ನಟ ದರ್ಶನ್‌ ಮನೆ ಊಟದ ಕೋರಿಕೆಯನ್ನು ನ್ಯಾಯಾಲಯ ನಿರಾಕರಿಸಿದ್ದೇಕೆ?

ದರ್ಶನ್‌ ಪರ ವಕೀಲರು, ಅರ್ಜಿದಾರರಿಗೆ ಜೈಲಿನ ಊಟ ಜೀರ್ಣವಾಗುತ್ತಿಲ್ಲ. ಜ್ವರ ಹಾಗೂ ಅತಿಸಾರ ಭೇದಿ ಸಮಸ್ಯೆ ಕಾಣಿಸಿಕೊಂಡಿದೆ. ಕೊಲೆ ಆರೋಪ ಹೊತ್ತಿರುವ ಮಾತ್ರಕ್ಕೆ ವಿಚಾರಣಾಧೀನ ಕೈದಿಯ ಮೂಲಭೂತ ಹಕ್ಕು ಕಸಿಯಬಾರದು ಎಂದು ಕೋರಿದ್ದರು.
Darshan
Darshan
Published on

ಮನೆ ಊಟ, ಹಾಸಿಗೆ, ಬಟ್ಟೆಯನ್ನು ತರಿಸಿಕೊಳ್ಳಲು ಅನುಮತಿಸುವಂತೆ ಕೋರಿ ನಟ ದರ್ಶನ್‌ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್‌ ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಅವರ ಪೀಠ ಗುರುವಾರ ತೀರ್ಪು ಪ್ರಕಟಿಸಿತ್ತು.

ಕರ್ನಾಟಕ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ-201ರ ಅಧಿನಿಯಮ 728ರ ಪ್ರಕಾರ ಕೊಲೆ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ನ್ಯಾಯಾಂಗ ಬಂಧನದಲ್ಲಿರು ಇತರೆ ವಿಚಾರಣಾಧೀನ ಕೈದಿಗಳು ಸ್ವಂತ ಖರ್ಚಿನಿಲ್ಲಿ ಬಟ್ಟೆ, ಹಾಸಿಗೆ, ಚಪ್ಪಲಿ, ಆಹಾರ, ಸ್ಪೂನ್‌, ತಟ್ಟೆ ಹಾಗೂ ಕಪ್‌ ಇನ್ನಿತರ ವಸ್ತುಗಳನ್ನು ಪಡೆಯಲು ಅವಕಾಶವಿರುತ್ತದೆ. ಅದರಂತೆ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್‌ ಮನೆಯಿಂದ ಊಟ, ಬಟ್ಟೆ ಹಾಗೂ ಹಾಸಿಗೆ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ ಎಂದು ನ್ಯಾಯಾಲಯ ಆದೇಶಲ್ಲಿ ಹೇಳಿದೆ.

ಕೇಂದ್ರ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಅವರ 2024ರ ಜು.22ರಂದು ಸಲ್ಲಿಸಿರುವ ವರದಿ ಪ್ರಕಾರ, ದರ್ಶನ್‌ ಅವರಿಗೆ ಬೆನ್ನಿನ ಕೆಳಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಇದರಿಂದ ದರ್ಶನ್‌ ಬಲ ಕಾಲುಗಳಲ್ಲಿ, ಬಲಗೈ ಮುಂದೋಳಿನಲ್ಲಿಯೂ ನೋವು ಕಾಣಿಸುತ್ತಿದೆ. ಈ ಸಮಸ್ಯೆಗೆ ಜೈಲಿನ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಜ್ವರದಿಂದ ಬಳಲಿದ್ದು, ಬೆಡ್‌ರೆಸ್ಟ್‌ ಮತ್ತು ಪೌಷ್ಟಿಕಾಂಶದ ಆಹಾರ ಸೇವನೆಗೆ ವೈದ್ಯಾಧಿಕಾರಿ ಸೂಚಿಸಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಲಾಗಿದೆ.

ಜೈಲಿನ ಆಹಾರ ಸೇವನೆಯಿಂದ ಅಜೀರ್ಣ ಸಮಸ್ಯೆ ಉಂಟಾಗಿದ್ದು ದರ್ಶನ್‌ಗೆ ಅತಿಸಾರ ಬೇಧಿಯಾಗುತ್ತಿದೆ ಎಂಬ ಅರ್ಜಿದಾರರು ಹೇಳಿದ್ದಾರೆ. ವೈದ್ಯಾಧಿಕಾರಿಗಳು ತಮ್ಮ ವರದಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ ಹೊರತು, ಅತಿಸಾರ ಬೇದಿ ಮತ್ತು ಅಜೀರ್ಣ ಸಮಸ್ಯೆಯ ಪರಿಹಾರಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಆಸ್ಪತ್ರೆಯ ಆಹಾರ ಸೇವನೆ ಅಥವಾ ಇತರೆ ಆಹಾರ ಸೇವನೆ ಕುರಿತಂತೆ ಯಾವುದೇ ಶಿಫಾರಸು ಮಾಡಿಲ್ಲ. ಜೈಲಿನಲ್ಲಿ ಒದಗಿಸುತ್ತಿರುವ ಆಹಾರದ ಪಟ್ಟಿಯನ್ನು ಗಮನಿಸಿದರೆ ಪೌಷ್ಟಿಕಾಂಶದ ಆಹಾರವನ್ನೇ ಕೈದಿಗಳಿಗೆ ನೀಡಲಾಗುತ್ತಿದೆ. ಹಾಗಾಗಿ, ಜೈಲು ವೈದ್ಯಾಧಿಕಾರಿಗಳ ಸಲಹೆಯಂತೆ ಸದ್ಯ ಒದಗಿಸುತ್ತಿರುವ ಪೌಷ್ಟಿಕಾಂಶದ ಆಹಾರವೇ ದರ್ಶನ್‌ಗೆ ಸಾಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ಸಂದರ್ಭದಲ್ಲಿ ದರ್ಶನ್‌ ಪರ ವಕೀಲರು, ಅರ್ಜಿದಾರರಿಗೆ ಜೈಲಿನ ಊಟ ಜೀರ್ಣವಾಗುತ್ತಿಲ್ಲ. ಜ್ವರ ಹಾಗೂ ಅತಿಸಾರ ಭೇದಿ ಸಮಸ್ಯೆ ಕಾಣಿಕೊಂಡು ದೇಹದ ತೂಕ ಇಳಿದಿದೆ. ವಿಚಾರಣಾಧೀನ ಕೈದಿ ಜೈಲು ಅಧಿಕಾರಿ ಅನುಮತಿ ಮೇಲೆ ತನ್ನ ಖರ್ಚಿನಿಂದ ಮನೆಯಿಂದ ಊಟ, ಸ್ವಂತ ಹಾಸಿಗೆ, ಬಟ್ಟೆ ಮತ್ತು ದಿನ ಪತ್ರಿಕೆಗಳನ್ನು ಪಡೆಯಲು ಜೈಲು ನಿಯಮಗಳ ಪ್ರಕಾರ ಅವಕಾಶವಿದೆ. ಕೈದಿಗೆ ಹೊರಗಡೆಯಿಂದ ಊಟ ತರಿಸಿಕೊಳ್ಳಲು ಕೈಲಾಗದ ಪರಿಸ್ಥಿತಿಯಲ್ಲಿ ಆತನಿಗೆ ಜೈಲಿನ ಆಹಾರ ನೀಡಬಹುದು. ಕೊಲೆ ಆರೋಪ ಹೊತ್ತಿರುವ ಮಾತ್ರಕ್ಕೆ ವಿಚಾರಣಾಧೀನ ಕೈದಿಯ ಮೂಲಭೂತ ಹಕ್ಕು ಕಸಿಯಬಾರದು. ಹಾಗಾಗಿ, ದರ್ಶನ್‌ ಅವರ ಮನವಿ ಪುರಸ್ಕರಿಸಬೇಕು ಎಂದು ಕೋರಿದ್ದರು.

ಪ್ರಾಸಿಕ್ಯೂಷನ್‌ ಪರ ಎಸ್‌ಪಿಪಿ ಜೈಲು ಆಹಾರದಿಂದ ದರ್ಶನ್‌ಗೆ ಯಾವುದೇ ತೊಂದರೆ ಇಲ್ಲ. ಜ್ವರ ಇದ್ದರೆ ಜೈಲಿನ ವೈದ್ಯಾಧಿಕಾರಿಯ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬಹುದು. ಜೈಲು ವೈದ್ಯಕೀಯ ವರದಿಯಲ್ಲಿ ವಿಶ್ರಾಂತಿಗೆ ಹೇಳಿದ್ದಾರೆ. ಅದರ ಪ್ರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವಿಶ್ರಾಂತಿ ತೆಗೆದುಕೊಳ್ಳಬಹುದು. ಆಸ್ಪತ್ರೆಯ ಆಹಾರ ಹಾಗೂ ಮೊಟ್ಟೆ ಪಡೆಯಬಹುದು. ಕೊಲೆ ಆರೋಪಿಗೆ ಹೊರಗಿನ ಆಹಾರ ಹಾಗೂ ಹಾಸಿಗೆಗೆ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ ಎಂದು ವಾದಿಸಿದ್ದರು.

Kannada Bar & Bench
kannada.barandbench.com