ಮಾಹಿತಿ ಮರೆ ಮಾಚಿದ ಆರೋಪದ ಮೇಲೆ ವಿಕಲಚೇತನ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಆದೇಶ ರದ್ದುಪಡಿಸಿ, ಉದ್ಯೋಗಿಯನ್ನು ಸೇವೆಗೆ ಮರುನಿಯೋಜಿಸಲು ನಿರ್ದೇಶಿಸಿದ್ದ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವು ಎತ್ತಿಹಿಡಿದಿದೆ.
ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆ ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಎಸ್ ರಾಚಯ್ಯ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
“ಸೇವೆಯಿಂದ ವಜಾಗೊಳಿಸಿರುವ ಕ್ರಮವು ಉದ್ಯೋಗಿಯ ಭವಿಷ್ಯಕ್ಕೆ ಕಳಂಕ ತರುತ್ತದೆ. ಇದರಿಂದ ಅವರನ್ನು ಸೇವೆ ಮರುನಿಯೋಜಿಸಲು ಏಕ ಸದಸ್ಯ ಪೀಠ ಹೊರಡಿಸಿರುವ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ವಿಕಲಚೇತನ ಉದ್ಯೋಗಿಯೊಬ್ಬರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 2023ರಲ್ಲಿ ಜ್ಯೂನಿಯರ್ ಅಸೋಸಿಯೇಟ್ (ಗ್ರಾಹಕ ಸಹಾಯ) ಉದ್ಯೋಗಕ್ಕೆ ನೇಮಕಗೊಂಡಿದ್ದರು. ಆದರೆ, ಈ ಹಿಂದೆ ಒಂಭತ್ತು ತಿಂಗಳ ಅವಧಿಗೆ ಕರ್ತವ್ಯ ನಿರ್ವಹಿಸಿದ್ದ ಬ್ಯಾಂಕ್‌ನಲ್ಲಿ ನಿಗದಿತ ಮಾರ್ಗಸೂಚಿ ಪಾಲಿಸದೆ ಗ್ರಾಹಕರ ಖಾತೆಗೆ ಲೂಸ್-ಲೀಫ್ ಚೆಕ್ ನೀಡಿದ್ದ ಹಿನ್ನೆಲೆಯಲ್ಲಿ ವಂಚನೆಯಿಂದ ಹಣ ವರ್ಗಾವಣೆಯಾಗಿತ್ತು. ಈ ತಪ್ಪಿಗೆ ಸಣ್ಣ ಪ್ರಮಾಣದ ಶಿಕ್ಷೆಗೆ ಅವರು ಒಳಗಾಗಿದ್ದರು. ಈ ವಿಚಾರವನ್ನು ನೇಮಕಾತಿ ವೇಳೆ ಮಾಹಿತಿ ನೀಡಿಲ್ಲ ಎಂಬ ಆರೋಪದ ಮೇಲೆ ಅವರನ್ನು ಸೇವೆಯಿಂದ ವಜಾಗೊಳಿಸಿ ಎಸ್‌ಬಿಐ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉದ್ಯೋಗಿಯು ಪ್ರಕರಣ ಸಂಬಂಧ ತಮ್ಮ ಅಹವಾಲು ಆಲಿಸದೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆಕ್ಷೇಪಿಸಿದ್ದರು. ಏಕ ಸದಸ್ಯ ಪೀಠವು ಬ್ಯಾಂಕಿನ ಆದೇಶ ರದ್ದುಪಡಿಸಿತ್ತು. ಜೊತೆಗೆ, ಅರ್ಜಿದಾರರನ್ನು ಸೇವೆಗೆ ಮರುನಿಯೋಜಿಸಬೇಕು. ಪ್ರಕರಣ ಕುರಿತು ಅರ್ಜಿದಾರರ ವಾದ ಆಲಿಸಿದ ನಂತರ ಕಾನೂನು ಪ್ರಕಾರ ಆದೇಶಿಸಲು ಬ್ಯಾಂಕ್ ಸ್ವತಂತ್ರವಾಗಿದೆ ಎಂದು ಪೀಠ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾಂಕ್ ಮೇಲ್ಮನವಿ ಸಲ್ಲಿಸಿತ್ತು.
ಎಸ್‌ಬಿಐ ಪರ ವಕೀಲ ಟಿ ಪಿ ಮುತ್ತಣ್ಣ ವಾದಿಸಿದ್ದರು. ಉದ್ಯೋಗಿ ಪರ ವಕೀಲ ಎಚ್ ಸುನೀಲ್ ಕುಮಾರ್ ವಾದಿಸಿದ್ದರು.