Chief Justice N V Anjaria and Justice T G Shivashankare Gowda
Chief Justice N V Anjaria and Justice T G Shivashankare Gowda

ಜಾತಿ ಗಣತಿ ವರದಿ ಸ್ವೀಕಾರಕ್ಕೆ ಆಕ್ಷೇಪ: ನಾಳೆ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌

ಕಾಂತರಾಜು ನೇತೃತ್ವದಲ್ಲಿ ಸಮಿತಿ ರಚಿಸಿ, ಸಮೀಕ್ಷೆ ನಡೆಸಲು ಆದೇಶಿಸಿತ್ತು. ಫೆ. 29ರಂದು (ಇಂದು) ವರದಿ ಸಲ್ಲಿಸಲಾಗುತ್ತಿದೆ ಎಂಬ ಮಾಹಿತಿ ಅರ್ಜಿದಾರರಿಗೆ ಲಭ್ಯವಾಗಿದ್ದು, ವರದಿ ಸಲ್ಲಿಕೆ ಮಾಡಿದರೆ ಅರ್ಜಿ ಅಮಾನ್ಯವಾಗಲಿದೆ ಎಂದು ಉಲ್ಲೇಖ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ (ಕೆಎಸ್‌ಸಿಬಿಸಿ) ಅಧ್ಯಕ್ಷರಾಗಿದ್ದ ಎಚ್‌ ಕಾಂತರಾಜು ತಮ್ಮ ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಸಲ್ಲಿಕೆ ತಡೆಗೆ ಕೋರಿದ್ದ ಅರ್ಜಿಯ ವಿಚಾರಣೆಯನ್ನು ನಾಳೆ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಕೆಎಸ್‌ಸಿಬಿಸಿ ಹಾಲಿ ಅಧ್ಯಕ್ಷರಾದ ಕೆ ಜಯಪ್ರಕಾಶ್‌ ಹೆಗ್ಡೆ ಅವರು ಇಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಓದನಹಳ್ಳಿಯ ವಕೀಲ ಓ ಕೆ ರಘು ಪರವಾಗಿ ಹಾಜರಾಗಿದ್ದ ವಕೀಲ ಅಭಿಷೇಕ್‌ ಕುಮಾರ್ ಅವರು ತುರ್ತಾಗಿ ಮಧ್ಯಂತರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠದ ಮೆಮೊ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತು. ರಾಜ್ಯ ಸರ್ಕಾರವು ಕಾಂತರಾಜು ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ಸಮೀಕ್ಷೆ ನಡೆಸಲು ಆದೇಶಿಸಿತ್ತು. ಫೆಬ್ರವರಿ 29ರಂದು ವರದಿ ಸಲ್ಲಿಸಲಾಗುತ್ತಿದೆ ಎಂಬ ಮಾಹಿತಿ ಅರ್ಜಿದಾರರಿಗೆ ಲಭ್ಯವಾಗಿದ್ದು, ವರದಿ ಸಲ್ಲಿಕೆ ಮಾಡಿದರೆ ಅರ್ಜಿಯು ಅಮಾನ್ಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿದ್ದು, ಪ್ರಕರಣವನ್ನು ಪರಿಗಣಿಸಬೇಕು ಎಂದು ಮೆಮೊದಲ್ಲಿ ಕೋರಲಾಗಿದೆ.

ಅರ್ಜಿದಾರರ ಕೋರಿಕೆ ಏನು?

ಕಾಂತರಾಜು ಅವರ ನೇತೃತ್ವದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ವರದಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಆದೇಶಿಸಬೇಕು. ಕರ್ನಾಟಕ ಹಿಂದುಳಿದ ವರ್ಗಗಳ (ತಿದ್ದುಪಡಿ) ಕಾಯಿದೆ 2014ರ ಸೆಕ್ಷನ್‌ 3ರ ಮೂಲಕ ಸೇರ್ಪಡಿಸಲಾಗಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯಿದೆ 1995ರ ಸೆಕ್ಷನ್‌ 9(ಐ) ಅನ್ನು ರದ್ದುಪಡಿಸಬೇಕು. ಎಲ್ಲಾ ಸಮುದಾಯಗಳ ಜಾತಿ ಗಣತಿ ನಡೆಸುವಂತೆ 2014ರ ಜನವರಿ 23ರಂದು ಸರ್ಕಾರ ಮಾಡಿರುವ ಆದೇಶ ಅಸಾಂವಿಧಾನಿಕ ಎಂದು ಘೋಷಿಸಬೇಕು. ಸರ್ಕಾರದ ಆದೇಶದ ಅನ್ವಯ ಕಾಂತರಾಜು ಸಮಿತಿ ಮಾಡಿರುವ ಜಾತಿ ಗಣತಿ ಸಮೀಕ್ಷೆಯು ಸ್ವೇಚ್ಛೆಯಿಂದ ಕೂಡಿದ್ದು ಅಸಾಂವಿಧಾನಿಕ ಎಂದು ಆದೇಶಿಸಿಬೇಕು. ಕಾಂತರಾಜು ಸಮಿತಿ ಸಂಗ್ರಹಿಸಿರುವ ದತ್ತಾಂಶ ಆಧರಿಸಿ ಕ್ರಮವಹಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೇ, ಕಾಂತರಾಜು ಸಮಿತಿಯು ನಡೆಸಿರುವ ಜಾತಿ ಸಮೀಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸದಂತೆ ರಾಜ್ಯ‌ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮಧ್ಯಂತರ ಪರಿಹಾರ ಕೋರಿದ್ದಾರೆ.

Kannada Bar & Bench
kannada.barandbench.com