ಮಾಹಿತಿ ಆಯುಕ್ತ ಹೀರಾಲಾಲ್ ಸಮರಿಯಾ ಅವರನ್ನು ನೂತನ ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಕೇಂದ್ರ ಸರ್ಕಾರ (ಸಿಐಸಿ) ನೇಮಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಸಮರಿಯಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಕ್ಟೋಬರ್ 3 ರಂದು ಮಾಜಿ ಸಿಐಸಿ ಯಶವರ್ಧನ್ ಕುಮಾರ್ ಸಿನ್ಹಾ ಅವರು ನಿವೃತ್ತರಾಗಿದ್ದರು.
ಸಮರಿಯಾ ಅವರು ನವೆಂಬರ್ 7, 2020 ರಂದು ಕೇಂದ್ರ ಮಾಹಿತಿ ಆಯೋಗದಲ್ಲಿ ಮಾಹಿತಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.
ನಿವೃತ್ತ ಐಎಎಸ್ ಅಧಿಕಾರಿ ಸಮರಿಯಾ ಅವರು ಈ ಹಿಂದೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಆಡಳಿತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಪಾರ ಪರಿಣತಿ ಹೊಂದಿದ್ದಾರೆ.
ಮಾಹಿತಿ ಆಯುಕ್ತರ ಹುದ್ದೆ ಖಾಲಿ ಇರಿಸುವುದರಿಂದ ಮಾಹಿತಿ ಹಕ್ಕು ಕಾಯಿದೆ ನಿಷ್ಕ್ರಿಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಈಚೆಗೆ ಬೇಸರ ವ್ಯಕ್ತಪಡಿಸಿತ್ತು. ಶೀಘ್ರವೇ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಕ್ಟೋಬರ್ 30ರಂದು ರಾಜ್ಯ ಸರ್ಕಾರಗಳಿಗೆ ಅದು ನಿರ್ದೇಶನ ನೀಡಿತ್ತು.