

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿ ಅಥವಾ ವ್ಯವಸ್ಥಾಪನಾ ಸಮಿತಿ (ಮ್ಯಾನೇಜಿಂಗ್ ಕಮಿಟಿ) ಸದಸ್ಯತ್ವ ಗರಿಷ್ಠ ಒಂಭತ್ತು ವರ್ಷಗಳ ಅವಧಿ ಮಾತ್ರ ಇರಲಿದೆ. ಆನಂತರ ಸಂಸ್ಥೆಯ ಯಾವುದೇ ಹುದ್ದೆ ಅಥವಾ ಚುನಾವಣೆಗೆ ಅವರು ಸ್ಪರ್ಧಿಸುವಂತಿಲ್ಲ ಎಂಬ ಕೆಎಸ್‌ಸಿಎ ನಿರ್ಣಯವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. ಈ ಆದೇಶದ ಹಿನ್ನೆಲೆಯಲ್ಲಿ ನವೆಂಬರ್ 30ಕ್ಕೆ ನಿಗದಿಯಾಗಿರುವ ಕೆಎಸ್‌ಸಿಎ ಚುನಾವಣೆಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಿದೆ.
ಅಕ್ಟೋಬರ್ 14ರಂದು ವ್ಯವಸ್ಥಾಪನಾ ಸಮಿತಿ ಮಾಡಿರುವ ನಿರ್ಣಯ ಮತ್ತು ಸದಸ್ಯರಿಗೆ ವ್ಯವಸ್ಥಾಪನಾ ಸಮಿತಿ ರವಾನಿಸಿದ್ದ ಸಂವಹನಕ್ಕೆ ತಡೆ ನೀಡಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಎಸ್‌ಸಿಎ ಸಲ್ಲಿಸಿದ್ದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಪ್ರತಿವಾದಿಗೆ ನೋಟಿಸ್ ಜಾರಿ ಮಾಡದೇ ಇರುವುದಕ್ಕೆ ಸೂಕ್ತ ಕಾರಣ ನೀಡದ ಆಧಾರದಲ್ಲಿ ವಿಚಾರಣಾಧೀನ ನ್ಯಾಯಾಲಯದ ಏಕಪಕ್ಷೀಯ ಆದೇಶವನ್ನು ಬದಿಗೆ ಸರಿಸಲಾಗಿದೆ. ಅರ್ಜಿಯ ಮೆರಿಟ್ ಮೇಲೆ ಯಾವುದೇ ಆದೇಶ ಮಾಡಲಾಗಿಲ್ಲ. ಇಂದಿನ ಆದೇಶವನ್ನು ಗಮನದಲ್ಲಿಟ್ಟುಕೊಳ್ಳದೇ ಫಿರ್ಯಾದಿ ಮತ್ತು ಪ್ರತಿವಾದಿಗಳನ್ನು ಆಲಿಸಿ ವಿಚಾರಣಾಧೀನ ನ್ಯಾಯಾಲಯ ಆದೇಶ ಮಾಡಬಹುದು” ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕೆಎಸ್‌ಸಿಎ ನೇಮಿಸಿದ್ದ ಹಿರಿಯ ವಕೀಲರನ್ನು ಒಳಗೊಂಡಿದ್ದ ಕಾನೂನು ಸಲಹಾ ಉಪಸಮಿತಿಯು ವ್ಯವಸ್ಥಾಪನಾ ಸಮಿತಿ ಸದಸ್ಯ ಅಥವಾ ಪದಾಧಿಕಾರಿಯಾಗಿದ್ದರೂ ಒಂಭತ್ತು ವರ್ಷಗಳಿಗೆ ಮಾತ್ರ ಅಧಿಕಾರ ಅಥವಾ ಚುನಾವಣೆ ಎದುರಿಸಬಹುದು ಎಂದು ಅಭಿಪ್ರಾಯ ನೀಡಿತ್ತು. ಇದನ್ನು ಬಹುಮತದ ಆಧಾರದಲ್ಲಿ ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿಯು ಅಕ್ಟೋಬರ್ 14ರ ಸಭೆಯಲ್ಲಿ ಒಪ್ಪಿಕೊಂಡು, ಈ ಸಂಬಂಧ ಸಂವಹನವನ್ನು ಎಲ್ಲಾ ಸದಸ್ಯರಿಗೆ ಕಳುಹಿಸಿಕೊಟ್ಟಿತ್ತು. ಈ ನಡುವೆ, ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಎ ವಿ ಶಶಿಧರ್ ಅವರು ಕೆಎಸ್‌ಸಿಎ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಿ, ವಿಚಾರಣಾಧೀನ ನ್ಯಾಯಾಲಯದಲ್ಲಿ ತಡೆ ಪಡೆದಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಲೋಧಾ ಸಮಿತಿ ತೀರ್ಪಿನ ಪ್ರಕಾರ ಯಾವುದೇ ಕ್ರಿಕೆಟ್ ಸಂಸ್ಥೆಯಲ್ಲಿ ಯಾರಾದರೂ ಒಂಭತ್ತು ವರ್ಷಗಳಿಗೆ ಮೀರಿ ಅಧಿಕಾರದಲ್ಲಿರುವಂತಿಲ್ಲ. ಆದರೆ, ಕೆಎಸ್‌ಸಿಎಯಲ್ಲಿ 18 ವರ್ಷದವರೆಗೆ ಅಧಿಕಾರದಲ್ಲಿರುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿತ್ತು. ಅರ್ಜಿದಾರರ ಪರವಾಗಿ ವಕೀಲ ಸೂರಜ್ ಸಂಪತ್ ವಕಾಲತ್ತು ವಹಿಸಿದ್ದು, ಹಿರಿಯ ವಕೀಲ ಬಿ ಕೆ ಸಂಪತ್ ಕುಮಾರ್ ಅವರು ಕೆಎಸ್‌ಸಿಎ ಪರವಾಗಿ ವಾದಿಸಿದ್ದರು.
ಈ ಮಧ್ಯೆ, ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ, ಕಾರ್ಯದರ್ಶಿ ಸಂತೋಷ್ ಮೆನನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಿ ಎಸ್ ಅರುಣ್, ಕೋಟಾ ಕೋದಂಡ ಮತ್ತು ತಿಲಕ್ ನಾಯ್ಡು ಅವರ ಆಯ್ಕೆ ಪ್ರಶ್ನಿಸಿ ಬಿ ಎನ್ ಮಧುಕರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.
ಕೆಎಸ್‌ಸಿಎ ಹಾಲಿ ನಿಯಮ, ನಿಬಂಧನೆ ಮತ್ತು ಬೈಲಾವನ್ನು ಕಡ್ಡಾಯವಾಗಿ ಪಾಲಿಸಿ ಚುನಾವಣೆ ನಡೆಸುವಂತೆ ನಿರ್ದೇಶಿಸಿದೆ. ವಿನಯ್ ಮೃತ್ಯುಂಜಯ, ಸಂತೋಷ್ ಮೆನನ್, ಡಿ ಎಸ್ ಅರುಣ್, ಕೋಟಾ ಕೋದಂಡ ಮತ್ತು ತಿಲಕ್ ನಾಯ್ಡು 2019ರಲ್ಲಿ ಆಯ್ಕೆಯಾಗಿದ್ದು, ಅವರ ಅವಧಿಯು 2022ರಲ್ಲೇ ಮುಕ್ತಾಯವಾಗಿದೆ. ಹೀಗಾಗಿ, ಯಾವುದೇ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿದೆ.