ಇ ಡಿ ಪ್ರಕರಣದಲ್ಲಿ ಬಂಧನ ಪ್ರಶ್ನಿಸಿ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿ ಪರಿಗಣನೆಗೆ ಸುಪ್ರೀಂ ನಕಾರ

ಸೊರೇನ್ ಅವರ ಮನವಿ ಪರಿಗಣಿಸಲು ತಾನು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ರಜಾಕಾಲೀನ ಪೀಠ ತಿಳಿಸಿತು.
Hemant Soren, ED, SC
Hemant Soren, ED, SC

ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ [ಹೇಮಂತ್ ಸೊರೆನ್ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಸೊರೇನ್‌ ತಮ್ಮ ಬಂಧನ ಪ್ರಶ್ನಿಸಿ ಹಾಗೂ ಜಾಮೀನು ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸಮಾನಾಂತರ ಪರಿಹಾರ ಬಯಸಿದರು. ಆದರೆ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಸಂಜ್ಞೇಯ ಪರಿಗಣನೆಗೆ ತೆಗೆದುಕೊಂಡಿತ್ತು ಎಂಬುದನ್ನು ಅವರು ಸುಪ್ರೀಂ ಕೋರ್ಟ್‌ಗೆ ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಅವರ ಮನವಿ ಪರಿಗಣಿಸಲು ಬಯಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ರಜಾಕಾಲೀನ ಪೀಠ ತಿಳಿಸಿತು.

“ಪ್ರಕರಣವನ್ನು ಸಂಜ್ಞೇಯ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು ಎಂದು ಎಲ್ಲಿಯೂ ಏಕೆ ಉಲ್ಲೇಖಿಸಿಲ್ಲ. ಸಂಜ್ಞೇಯಕ್ಕೆ ತೆಗೆದುಕೊಂಡಿರುವುದನ್ನು ಏಕೆ ಬಹಿರಂಗಪಡಿಸಿಲ್ಲ” ಎಂದು ಸೊರೇನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ನ್ಯಾಯಾಲಯ ಕೇಳಿತು. ಇಲ್ಲದಿದ್ದರೆ ಪ್ರಕರಣ ವಜಾಗೊಳಿಸುವುದಾಗಿ ನ್ಯಾಯಾಲಯ ಹೇಳಿದ ನಂತರ ಸಿಬಲ್ ಅಂತಿಮವಾಗಿ ಮನವಿ ಹಿಂಪಡೆಯಲು ನಿರ್ಧರಿಸಿದರು.

ಹಾಗೆ ಮಾಹಿತಿ ನಿಡದೆ ಇದ್ದುದ್ದು ತನ್ನ ತಪ್ಪೇ ಹೊರತು ಕಕ್ಷಿದಾರರದ್ದಲ್ಲ ಎಂದು ಸಿಬಲ್‌ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಬಂಧಿತ ವ್ಯಕ್ತಿ (ಸೊರೇನ್‌) ಪ್ರಾಮಾಣಿಕವಾಗಿ ವರ್ತಿಸುತ್ತಿಲ್ಲ ಎಂದು ನ್ಯಾಯಾಲಯ ನುಡಿದಾಗ ಸಿಬಲ್‌ “ಅವರು ಬಂಧನದಲ್ಲಿದ್ದು ನಮ್ಮ ಸಂಪರ್ಕದಲ್ಲಿಲ್ಲ. ಇದು ಅವರ ತಪ್ಪಲ್ಲ” ಎಂದರು.

ಸೊರೇನ್‌ ಸಾಮಾನ್ಯ ವ್ಯಕ್ತಿಯಲ್ಲ ಎಂದು ನುಡಿದ ನ್ಯಾಯಾಲಯ ಅರ್ಜಿ ಹಿಂಡೆಯುವಿರೋ ಇಲ್ಲವೇ ವಜಾಗೊಳಿಸಲೋ ಎಂದು ಪ್ರಶ್ನಿಸಿತು. ಆಗ ಸಿಬಲ್‌ ಹಿಂಪಡೆಯುವುದಾಗಿ ತಿಳಿಸಿದರು.

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೊರೇನ್‌ ಅವರನ್ನು ಬಂಧಿಸಿತ್ತು. ಇದರಿಂದಾಗಿ ಜನವರಿ 31 ರಂದು ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

Kannada Bar & Bench
kannada.barandbench.com