ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ, ಹೈಕೋರ್ಟ್‌ ತಿದ್ದುಪಡಿ ಕಾಯಿದೆಗಳ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್‌

“ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆಯು ಪೂರ್ವಾನ್ವಯವಾಗಲಿದೆ ಎಂದು ಹೇಳುವ ಮೂಲಕ ಶಾಸನಭೆಯು ಪ್ರಮಾದ ಎಸಗಿದ್ದು, ಅದು ಸ್ವೇಚ್ಛೆ ಮತ್ತು ಅತಾರ್ಕಿಕವಾಗಿದೆ” ಎಂದೂ ನ್ಯಾಯಾಲಯ ಹೇಳಿದೆ.
Justice M I Arun & Karnataka HC -Kalburgi bench
Justice M I Arun & Karnataka HC -Kalburgi bench
Published on

ಹೈಕೋರ್ಟ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ತಗ್ಗಿಸಲು ಮತ್ತು ಪ್ರಥಮ ಮೇಲ್ಮನವಿಗಳನ್ನು ನಿರ್ಧರಿಸಲು ತೆಗೆದುಕೊಳ್ಳುವ ಸಮಯ ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆ ಮತ್ತು ಕರ್ನಾಟಕ ಹೈಕೋರ್ಟ್‌ ತಿದ್ದುಪಡಿ ಕಾಯಿದೆಗಳನ್ನು ಹೈಕೋರ್ಟ್‌ನ ಕಲಬುರ್ಗಿ ಪೀಠವು ಎತ್ತಿ ಹಿಡಿದಿದ್ದು, ಅವು ಜಾರಿಗೆ ಬಂದಾಗಿನಿಂದ ಅನ್ವಯಿಸಲಿವೆ ಎಂದಿದೆ.

ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆ 2023 ಮತ್ತು ಕರ್ನಾಟಕ ಹೈಕೋರ್ಟ್‌ ತಿದ್ದುಪಡಿ ಕಾಯಿದೆ 2023ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಯಚೂರಿನ ಬಾಬುರಾವ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

“ಹೈಕೋರ್ಟ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಬಾಕಿ ಇರುವ ಪ್ರಥಮ ಮೇಲ್ಮನವಿಗಳು (ಆರ್‌ಎಫ್‌ಎ) ಮತ್ತು ಹೆಚ್ಚಿನ ಸಂಖ್ಯೆಯ ಜಿಲ್ಲಾ ನ್ಯಾಯಾಧೀಶರು ಇರುವುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶರಿಗೆ ಬದಲಾಗಿ ಜಿಲ್ಲಾ ನ್ಯಾಯಾಲಯಗಳು ಆರ್‌ಎಫ್‌ಎ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಿದೆ” ಎಂದು ನ್ಯಾಯಾಲಯ ಹೇಳಿದೆ.

“ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆಯು ಪೂರ್ವಾನ್ವಯವಾಗಲಿದೆ ಎಂದು ಹೇಳುವ ಮೂಲಕ ಶಾಸನಭೆಯು ಪ್ರಮಾದ ಎಸಗಿದ್ದು, ಅದು ಸ್ವೇಚ್ಛೆ ಮತ್ತು ಅತಾರ್ಕಿಕವಾಗಿದೆ” ಎಂದೂ ನ್ಯಾಯಾಲಯ ಹೇಳಿದೆ.

“ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆಯು 28.08.2007ರಿಂದ ಅನ್ವಯಿಸಲಿದೆ ಎಂದು ಮಾಡಿರುವುದನ್ನು ಬದಿಗೆ ಸರಿಸಲಾಗಿದ್ದು, ತಿದ್ದುಪಡಿ ಕಾಯಿದೆಯು ಭವಿಷ್ಯದ ಪ್ರಕರಣಗಳಿಗೆ ಅನ್ವಯಸಲಿದೆ. ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆ 2023 ಮತ್ತು ಕರ್ನಾಟಕ ಹೈಕೋರ್ಟ್‌ ತಿದ್ದುಪಡಿ ಕಾಯಿದೆ 2023 ಅನ್ನು ಎತ್ತಿ ಹಿಡಿಯಲಾಗಿದೆ. ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಕಾಯಿದೆ ಅನ್ವಯ ಹೈಕೋರ್ಟ್‌ನಲ್ಲಿ ಬಾಕಿ ಇರುವ ಆರ್‌ಎಫ್‌ಎಗಳನ್ನು ಆದಷ್ಟು ಬೇಗ ವ್ಯಾಪ್ತಿ ಇರುವ ನ್ಯಾಯಾಲಯಗಳಿಗೆ ವರ್ಗಾಯಿಸಬೇಕು. ತಿದ್ದುಪಡಿ ಕಾಯಿದೆ ಜಾರಿಯಾಗುವುದಕ್ಕೂ ಮುನ್ನ ಪ್ರಕಟಿಸಿರುವ ತೀರ್ಪುಗಳು ಸಿಂಧುವಾಗಲಿವೆ. ಕರ್ನಾಟಕ ಹೈಕೋರ್ಟ್‌ ತಿದ್ದುಪಡಿ ಕಾಯಿದೆ ಜಾರಿಯಾಗುವವರೆಗೆ ಜಾರಿಯಲ್ಲಿದ್ದ ಕಾಯಿದೆಯ ಅನ್ವಯ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿರುವ ತೀರ್ಪುಗಳನ್ನು ಸಿಂಧುವಾಗಲಿವೆ” ಎಂದು ನ್ಯಾಯಾಲಯ ಆದೇಶಿಸಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಥಮ ಮೇಲ್ಮನವಿಗಳ ಸಂಖ್ಯೆಯ ಕಡಿತ ಮಾಡುವ ಉದ್ದೇಶದಿಂದ ಅದನ್ನು ಜಿಲ್ಲಾ ನ್ಯಾಯಾಲಯಗಳ ವ್ಯಾಪ್ತಿಗೆ ತಂದು, ಮೇಲ್ಮನವಿಗಳ ವಿಚಾರಣಾ ಸಮಯವನ್ನು ಕಡಿತಗೊಳಿಸುವುದು ಮತ್ತು ಹಿರಿಯ ವಿಭಾಗದ ಸಿವಿಲ್‌ ನ್ಯಾಯಾಧೀಶರು ನಡೆಸಲಿದ್ದ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಧೀಶರು ನಡೆಸಲಿದ್ದಾರೆ. ಅಂತೆಯೇ, ಸಿಟಿ ಸಿವಿಲ್‌ ನ್ಯಾಯಾಧೀಶರಿಂದ ಬರುವ ಪ್ರಥಮ ಮೇಲ್ಮನವಿಗಳನ್ನು ಹೈಕೋರ್ಟ್‌ನ ವಿಭಾಗೀಯ ಪೀಠದ ಬದಲಿಗೆ ಏಕಸದಸ್ಯ ಪೀಠ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ರೋಣ್‌ ಅವರು “ಹೈಕೋರ್ಟ್‌ನಲ್ಲಿ ಅಪಾರ ಪ್ರಮಾಣದ ಪ್ರಥಮ ಮೇಲ್ಮನವಿಗಳು ಬಾಕಿ ಇವೆ. ಈ ನಡುವೆ ಜಿಲ್ಲಾ ನ್ಯಾಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ನ್ಯಾಯಾಧೀಶರಿದ್ದಾರ. ಇದಕ್ಕಾಗಿ ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ ತಿದ್ದುಪಡಿ ಮತ್ತು ಕರ್ನಾಟಕ ಹೈಕೋರ್ಟ್‌ ತಿದ್ದುಪಡಿ ಕಾಯಿದೆ ರೂಪಿಸಲಾಗಿದ್ದು, ಇದರ ಅನ್ವಯ ಹಿರಿಯ ಶ್ರೇಣಿಯ ಸಿವಿಲ್‌ ನ್ಯಾಯಾಧೀಶರ ಮುಂದೆ ಬರುವ ಪ್ರಥಮ ಮೇಲ್ಮನವಿಗಳನ್ನು ಇನ್ನು ಜಿಲ್ಲಾ ನ್ಯಾಯಾಲಯಗಳು ವಿಚಾರಣೆ ನಡೆಸಲಿವೆ” ಎಂದಿದ್ದು, ಅದಕ್ಕೆ ಪೂರಕವಾಗಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಥಮ ಮೇಲ್ಮನವಿಗಳ ಅಂಕಿ-ಸಂಖ್ಯೆಯನ್ನು ನ್ಯಾಯಾಲಯಕ್ಕೆ ಒದಗಿಸಿದರು.

“ಸಿಟಿ ಸಿವಿಲ್‌ ನ್ಯಾಯಾಲಯಗಳಿಂದ ಹೈಕೋರ್ಟ್‌ಗೆ ಬರುವ ಪ್ರಥಮ ಮೇಲ್ಮನವಿಗಳ ವಿಚಾರದಲ್ಲಿ ಭೂಮಿ ಮೌಲ್ಯ ಮತ್ತು ಇತರೆ ವರ್ಗಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜನರು ವ್ಯಾಲ್ಯುವೇಷನ್‌ ದಾವೆಗಳನ್ನು ಹೂಡುತ್ತಿದ್ದಾರೆ. ಇದರಿಂದ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಬದಲಾಗಿ ಏಕಸದಸ್ಯ ಪೀಠ ಇವುಗಳ ವಿಚಾರಣೆ ನಡೆಸುವುದು ಸೂಕ್ತ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯವಾಗಿದೆ” ಎಂದಿದ್ದರು.

Attachment
PDF
Baburao Vs State of Karnataka
Preview
Kannada Bar & Bench
kannada.barandbench.com