ಭಾರತದ ಸಂವಿಧಾನದಡಿ ಶ್ರೀಲಂಕಾದ ನ್ಯಾ. ನವಾಜ್‌ ಮೂಲಭೂತ ಹಕ್ಕು ಜಾರಿಗೊಳಿಸಲು ಕೋರಲಾಗದು: ಹೈಕೋರ್ಟ್‌ನಲ್ಲಿ ಗೂಗಲ್‌ ವಾದ

ನ್ಯಾಯಮೂರ್ತಿ ನವಾಜ್‌ ಅವರು ಮೂಲಭೂತ ಹಕ್ಕುಗಳು ಅಥವಾ ಮರೆಯುವ ಹಕ್ಕನ್ನು ಜಾರಿಗೊಳಿಸಲು ಕೋರಲಾಗದು ಎಂದು ವಾದಿಸಿದ ಗೂಗಲ್.‌
Justice AHMD Nawaz at a conference recently held in Goa, India
Justice AHMD Nawaz at a conference recently held in Goa, India
Published on

ಶ್ರೀಲಂಕಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ್‌ ನವಾಜ್‌ ಅವರು ತನ್ನ ವಿರುದ್ಧದ ಎಲ್ಲಾ ಮಾನಹಾನಿ ಸುದ್ದಿ/ಲೇಖನ ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಊರ್ಜಿತತ್ವವನ್ನು ಗೂಗಲ್‌ ಬುಧವಾರ ಪ್ರಶ್ನಿಸಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿತು.

ನ್ಯಾಯಮೂರ್ತಿ ನವಾಜ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ನಡೆಸಿತು.

ಗೂಗಲ್‌ ಪ್ರತಿನಿಧಿಸಿದ್ದ ವಕೀಲ ಮನು ಕುಲಕರ್ಣಿ ಅವರು “ಮರೆಯುವ ಹಕ್ಕು ಭಾರತದಲ್ಲಿ ಡಿಜಿಟಲ್ ಡೇಟಾವನ್ನು ನಿಯಂತ್ರಿಸುವ ಕಾನೂನಿನ ಸ್ಪಷ್ಟ ಭಾಗವಲ್ಲ. ಹೀಗಾಗಿ, ನ್ಯಾ. ನವಾಜ್‌ ಅವರು ಮರೆಯುವ ಹಕ್ಕನ್ನು (ಕೆಲ ಸಂದರ್ಭದಲ್ಲಿ ತಮ್ಮ ಮಾಹಿತಿಯನ್ನು ಆನ್‌ಲೈನ್‌ನಿಂದ ತೆಗೆದು ಹಾಕುವುದು) ಉಲ್ಲೇಖಿಸಲಾಗದು. ಈ ಹಿಂದೆ ಮರೆಯುವ ಹಕ್ಕು ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆಯಲ್ಲಿ ಸೇರ್ಪಡೆಯಾಗಿತ್ತು. ಆದರೆ, ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯಿದೆಯಲ್ಲಿ ಅದನ್ನು ಅಡಕಗೊಳಿಸಲಾಗಿಲ್ಲ. ಈ ಹಕ್ಕನ್ನು ನಾಗರಿಕರಿಗೆ ನೀಡಲು ಒಪ್ಪಿಲ್ಲ, ಮರೆಯುವ ಹಕ್ಕನ್ನೇ ಮರೆಯಲಾಗಿದೆ” ಎಂದರು.

“ಶ್ರೀಲಂಕಾದವರಾದ ನ್ಯಾ. ನವಾಜ್‌ ಅವರು ಭಾರತದ ಸಂವಿಧಾನದಡಿ ಮೂಲಭೂತ ಹಕ್ಕು ಜಾರಿಗೊಳಿಸಲು ಕೋರಲಾಗದು. ಏಕೆಂದರೆ ಆ ಹಕ್ಕಗಳು ಭಾರತದ ವ್ಯಾಪ್ತಿಯಲ್ಲಿ ನೆಲೆಸಿರುವ ಜನರಿಗೆ ಮಾತ್ರ ಅನ್ವಯಿಸುತ್ತವೆ” ಎಂದರು.

“ನ್ಯಾ. ನವಾಜ್‌ ಅವರು ಮೊದಲಿಗೆ ಸಿವಿಲ್‌ ನ್ಯಾಯಾಲಯದ ಮೊರೆ ಹೋಗದೇ ಅವರು ಸಾಂವಿಧಾನಿಕ ನ್ಯಾಯಾಲಯಕ್ಕೆ ಬರುವ ಉದ್ದೇಶದಿಂದ ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ಪಕ್ಷಕಾರರನ್ನಾಗಿಸಿದ್ದಾರೆ. ನೈಜ ಅಹವಾಲು ಇದ್ದರೆ ಅವರು ಮೊದಲಿಗೆ ಸಿವಿಲ್‌ ನ್ಯಾಯಾಲಯದ ಮೊರೆ ಹೋಗಬೇಕೆ ವಿನಾ ಸಾಂವಿಧಾನಿಕ ನ್ಯಾಯಾಲಯವಾದ ಹೈಕೋರ್ಟ್‌ಗಲ್ಲ” ಎಂದರು.

ನ್ಯಾ. ನವಾಜ್‌ ಅವರನ್ನು ಪ್ರತಿನಿಧಿಸಿದ್ದ ವಕೀಲ ಪ್ರಭಾಕರನ್‌ ಅವರು “ನ್ಯಾ. ನವಾಜ್‌ ಅವರು ಯಾವುದೇ ನಷ್ಟ ಪರಿಹಾರ ಕೋರುತ್ತಿಲ್ಲವಾದ್ದರಿಂದ ಅವರು ಸಿವಿಲ್‌ ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಮಾನಹಾನಿ ಸುದ್ದಿಗಳನ್ನು ತೆಗೆಯಬೇಕು ಎಂದಷ್ಟೇ ನ್ಯಾ. ನವಾಜ್‌ ಕೋರುತ್ತಿರುವುದು” ಎಂದರು.

“ನ್ಯಾ. ನವಾಜ್‌ ಅವರು ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಹಕ್ಕನ್ನೂ ಪ್ರಸ್ತಾಪಿಸಬಹುದು. ಇದರಡಿ ಬರುವ ʼವ್ಯಕ್ತಿʼ ಪದವು ಭಾರತೀಯರಿಗಷ್ಟೇ ಅಲ್ಲದೇ ವಿದೇಶಿಯರಿಗೂ ಅನ್ವಯಿಸುತ್ತದೆ. ಭಾರತದಲ್ಲಿ ಗೂಗಲ್‌ ಕಚೇರಿ ಹೊಂದಿರುವುದರಿಂದ ಆಕ್ಷೇಪಾರ್ಹ ಸುದ್ದಿಗಳನ್ನು ತೆಗೆಯಲು ಕೋರಲು ನ್ಯಾ. ನವಾಜ್‌ ಅವರಿಗೆ ಸುಲಭವಾಗಿದೆ. ನ್ಯಾ. ನವಾಜ್‌ ಅವರು ಭಾರತಕ್ಕೆ ಹೊಸಬರೇನು ಅಲ್ಲ, ಶೈಕ್ಷಣಿಕ ವಿಚಾರಗಳಿಗಾಗಿ ಅವರು ಲೌಲಿ ಪ್ರೊಫೆಶನಲ್‌ ಯೂನಿವರ್ಸಿಟಿಗೆ ಬಂದಿದ್ದು, ವಿವಿಧ ಸಮಾರಂಭಗಳಲ್ಲೂ ಭಾಗಿಯಾಗಿದ್ದಾರೆ” ಎಂದರು.

“ನ್ಯಾ. ನವಾಜ್‌ ಅವರು ಶ್ರೀಲಂಕಾ ನ್ಯಾಯಾಂಗದ ಭಾಗವಾಗಿರುವುದರಿಂದ ಅವರು ಅಲ್ಲಿನ ನ್ಯಾಯಾಲಯಗಳಲ್ಲಿ ಮಾನಹಾನಿ ಸುದ್ದಿ ತೆಗೆಯುವಂತೆ ಕೋರಲಾಗದು. ಭಾರತವು ತಟಸ್ಥ ವ್ಯಾಪ್ತಿಯಾಗಿರುವುದರಿಂದ ಇಲ್ಲಿ ನ್ಯಾ. ನವಾಜ್‌ ಅರ್ಜಿ ಸಲ್ಲಿಸಿದ್ದಾರೆ” ಎಂದರು.

ಕೇಂದ್ರ ಸರ್ಕಾರದ ಪರವಾಗಿ ವಕೀಲ ಮಧುಕರ್‌ ದೇಶಪಾಂಡೆ ಹಾಜರಿದ್ದರು.  

Kannada Bar & Bench
kannada.barandbench.com