ಗೌರಿ ಗಣೇಶ, ಈದ್‌ ಮಿಲಾದ್‌ ಮೆರವಣಿಗೆ ವೇಳೆ ಡಿಜೆ, ಧ್ವನಿವರ್ಧಕ ನಿಷೇಧ: ಪೊಲೀಸ್‌ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್‌

“ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಲೋಪಗಳಿಲ್ಲ” ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.
ಗೌರಿ ಗಣೇಶ, ಈದ್‌ ಮಿಲಾದ್‌ ಮೆರವಣಿಗೆ ವೇಳೆ ಡಿಜೆ, ಧ್ವನಿವರ್ಧಕ ನಿಷೇಧ: ಪೊಲೀಸ್‌ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್‌
Published on

ಗೌರಿ–ಗಣೇಶ ಹಬ್ಬ, ಈದ್ ಮಿಲಾದ್‌ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಡಿಜೆ (ಡಿಸ್ಕ್‌ ಜಾಕಿ) ಹಾಗೂ ಧ್ವನಿ ವರ್ಧಕ ಬಳಕೆ ನಿಷೇಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶನಿವಾರ ವಜಾಗೊಳಿಸಿದೆ.

ಆಗಸ್ಟ್‌ 14ರಂದು ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆ ಪದಾಧಿಕಾರಿಯಾದ ಚಾಮರಾಜಪೇಟೆಯ ಶಂಕರ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಲೋಪಗಳಿಲ್ಲ” ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.

“ವಸತಿ ಪ್ರದೇಶದಲ್ಲಿ ಶಬ್ದದ ಮಟ್ಟ ಹಗಲಿನ ವೇಳೆ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಮಟ್ಟಕ್ಕೆ ನಿರ್ಬಂಧಿಸಲಾಗಿದೆ. ಆದ್ದರಿಂದ, ಸಾರ್ವಜನಿಕ ಡಿಜೆ ಮತ್ತು ಸೌಂಡ್ ಸಿಸ್ಟಮ್‌ನ ಬಳಕೆಯನ್ನು ಒಪ್ಪಿಕೊಳ್ಳುವುದು ಈ ನ್ಯಾಯಾಲಯಕ್ಕೆ ಕಷ್ಟ” ಎಂದು ಪೀಠ ಹೇಳಿದೆ.

Also Read
ಪಿಒಪಿ ಗಣೇಶ ಮೂರ್ತಿಗಳಿಗೆ ನಿರ್ಬಂಧ: ಸರ್ಕಾರಿ ಆದೇಶದ ಅನುಷ್ಠಾನದ ಭರವಸೆ ವ್ಯಕ್ತಪಡಿಸಿದ ಹೈಕೋರ್ಟ್‌

"ಶಬ್ದ ಮಾಲಿನ್ಯ ನಿಯಮಗಳು–2000ಕ್ಕೆ ಅನುಗುಣವಾಗಿ ಮಾರ್ಗದರ್ಶಿ ಸೂತ್ರ ಹೆಣೆಯುವುದನ್ನು ಬಿಟ್ಟು ಈ ರೀತಿ ವ್ಯಾಪಕ ಕಾರ್ಯಾದೇಶ ಹೊರಡಿಸಿರುವುದು ಸಾಂವಿಧಾನಿಕವಾಗಿ ಕೊಡಮಾಡಿರುವ ನಮ್ಮ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಸೌಂಡ್ ಸಿಸ್ಟಮ್‌ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಆದರೆ, ಬಳಕೆಯನ್ನು ನಿರ್ಬಂಧಿಸುವುದು ಸಮಂಜಸ ಕ್ರಮವಲ್ಲ" ಎಂದು ಅರ್ಜಿದಾರರು ಸುತ್ತೋಲೆಯನ್ನು ಆಕ್ಷೇಪಿಸಿದ್ದರು.

Kannada Bar & Bench
kannada.barandbench.com