ನಿಮ್ಮನ್ನು ಬಹಳಷ್ಟು ಸಹಿಸಿಕೊಂಡಿರುವೆ: ಚಂಡೀಗಢ ಎನ್‌ಸಿಎಲ್‌ಟಿ ಪೀಠದ ಸದಸ್ಯರ ನಡುವೆ ಕಾವೇರಿದ ಮಾತು

ತಾಂತ್ರಿಕ ಸದಸ್ಯ ಈ ಹಿಂದೆಯೂ ನ್ಯಾಯಾಂಗ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಘಟನೆಗೆ ಸಾಕ್ಷಿಯಾದ ಹೆಸರು ಹೇಳಲಿಚ್ಚಿಸದ ವಕೀಲರೊಬ್ಬರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದರು.
ಡಾ.ಪಟಿಬಂಡ್ಲಾ ಸತ್ಯನಾರಾಯಣ ಪ್ರಸಾದ್, ಉಮೇಶ್ ಕುಮಾರ್ ಶುಕ್ಲಾ
ಡಾ.ಪಟಿಬಂಡ್ಲಾ ಸತ್ಯನಾರಾಯಣ ಪ್ರಸಾದ್, ಉಮೇಶ್ ಕುಮಾರ್ ಶುಕ್ಲಾ

ಚಂಡೀಗಢದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ನ್ಯಾಯಾಂಗ ಮತ್ತು ತಾಂತ್ರಿಕ ಸದಸ್ಯರು ಪರಸ್ಪರ ತೀವ್ರ ವಾಗ್ವಾದದಲ್ಲಿ ತೊಡಗಿರುವ ವೀಡಿಯೊ ಸಾಮಾಜಿಕ ಮಾಧ್ಯಮ ಮತ್ತು ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ವೈರಲ್ ಆಗಿದೆ.

ಪ್ರಕರಣಗಳನ್ನು ನಡೆಸುವ ರೀತಿ ಬಗ್ಗೆ ನ್ಯಾಯಾಂಗ ಸದಸ್ಯ ಡಾ.ಪಟಿಬಂಡ್ಲಾ ಸತ್ಯನಾರಾಯಣ ಪ್ರಸಾದ್ ಮತ್ತು ತಾಂತ್ರಿಕ ಸದಸ್ಯ ಉಮೇಶ್ ಕುಮಾರ್ ಶುಕ್ಲಾ ಅವರ ನಡುವೆ ಮಾತಿನ ಚಕಮಕಿ ನಡೆದಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

"ಇದೇನು? ಪ್ರತಿದಿನ ನೀವು ಹೀಗೆ ಮಾಡುತ್ತಿದ್ದೀರಿ. ಸ್ವಲ್ಪ ಮಿತಿ ಇರಬೇಕು. ನೀವು ಇದನ್ನು ಸದಾ ಮಾಡಲು ಸಾಧ್ಯವಿಲ್ಲ. ನಾನು ನಿಮ್ಮನ್ನು ಬಹಳಷ್ಟು ಸಹಿಸಿಕೊಂಡಿದ್ದೇನೆ" ಎಂದು ಪ್ರಸಾದ್ 3 ನಿಮಿಷ 22 ಸೆಕೆಂಡುಗಳ ವೀಡಿಯೊದಲ್ಲಿ ಶುಕ್ಲಾ ಅವರಿಗೆ ಹೇಳುತ್ತಿರುವುದು ಕಂಡುಬರುತ್ತದೆ. ಇದು ಜನವರಿಯಲ್ಲಿ ನಡೆದ ವಿಚಾರಣೆಯೊಂದರ ವೀಡಿಯೊ ಆಗಿದೆ.

ದೃಶ್ಯದಲ್ಲಿ ಶುಕ್ಲಾ ಅವರ ಪ್ರತಿಕ್ರಿಯೆ ಕೇಳುವುದಿಲ್ಲವಾದರೂ, ಪ್ರಸಾದ್ ಅವರು ಶುಕ್ಲಾ ಅವರನ್ನು ಉದ್ದೇಶಿಸಿ "ನೀವು ವಕೀಲ ಸಮುದಾಯದಲ್ಲಿ ಯಾರನ್ನಾದರೂ ಕೇಳಿ... ಪ್ರತಿದಿನ ನೀವು ಅನಗತ್ಯವಾಗಿ ... ಜನ. ನಿಮಗೇನು ಸ್ಪಷ್ಟೀಕರಣ ಬೇಕೋ ಅದನ್ನು ಓದಿಬಿಡಿ. ಅವರು [ವಕೀಲರು] ಅದನ್ನು ಪಾಲಿಸುತ್ತಾರೆ, ಅಷ್ಟೇ, ಅಲ್ಲಿಗೆ ಪ್ರಕರಣ ಮುಕ್ತಾಯವಾಗುತ್ತದೆ. ನಾನಿದನ್ನು ಮಾಡಬೇಕಿತ್ತು, ನೀವದನ್ನು ಮಾಡಬೇಕಿತ್ತು ಎಂದು ಹೇಳಬೇಡಿ" ಎನ್ನುತ್ತಾರೆ.

"ನಾನು ನ್ಯಾಯಾಲಯದ ನಿಯಂತ್ರಕನೇ ವಿನಾ ನೀವಲ್ಲ. ನ್ಯಾಯಾಂಗ ಸದಸ್ಯ ನ್ಯಾಯಾಲಯದ ನಿಯಂತ್ರಕನಾಗಿರುತ್ತಾನೆ... ನೀವು ಪ್ರಕರಣವನ್ನು ಯಾವ ಮಟ್ಟಕ್ಕಾದರೂ ಕೊಂಡೊಯ್ಯಿರಿ. ನೀವು ಹೀಗೆ ಮಾತನಾಡಲಾಗದು. ನಾನು ನಿಮ್ಮನ್ನು ಬಹಳ ಹೆಚ್ಚೇ ಸಹಿಸಿಕೊಂಡಿದ್ದೇನೆ. ನಾನು ಇಲ್ಲಿಯವರೆಗೂ ನಿಮ್ಮನ್ನು ತುಂಬಾ ಸಹಿಸಿಕೊಂಡಿದ್ದೇನೆ. ಪ್ರತಿ ಬಾರಿಯೂ ನಿಮಗೆ ಅರ್ಥವೇ ಆಗುವುದಿಲ್ಲ" ಎಂದು ಹೇಳುತ್ತಾರೆ.

ಅಂತಿಮವಾಗಿ, ಪ್ರಸಾದ್ ಅವರು ನ್ಯಾಯಾಂಗ ಸದಸ್ಯರೊಟ್ಟಿಗೆ ಕೆಲಸ ಮಾಡಬೇಕು ಎಂದು ಶುಕ್ಲಾ ಅವರಿಗೆ ಕಿವಿಮಾತು ಹೇಳುವುದು ಕೇಳಿಸುತ್ತದೆ. "ಇದು ಸರಿಯಾದ ಹಾದಿಯಲ್ಲ. ದಯವಿಟ್ಟು ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ" ಎಂದು ಪ್ರಸಾದ್ ಹೇಳುತ್ತಿರುವುದು ಕಂಡುಬರುತ್ತದೆ.

2019ರಲ್ಲಿ ನ್ಯಾಯಾಂಗ ಸದಸ್ಯರಾಗಿ ಎನ್‌ಸಿಎಲ್‌ಟಿಗೆ ಸೇರುವ ಮುನ್ನ ಪ್ರಸಾದ್ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾನೂನು ಸಲಹೆಗಾರರಾಗಿದ್ದರೆ, ಶುಕ್ಲಾ ಅವರು ಕಳೆದ ವರ್ಷ ಜುಲೈನಲ್ಲಿ ಮಂಡಳಿಗೆ ನೇಮಕಗೊಳ್ಳುವ ಮೊದಲು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವೆಚ್ಚ ಇಲಾಖೆಯಲ್ಲಿ ಮುಖ್ಯ ಸಲಹೆಗಾರರಾಗಿದ್ದರು.

ತಾಂತ್ರಿಕ ಸದಸ್ಯ ಈ ಹಿಂದೆಯೂ ನ್ಯಾಯಾಂಗ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಘಟನೆಗೆ ಸಾಕ್ಷಿಯಾದ ಹೆಸರು ಹೇಳಲಿಚ್ಚಿಸದ ವಕೀಲರೊಬ್ಬರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದರು.

ಅಲ್ಲದೆ ಎನ್‌ಸಿಎಲ್‌ಟಿ ಚಂಡೀಗಢ ಪೀಠದಲ್ಲಿ ಎರಡು ನ್ಯಾಯಾಲಯಗಳಿದ್ದರೂ ಒಂದು ಮಾತ್ರ ಕೆಲಸ ಮಾಡುತ್ತಿದೆ. ಪರಿಣಮ ಒಂದು ನ್ಯಾಯಾಲಯ ಬೆಳಗಿನ ಹೊತ್ತು ಪ್ರಕರಣ ಆಲಿಸಿದರೆ ಇನ್ನೊಂದು ನ್ಯಾಯಾಲಯ ಮಧ್ಯಾಹ್ನ ಕೆಲಸ ಮಾಡುತ್ತದೆ. ಕೇವಲ ಅರ್ಧ ದಿನ ಕಾಲಾವಕಾಶ ಇರುವಂತಹ ಸಂದರ್ಭದಲ್ಲಿ ನ್ಯಾಯಾಲಯದ ನಿಯಂತ್ರಕರು ಅಂದರೆ ನ್ಯಾಯಾಂಗ ಸದಸ್ಯರು ದಾವೆ ಪಟ್ಟಿಯನ್ನು ಅತ್ಯಂತ ತ್ವರಿತವಾಗಿ ಮುಂದುವರೆಸಲು ಬಯಸುತ್ತಾರೆ. ಮನವಿಗಳನ್ನು ಆಲಿಸುವುದು ಪೂರ್ಣಗೊಳ್ಳದ ಕಾರಣ ಕೊನೆಗೆ ಅದನ್ನು ಮುಂದೂಡಲಾಗುತ್ತದೆ. ನ್ಯಾಯಾಂಗ ಸದಸ್ಯರು ಪೂರ್ಣಗೊಂಡ ಪ್ರಕರಣಗಳಲ್ಲಿ ಸಮಯ ಬಳಸಿಕೊಳ್ಳಲು ಆದ್ಯತೆ ನೀಡುತ್ತಾರೆ ಎಂದು ವಕೀಲರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com