2019ರ ಜುಲೈ 30ರಂದು ಕ್ರಿಮಿನಲ್‌ ಪ್ರಕರಣದಲ್ಲಿ ಮೇಲ್ಮನವಿದಾರರನ್ನು ಖುಲಾಸೆಗೊಳಿಸಿರುವುದರಿಂದ ಸೇವೆಯಿಂದ ವಜಾ ಮಾಡುವುದಕ್ಕೆ ಸಕಾರಣಗಳನ್ನು ನೀಡಲಾಗಿಲ್ಲ. ಕೇವಲ ಅನುಮಾನದ ಆಧಾರದಲ್ಲಿ ಸೇವೆಯಿಂದ ವಜಾ ಮಾಡುವ ಶಿಕ್ಷೆ ವಿಧಿಸಲಾಗದು” ಎಂದು ವಾದಿಸಿದ್ದರು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಮತ್ತು ವಕೀಲ ಎಸ್‌ ರಾಜಶೇಖರ್‌ ಅವರು “ದೂರು ಸ್ವೀಕರಿಸಿದ ಬಳಿಕ ಅದನ್ನು ಕೂಲಂಕಶವಾಗಿ ಪರಿಶೀಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಶಿಸ್ತುಪಾಲನಾ ಸಮಿತಿ ಭೇಟಿ ನೀಡಿದ್ದು, ಪ್ರಕರಣದ ವಾಸ್ತವಿಕ ಅಂಶ ಮತ್ತು ಸಂದರ್ಭವನ್ನು ಪರಿಗಣಿಸಿ ಶಿಸ್ತುಪಾಲನಾ ತನಿಖೆಯನ್ನು ಕೈಬಿಡಲಾಗಿದೆ. ಇಲಾಖಾ ತನಿಖೆ ಕೈಬಿಡುವುದಕ್ಕೆ ಸೂಕ್ತವಾದ ಸಕಾರಣಗಳನ್ನು ಶಿಸ್ತುಪಾಲನಾ ಸಮಿತಿಯು ನೀಡಿದೆ” ಎಂದು ಹೇಳಿದ್ದರು.

ಪ್ರಕರಣದ ಹಿನ್ನೆಲೆ: 2015ರ ಮಾರ್ಚ್‌-ಏಪ್ರಿಲ್‌ನಲ್ಲಿ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ನೆಲೆಸಿದ್ದ ದೂರುದಾರೆಗೆ ಮೊದಲ ಆರೋಪಿ ವಿಕಾಸ್‌ ವರ್ಮಾ ಎಂಬಾತ ತಾನು ಆಕೆಯ ಪತಿಯ ಸಹೋದ್ಯೋಗಿ ಎಂದು ಪರಿಚಯ ಮಾಡಿಕೊಂಡಿದ್ದರು. ಭಾರತೀಯ ರಿಸರ್ವ್‌ ಬ್ಯಾಂಕ್‌ ಮುದ್ರಣ ಘಟಕದ ಮೆಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಮೆಸ್‌ಗೆ ಅಗತ್ಯವಾದ ತರಕಾರಿ ತರಲು ಮೇಲಿಂದ ಮೇಲೆ ಮಾರುಕಟ್ಟೆಗೆ ಹೋಗುತ್ತಿದ್ದರಿಂದ ದೂರುದಾರೆಗೂ ತರಕಾರಿ ತಂದುಕೊಡುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ದೂರುದಾರೆಯ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದ ವಿಕಾಸ್‌ ವರ್ಮಾ, ದೂರುದಾರೆಯ ಪತಿ 2015ರ ಮಾರ್ಚ್‌-ಏಪ್ರಿಲ್‌ನಲ್ಲಿ ದೂರದ ಸ್ಥಳಕ್ಕೆ ತೆರಳಿರುವುದನ್ನು ತಿಳಿದು ತಡರಾತ್ರಿ ಕರೆ ಮಾಡಿ ಮಾತನಾಡುತ್ತಿದ್ದ. ಆರಂಭದಲ್ಲಿ ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳಿಗೆ ಸೀಮಿತಗೊಳಿಸಿದ್ದ ವಿಕಾಸ್‌ ವರ್ಮಾ ಅವರು ಬಳಿಕ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ದೈಹಿಕ ಸಂಬಂಧ ಹೊಂದುವ ಇರಾದೆಯನ್ನು ವ್ಯಕ್ತಪಡಿಸಿದ್ದರು ಎಂದು ಆರೋಪಿಸಲಾಗಿದೆ.

ಒಂದು ರಾತ್ರಿ ಮಧ್ಯರಾತ್ರಿ 1.30ರ ಸುಮಾರಿಗೆ ಮನೆಯ ಹೊರಗಿದ್ದು, ತನ್ನ ಜೊತೆ ಲೈಂಗಿಕ ಸಂಬಂಧ ಹೊಂದದಿದ್ದರೆ ತಮ್ಮಿಬ್ಬರ ನಡುವಿನ ಮೊಬೈಲ್‌ ಸಂಪರ್ಕದ ವಿಚಾರವನ್ನು ಆಕೆಯ ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಬಲವಂತವಾಗಿ ದೂರುದಾರೆ ಮನೆ ಬಾಗಿಲು ತೆರೆದಿದ್ದು, ವಿಕಾಸ್‌ ಶರ್ಮಾ ಮನೆ ಪ್ರವೇಶಿಸಿ, ದೂರುದಾರೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆ ಬಳಿಕ ನಿರಂತರವಾಗಿ ದೂರುದಾರೆಗೆ ಕರೆ ಮಾಡಿದ್ದು, 2015ರ ಮೇ 23ರಂದು ಮತ್ತೊಮ್ಮೆ ಅತ್ಯಾಚಾರ ಎಸಗಿದ್ದರು. ಆನಂತರ ಎರಡನೇ ಆರೋಪಿ ಅಂಕುಶ್‌ ಪುನಿಯಾ, ಆರನೇ ಆರೋಪಿ ವಿ ಕೆ ತಿವಾರಿ ಅವರು 2015ರ ಜೂನ್‌ 6ರಂದು ಕರೆ ಮಾಡಿ ವರ್ಮಾರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ತಿಳಿದಿದ್ದು, ಈ ಮನೆ ಬಾಗಿಲು ತೆರೆಯದಿದ್ದರೆ ಅಕ್ರಮ ಸಂಬಂಧದ ವಿಚಾರವನ್ನು ಎಲ್ಲರಿಗೂ ತಿಳಿಸುವುದಾಗಿ ಹೇಳಿದ್ದರು. ಮನೆ ಪ್ರವೇಶಿಸಿ, ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.

ಆನಂತರ ಏಳನೇ ಆರೋಪಿ ಚಂದನ್‌ ಕುಮಾರ್‌ ಅವರು ಬ್ಲ್ಯಾಕ್‌ಮೇಲ್‌ ಮಾಡಿ ಪೆರೇಡ್‌ ಗ್ರೌಂಡ್‌ನಲ್ಲಿ ಅತ್ಯಾಚಾರ ಎಸಗಿದ್ದಾರೆ. ಅಂತೆಯೇ ಮೂರನೇ ಆರೋಪಿ ಪಿಂಕು ಕುಮಾರ್‌ ಅವರು ಇತರೆ ಪೇದೆಗಳಿಗೆ ಅಕ್ರಮ ಸಂಬಂಧ ವಿಚಾರ ಬಹಿರಂಗಪಡಿಸುವುದಾಗಿ ಹೇಳಿ 2015ರ ಜೂನ್‌ 18ರಂದು ಅತ್ಯಾಚಾರ ಮಾಡಿದ್ದಾರೆ. ಆರನೇ ಆರೋಪಿ ವಿ ಕೆ ತಿವಾರಿ, ಎಂಟನೇ ಆರೋಪಿ ರಾಹುಲ್‌ ದಿವಾಕರ್‌ ಮತ್ತು ನಾಲ್ಕನೇ ಆರೋಪಿ ಜಿತೇಂದ್ರ ಸಿಂಗ್‌ ಅವರು ಒಬ್ಬರಾದ ಮೇಲೆ ಒಬ್ಬರಾಗಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದಾರೆ.

2015ರ ಜೂನ್‌ 26ರಂದು ದೂರುದಾರೆಯ ಪತಿ ಸಿಂಗ್ರೇನಿ ಸಿಐಎಸ್‌ಎಫ್‌ ಎಸ್‌ಸಿಸಿಎಲ್‌ ಘಟಕದಿಂದ ವಾಪಸಾಗಿದ್ದು, ಕೌಟುಂಬಿಕ ಬದುಕು ಹಾಳಾಗಬಹುದು ಎಂದು ಹೆದರಿ ವಿಚಾರ ಬಹಿರಂಗಪಡಿಸಿರಲಿಲ್ಲ. 2015ರ ಜೂನ್‌ 28ರಂದು ವಿಕಾಸ್‌ ವರ್ಮಾ ಅವರು ರಾತ್ರಿ 11.30ಕ್ಕೆ ಕರೆ ಮಾಡಿ ದೂರುದಾರೆ ಜೊತೆಗೆ ಮಾತನಾಡುತ್ತಿರುವುದನ್ನು ಗಮನಿಸಿ ಪತಿ ಆಕೆಯಿಂದ ಫೋನ್‌ ಕಿತ್ತುಕೊಂಡಿದ್ದರು. ಆಗ ಈ ವಿಚಾರ ಬೆಳಕಿಗೆ ಬಂದಿತ್ತು. ಇಡೀ ಘಟನೆಯ ಕುರಿತು 2015ರ ಜುಲೈ 1ರಂದು ಪತಿಗೆ ದೂರುದಾರೆ ವಿವರಿಸಿದ್ದರು. ಇದರಿಂದ ಕುಪಿತಗೊಂಡ ಪತಿ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದರು ಎಂದು ವಿವರಿಸಲಾಗಿದೆ.

2015ರ ಜುಲೈ 2ರಂದು ಸಂತ್ರಸ್ತೆ ದೂರು ನೀಡಿದ್ದು, 2015ರ ಆಗಸ್ಟ್‌ 2ರಂದು ಶಿಸ್ತುಪಾಲನಾ ಸಮಿತಿಯು ಎಂಟು ಪೇದೆಗಳನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮನವಿಯನ್ನು ಮೇಲ್ಮನವಿದಾರ ಪ್ರಾಧಿಕಾರವು 2015ರ ನವೆಂಬರ್‌ 27ರಂದು ವಜಾ ಮಾಡಿತ್ತು. ಇದನ್ನು 2017ರ ಆಗಸ್ಟ್‌ 8ರ ಆದೇಶದಲ್ಲಿ ಏಕಸದಸ್ಯ ಪೀಠವು ಎತ್ತಿ ಹಿಡಿದಿತ್ತು. ಈಗ ವಿಭಾಗೀಯ ಪೀಠವು ಏಕಸದಸ್ಯ ಪೀಠದ ತೀರ್ಪು ಎತ್ತಿ ಹಿಡಿದಿದೆ.

Related Stories

No stories found.
Kannada Bar & Bench
kannada.barandbench.com